ಬಿಸಿಲಿನಂತೆ ಏರುತ್ತಿದೆ ಕಬ್ಬು ಬೆಳೆಗಾರರ ಕಿಚ್ಚು!

KannadaprabhaNewsNetwork |  
Published : Oct 15, 2026, 02:00 AM IST
ಬೈಪಾಸ್‌ ರಸ್ತೆ ಬಂದ್‌ ಆಗಿದ್ದರಿಂದ ತೊಂದರೆ ಅನುಭವಿಸುತ್ತಿರುವ ಬೈಕ್‌ ಸವಾರ.  | Kannada Prabha

ಸಾರಾಂಶ

ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗಿನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಯರಿಕೊಪ್ಪ ಹಾಗೂ ತೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ್ದ ರೈತರಿಗೆ ಸಂಜೆ ವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗಲಿಲ್ಲ.

ಧಾರವಾಡ:

ಕಬ್ಬಿಗೆ ₹ 5500 ಬೆಂಬಲ ಬೆಲೆ ನಿಗದಿ, ಸ್ವಾಮಿನಾಥನ್‌ ವರದಿ ಜಾರಿ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಇಲ್ಲಿಯ ಯರಿಕೊಪ್ಪದ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಕಳೆದ ಎರಡು ದಿನಗಳಿಂದ ರೈತರು ಅಹೋರಾತ್ರಿ ಹೋರಾಟ ಮುಂದುವರಿಸಿದ್ದಾರೆ.

ಈ ವಿಷಯವಾಗಿ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗಿನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಯರಿಕೊಪ್ಪ ಹಾಗೂ ತೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ್ದ ರೈತರಿಗೆ ಸಂಜೆ ವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಹೋರಾಟವಾಗಿ ಪರಿವರ್ತಿಸಿದ ರೈತರು, ಯರಿಕೊಪ್ಪದ ಬಳಿ ಹೆದ್ದಾರಿ ಬದಿಯೇ ಅಡುಗೆ ಮಾಡಿ ಊಟ ಮಾಡಿ ಅಲ್ಲಿಯೇ ವಸತಿ ಮಾಡುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಬುಧವಾರ ಸಹ ಬಿಸಿಲು ಲೆಕ್ಕಿಸದೇ ಕೇಂದ್ರ ಸರ್ಕಾರ ಹಾಗೂ ಕೃಷಿ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಹೋರಾಟ ಮುಂದುವರಿದಿದ್ದು, ಸುತ್ತಲಿನ ಗ್ರಾಮಗಳ ಹಾಗೂ ಜಿಲ್ಲೆಗಳ ರೈತರು ಟ್ರ್ಯಾಕ್ಟರ್‌ಗಳ ಮೂಲಕ ಆಗಮಿಸಿ ಬೆಂಬಲ ಸೂಚಿಸಿದರು. ಬುಧವಾರ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸದೇ ಹೋದಲ್ಲಿ ವಿಮಾನ ನಿಲ್ದಾಣಕ್ಕೂ ಬೀಗ ಜಡಿದು ಪ್ರತಿಭಟಿಸಲು ಹಿಂಜರಿಯುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ಮಠಾಧೀಶರ ಬೆಂಬಲ:

ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಹೆದ್ದಾರಿಯಲ್ಲಿ ಧರಣಿ ಕುಳಿತ ರೈತರೊಂದಿಗೆ ತಾವು ಕುಳಿತು ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು. ರೈತರ ಬೇಡಿಕೆ ಈಡೇರಿಸದೇ ಖಾತೆ ನಿರ್ವಹಿಸಲು ಆಗದಿರುವ ಕೇಂದ್ರ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ಈ ಹೋರಾಟಕ್ಕೆ ಮಣಿಯದಿದ್ದರೆ ಹೆದ್ದಾರಿ ಬಂದ್‌ನ ಶಾಂತಿಯುತ ಹೋರಾಟ ಹಿಂಸೆಗೆ ತಿರುಗಲಿದೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಎಚ್ಚರಿಸಿದರು.

ಧರಣಿ ಸ್ಥಳಕ್ಕೆ ಡಿಸಿ ಭೇಟಿ:

ಯರಿಕೊಪ್ಪ ಬಳಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಜಿಲ್ಲಾಧಿಕಾರಿ ಸೇರಿ ಜನಪ್ರತಿನಿಧಿಗಳು ಭೇಟಿ ನೀಡಿಲ್ಲವೆಂದು ರೈತರ ಆರೋಪದ ಹಿನ್ನೆಲೆಯಲ್ಲಿ ಮಧ್ಯಾಹ್ನ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್. ಸ್ನೇಹಲ್‌ ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದರು. ನಿಮ್ಮ ಪ್ರತಿಭಟನೆಗೆ ಜಿಲ್ಲಾಡಳಿತದ ಸಹಕಾರವಿದೆ. ಬೇಡಿಕೆ ಈಡೇರಿಸುವ ಕುರಿತು ಅಧಿಕಾರಿ ಹಾಗೂ ಕೃಷಿ ವಿಜ್ಞಾನಿಗಳ ಮೂಲಕ ತೀರ್ಮಾನಿಸಬೇಕಿದ್ದು ಹೋರಾಟಗಾರರು ಸರ್ಕಾರಕ್ಕೆ ಸಮಯಾವಕಾಶ ನೀಡಬೇಕು. ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಬಂದ ದಾರಿಗೆ ಸುಂಕವಿಲ್ಲ...

