ಈ ಬಾರಿ ‘ಪ್ರಶಾಂತ’ಗೆ ಅಂಬಾರಿ ಹೊರುವ ಜವಾಬ್ದಾರಿ

KannadaprabhaNewsNetwork |  
Published : Oct 15, 2026, 02:00 AM IST
ದಸರಾ ಆನೆ | Kannada Prabha

ಸಾರಾಂಶ

ದಸರಾ ಗಜಪಡೆಯ ಹಿರಿಯ ಸದಸ್ಯ, 54 ವರ್ಷದ ‘ಪ್ರಶಾಂತ’ ಆನೆಯು ತನ್ನ 18 ವರ್ಷಗಳ ಅನುಭವದ ಆಧಾರದ ಮೇಲೆ ಈ ಬಾರಿಯ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯೊಂದಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರಲು ಆಯ್ಕೆಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಗಜಪಡೆಯ ಹಿರಿಯ ಸದಸ್ಯ, 54 ವರ್ಷದ ‘ಪ್ರಶಾಂತ’ ಆನೆಯು ತನ್ನ 18 ವರ್ಷಗಳ ಅನುಭವದ ಆಧಾರದ ಮೇಲೆ ಈ ಬಾರಿಯ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯೊಂದಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊರಲು ಆಯ್ಕೆಯಾಗಿದೆ.

ಈ ಬಾರಿಯ ದಸರಾ ಮಹೋತ್ಸವಕ್ಕೆ ಬಂದ ಮೊದಲ ದಿನದಿಂದಲೂ ಪ್ರಶಾಂತ ಆನೆಯ ಹೆಸರು ಅಂಬಾರಿ ಹೊರುವ ಆನೆಗಳ ಪಟ್ಟಿಯಲ್ಲಿ ಚಾಲ್ತಿಯಲ್ಲಿದ್ದರೂ ಮುಂಚೂಣಿಯಲ್ಲಿ ಇರಲಿಲ್ಲ. ಮಹೇಂದ್ರ, ಧನಂಜಯ ಆನೆಗಳ ನಂತರ ಪ್ರಶಾಂತ ಆನೆಯ ಹೆಸರು ಪ್ರಸ್ತಾಪಿಸಲಾಗುತ್ತಿತ್ತು. ತಾಲೀಮಿನಲ್ಲಿ ಪಾಲ್ಗೊಂಡಿದ್ದ ಪ್ರಶಾಂತ ಆನೆಯು, ತನಗೆ ಒದಗಿ ಬಂದ ಅವಕಾಶದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಆನೆಗಳ ದೈಹಿಕ ಆರೋಗ್ಯ, ಭಾರ ಹೊರುವ ಸಾಮರ್ಥ್ಯ, ಬೆನ್ನಿನ ರಚನೆ, ನಡಿಗೆಯ ಸ್ಥಿರತೆ, ಸಹನಶಕ್ತಿ, ಸ್ವಭಾವ, ಹಿಂದಿನ ಅನುಭವ ಹಾಗೂ ತರಬೇತಿಯಲ್ಲಿನ ಕಾರ್ಯಕ್ಷಮತೆಯನ್ನು ಸಮಗ್ರವಾಗಿ ಪರಿಶೀಲಿಸಿ ಪ್ರಶಾಂತ ಆನೆಯನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ, ದಸರಾ ಗಜಪಡೆಗೆ ಈಗ ಪ್ರಶಾಂತ ಕ್ಯಾಪ್ಟನ್ ಆಗಿದ್ದು, ಮೀಸಲು ಅಂಬಾರಿ ಆನೆಯಾಗಿ ಆಯ್ಕೆ ಆಗಿರುವ ಧನಂಜಯ ವೈಸ್ ಕ್ಯಾಪ್ಟನ್ ಸ್ಥಾನ ಪಡೆದಿದೆ.

