ಆಸ್ತಿ ವಿಚಾರವಾಗಿ ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು

KannadaprabhaNewsNetwork | Published : Jan 20, 2024 2:02 AM

ಸಾರಾಂಶ

ಕೆಲ ಪಟ್ಟಭದ್ರ ಹಿತಾಶಕ್ತಿಗಳು ಚಾಮರಾಜನಗರ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷನಾದ ನನ್ನ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಎಂದು ಸಂಘದ ಅಧ್ಯಕ್ಷ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಕೆಲ ಪಟ್ಟಭದ್ರ ಹಿತಾಶಕ್ತಿಗಳು ಚಾಮರಾಜನಗರ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷನಾದ ನನ್ನ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಎಂದು ಸಂಘದ ಅಧ್ಯಕ್ಷ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಕೆಲವರು ನನ್ನ ಹಾಗೂ ನನ್ನ ಕುಟುಂಬದ ಮತ್ತು, ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಏಳಿಗೆಯನ್ನು ಸಹಿಸದೇ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿರುವವರ ಮೇಲೆ ನಾನು ಈಗಾಗಲೇ ನ್ಯಾಯಾಲಯದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಮತ್ತು ಮಾನನಷ್ಟ ಮೊಕದ್ದಮೆ ಹೂಡುವ ಸಂಬಂಧ ವಕೀಲರ ಜೋತೆಯಲ್ಲಿ ಚರ್ಚೆ ಮಾಡಿದ್ದೇನೆ ಎಂದರು.

ಯಾವುದೇ ಕಾರಣಕ್ಕೂ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿಯನ್ನು ನನ್ನ ತಮ್ಮನ ಮಕ್ಕಳಿಗೆ ಕ್ರಯ ಮಾಡಿಲ್ಲ, ೧೯೬೭ನೇ ಪುರಸಭಾ ಎಂಎಆರ್-೧೯ರ ದಾಖಲಾತಿಯಂತೆ ಅಸೆಸ್‌ಮೆಂಟ್ ೯೪೮/೯೧೪ ರಂತೆ, ಪೂರ್ವ ಪಶ್ಚಿಮ ೨೩೦ ಅಡಿ, ದಕ್ಷಿಣೋತ್ತರ ೨೬೦ ಅಡಿಗಳ ನಿವೇಶನದಲಿ ಹಾಸ್ಟಲ್ ಕಟ್ಟಡ ಹಾಗೂ ಕಟ್ಟಡದ ಅಕ್ಕಪಕ್ಕ ಖಾಲಿ ನಿವೇಶನವಿದ್ದು, ಈಗಲೂ ಅದೇ ರೀತಿ ಇದ್ದು, ಸಂಘದ ಅಭಿವೃದ್ಧಿಗಾಗಿ ಖಾಲಿ ನಿವೇಶನದಲ್ಲಿ ೩೦ ೫೦ ಅಡಿ ಅಳತೆಯ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತಿದೆ ಹೊರತು ಯಾರ ಹೆಸರಿಗೂ ಪರಭಾರೆ ಮಾಡಿಲ್ಲ, ಅಸೆಸ್‌ಮೆಂಟ್ ಆದ ಮೇಲೆ ಸರ್ವೆ ನಂ. ತೆಗೆದುಹಾಕದೇ ಇರುವುದೇ ಇಷ್ಟೆಕ್ಕೆಲ್ಲಾ ಕಾರಣ ಎಂದರು. ಸದರಿ ಆಸ್ತಿಗೆ ಯಾರು ಕೂಡ ಅತಿಕ್ರಮಿಸಲು ನಾನು ಅವಕಾಶ ನೀಡಿರುವುದಿಲ್ಲ. ಮತ್ತು ನಾನು ನನ್ನ ಸಾರ್ವಜನಿಕ ಜೀವನದಲ್ಲಿ ನನ್ನ ಸಮುದಾಯದ ಏಳಿಗೆಗೆ ದುಡಿಯುತ್ತೇನೆ ಹೊರತು ನನ್ನ ಸಮುದಾಯಕ್ಕೆ ಅನ್ಯಾಯ ಮಾಡುವ ಕೆಲಸ ಮಾಡಿರುವುದಿಲ್ಲ ಎಂದರು.

ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘವನ್ನು ೩೦ ರಿಂದ ೪೦ ವರ್ಷದಿಂದ ನವೀಕರಣವನ್ನು ಸಹ ಮಾಡಿಸಿರಲಿಲ್ಲ, ಕೆಲವರು ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಹೊರಟಿದ್ದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಹಳೆಯ ಸಂಘಗಳನ್ನು ನವೀಕರಣ ಮಾಡಿಕೊಂಡು ಸಮುದಾಯದ ಜನರ ಅಭಿವೃದ್ಧಿಗಾಗಿ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಮಾಡಿದ್ದರು, ಆಗ ನಾನೇ ಈ ಸಂಘವನ್ನು ನವೀಕರಣ ಮಾಡಿಸಿಕೊಂಡು ಮುಂದುವರಿಸಿದ್ದೇನೆ, ಈ ಸಂಘದಲ್ಲಿ ನನ್ನ ಕುಟುಂಬಸ್ಥರು ಯಾರು ನಿರ್ದೇಶಕರಾಗಿಲ್ಲ, ಸದಸ್ಯರಾಗಲು ಎಲ್ಲರಿಗೂ ಮುಕ್ತ ಅವಕಾಶ ನೀಡಿದ್ದೇನೆ ಎಂದರು.

ನನ್ನ ಕುಟುಂಬದ ಯಾರಾದರೂ ಆಗಲೀ ಅತಿಕ್ರಮ ಪ್ರವೇಶ ಮಾಡಿದ್ದರೇ ನಾನು ಯಾವುದೇ ಕಾನೂನು ಕ್ರಮಕ್ಕೂ ಸಿದ್ಧನಿದ್ದೇನೆ, ನಮ್ಮ ಸಂಘದ ಉತ್ತಮ ಬೆಳವಣಿಗೆಯನ್ನು ನೋಡಿ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಡಿ ಮುಂದುವರೆದ ಕಾಮಗಾರಿಗಾಗಿ ೧೦ ಲಕ್ಷ ಅನುದಾನ ನೀಡಿದ್ದಾರೆ ಎಂದರು.

ಶ್ರೀನಿಧಿ ಕುದರ್ ಮಾತನಾಡಿ, ಸರ್ವೆ ನಂ. ೨೯೫/೪ಸಿಯಲ್ಲಿ ಖರೀದಿಸಿರುವ ೮ ಗುಂಟೆ ಜಮೀನಿಗೂ ಸಂಘದ ಆಸ್ತಿಗೂ ಯಾವುದೇ ಸಂಬಂಧವಿಲ್ಲ, ಈಗಾಗಲೇ ನಾವು ಈ ಆಸ್ತಿ ಸಂಘಕ್ಕೆ ಸೇರಿದ್ದರೆ ಖಾತೆ ಮಾಡಿಕೊಡುವುದು ಬೇಡ, ಸೇರದಿದ್ದರೆ ಮಾಡಿ ಕೊಡಿ ಎಂದು ಅರ್ಜಿ ಸಲ್ಲಿಸಿದ್ದೇವೆ, ಆದರೂ ಕೆಲವರು ನಮ್ಮ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ರಾಜಗೋಪಾಲ್, ಖಜಾಂಚಿ ಸಿ.ಕೆ. ರವಿಕುಮಾರ್, ನಿರ್ದೇಶಕರಾದ ರಾಮಸಮುದ್ರ ನಾಗರಾಜು, ಮಹೇಶ್ ಗುಂಬಳ್ಳಿ, ಶಿವರಾಜ್ ಇದ್ದರು.

Share this article