ರೈತರು ಹೆದ್ದಾರಿಗೆ ಬ್ಯಾರಿಕೇಡ್‌ ಹಾಕಿದ್ದರಿಂದ ನೂರಾರು ಕಾರು, ಲಾರಿ ಹಾಗೂ ಸ್ಥಳೀಯ ಸವಾರರು ತೀವ್ರ ತೊಂದರೆ ಅನುಭವಿಸಿದರು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಹೋದರು. ಬೈಕ್ ಸವಾರರು ಬ್ಯಾರಿಕೇಡ್‌ ತಳ್ಳಿ ನುಗ್ಗುಲು ಯತ್ನಿಸಿದಾಗ ರೈತರು ಬೆದರಿಸಿ ಬ್ಯಾರಿಕೇಡ್‌ ಹಾಕಿದರು. ಬೈಪಾಸ್‌ನ ಹೋಗುವ-ಬರುವ ರಸ್ತೆ, ಸೇವಾ ರಸ್ತೆ ಮಾತ್ರವಲ್ಲದೇ ಕಲಘಟಗಿ ರಸ್ತೆ ಸಹ ಬಂದ್‌ ಮಾಡಿದ್ದರಿಂದ ಸವಾರರು ತೀವ್ರ ಸಮಸ್ಯೆ ಎದುರಿಸಿದರು. ತುರ್ತು ಕಾರ್ಯಗಳಿಗೆ ಹೋಗುವವರನ್ನು ಹೊರತುಪಡಿಸಿ ಬೇರೆಯವರಿಗೆ ಹೆದ್ದಾರಿ ಬಿಡದೆ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ಮಾತು ಆಡಿದರು. ಸಂಚಾರಿ ಟೆಂಟ್‌...

ಮಧ್ಯಾಹ್ನದ ಬಿಸಿಲು ಏರುತ್ತಿದ್ದಂತೆ ರೈತರು ಸರ್ವೀಸ್‌ ರಸ್ತೆಯಲ್ಲಿದ್ದ ಪೆಂಡಾಲ್‌ ಕಿತ್ತು ಹೆದ್ದಾರಿಯಲ್ಲಿ ತಾವು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಸ್ಥಳಾಂತರಿಸಿದರು. ಆದರೆ, ಹೆದ್ದಾರಿಯಲ್ಲಿ ಟೆಂಟ್‌ ಹಾಕಿದರೆ ನಿಯಮ ಉಲ್ಲಂಘನೆ ಆಗಲಿದ್ದು, ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಸ್ಪಿ ಗುಂಜನ್‌ ಆರ್ಯ ತಿಳಿಸಿದಾಗ ರೈತ ಮುಖಂಡರು ವಾಗ್ವಾದ ನಡೆಸಿದರು. ಬಳಿಕ ಟೆಂಟ್‌ನ್ನು ಮತ್ತದೆ ಸರ್ವೀಸ್‌ ರಸ್ತೆಗೆ ಸ್ಥಳಾಂತರಿಸಿದರು.ಹೋರಾಟ ನಿಲ್ಲುವುದಿಲ್ಲ

ಎರಡು ದಿನಗಳಿಂದ ಹಗಲು-ರಾತ್ರಿ ಎನ್ನದೇ ಹೆದ್ದಾರಿ ಮೇಲೆ ಧರಣಿ ಕುಳಿತ ರೈತರನ್ನು ಭೇಟಿಯಾಗಲು ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿಲ್ಲ. ಪೊಲೀಸ್‌ ಸಿಬ್ಬಂದಿ ಹೊರತುಪಡಿಸಿದರೆ ಯಾರು ರೈತರ ಬಗ್ಗೆ ಕಾಳಜಿ ತೋರದೆ ನಿರ್ಲಕ್ಷಿಸುತ್ತಿದ್ದಾರೆಂಬುದು ಸ್ಪಷ್ಟ. ಹೀಗಾಗಿ ಯಾವುದೇ ಸಮಸ್ಯೆ ಬಂದರು ನಮ್ಮ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ ಎಂದು ರೈತ ಮುಖಂಡ ಕುಮಾರ ಎಚ್ಚರಿಕೆ ನೀಡಿದರು.ಗಮನ ಸೆಳೆದ ಬಾಲಕ..

ಯರಿಕೊಪ್ಪದ ರೈತ ಬಸವರಾಜ ಸೇಬನ್ನವರ ಪುತ್ರ ವೀರಮಣಿ (12) ಸಹ ರೈತರ ಹೋರಾಟ ಬೆಂಬಲಿಸಿ ಪ್ರತಿಭಟಿಸುತ್ತಿದ್ದಾನೆ. ಎರಡು ದಿನಗಳಿಂದ ತಂದೆಯೊಂದಿಗೆ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿರುವ ಯುವಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರೈತ ಮುಖಂಡರೊಂದಿಗೆ ತಾನು ಸಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ವಿಶೇಷವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಲಿ: ಬೊಮ್ಮಾಯಿ
2ನೇ ದಿನವೂ ಕಬ್ಬು ಬೆಳೆಗಾರರ ಪ್ರತಿಭಟನೆ