ಪ್ರಶಾಂತ ಆಯ್ಕೆ ಹಿಂದಿನ ಕಾರಣಗಳು:

ಪ್ರಶಾಂತ ಆನೆಯು ಕಳೆದ 18 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಅರಮನೆಯ ವಾತಾವರಣ, ಮೆರವಣಿಗೆಯ ಮಾರ್ಗ, ಜನಸಂದಣಿ, ವಾದ್ಯಘೋಷ ಹಾಗೂ ಮಾವುತರ ನಿರ್ದೇಶನಗಳಿಗೆ ಹೊಂದಿಕೊಂಡಿರುವ ಸುದೀರ್ಘ ಅನುಭವವು ಅದರ ಪ್ರಮುಖ ಸಾಮರ್ಥ್ಯವಾಗಿದೆ.

ಪ್ರಶಾಂತ ಆನೆಯ ಬೆನ್ನಿನ ಮೇಲ್ಭಾಗವು ತುಲನಾತ್ಮಕವಾಗಿ ಸಮತಟ್ಟಾಗಿದ್ದು, ಅಂಬಾರಿಯನ್ನು ಸ್ಥಿರವಾಗಿ ಮತ್ತು ಸಮತೋಲನದಿಂದ ಇರಿಸಲು ಅನುಕೂಲಕರವಾಗಿದೆ. ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆಯಲ್ಲಿ ಇದು ಅತ್ಯಂತ ಪ್ರಮುಖವಾದ ದೈಹಿಕ ವೈಶಿಷ್ಟ್ಯವಾಗಿದೆ.

ದುಬಾರೆ ಶಿಬಿರದ ಮೊದಲ ಅಂಬಾರಿ ಆನೆ ಪ್ರಶಾಂತ!

ದುಬಾರಿ ಶಿಬಿರದಿಂದ ಅಂಬಾರಿ ಹೊರಲು ಆಯ್ಕೆಯಾದ ಮೊದಲ ಆನೆ ಎಂಬ ಹೆಗ್ಗಳಿಕೆಗೆ ಪ್ರಶಾಂತ ಆನೆ ಪಾತ್ರವಾಗಿದೆ. ಇಷ್ಟು ವರ್ಷಗಳ ಕಾಲ ತಿತಿಮತಿ ಆನೆ ಶಿಬಿರದ ಬಲರಾಮ 14 ಬಾರಿ, ಬಳ್ಳೆ ಆನೆ ಶಿಬಿರದ ಅರ್ಜುನ ಆನೆಯು 8 ಬಾರಿ, ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು 6 ಬಾರಿ ಅಂಬಾರಿ ಹೊರುವ ಮೂಲಕ ಪಾರುಪತ್ಯ ಮೆರೆದಿದ್ದವು. ಆದರೆ, ಅತೀ ಹೆಚ್ಚು ಆನೆಗಳು ದಸರಾಗೆ ಬರುತ್ತಿದ್ದ ದುಬಾರೆ ಆನೆ ಶಿಬಿರದ ಆನೆಗಳಿಗೆ ಈವರೆಗೂ ಅಂಬಾರಿ ಹೊರುವ ಜವಾಬ್ದಾರಿ ಸಿಕ್ಕಿರಲಿಲ್ಲ. 2020 ರಿಂದ 2025 ರವರೆಗೆ ಅಭಿಮನ್ಯು ಆನೆಯು 6 ಬಾರಿ ಅಂಬಾರಿ ಹೊತ್ತಿತ್ತು. 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸಲಾಗಿತ್ತು. ಇದರೊಂದಿಗೆ ದಸರಾದಲ್ಲಿ ಪ್ರಶಾಂತ ಅಂಬಾರಿ ಹೊರಲಿರುವ 13ನೇ ಆನೆಯಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಲಿ: ಬೊಮ್ಮಾಯಿ
2ನೇ ದಿನವೂ ಕಬ್ಬು ಬೆಳೆಗಾರರ ಪ್ರತಿಭಟನೆ