ಮಲೆನಾಡ ಚಿನ್ನದ ಹುಡುಗಿ ಪ್ಯಾರಾ ಏಷಿಯನ್ ಗೇಮ್ಸ್ ಗೆ ಆಯ್ಕೆ

KannadaprabhaNewsNetwork |  
Published : Oct 15, 2026, 02:00 AM IST
ಪೋಟೋ | Kannada Prabha

ಸಾರಾಂಶ

ಚಿಕ್ಕಮಗಳೂರುಅಪ್ಪಟ ಗ್ರಾಮೀಣ ಪ್ರತಿಭೆಯಾದ ರಕ್ಷಿತಾ ರಾಜು ಸತತವಾಗಿ ಪ್ಯಾರ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪ್ರತಿನಿಧಿಸಿ ವೈಯಕ್ತಿಕ 1500 (ಟಿ11) ಮೀ. ಓಟ ವಿಭಾಗದಲ್ಲಿ 3 ಬಾರಿ ಚಿನ್ನದ ಪದಕಗಳಿಸಿ ಇದೀಗ ಭಾರತಕ್ಕಾಗಿ ಜಪಾನ್ ನಲ್ಲಿ ಇದೇ ಅ.18 ರಿಂದ 25 ರವರೆಗೆ ನಡೆಯಲಿರುವ ಪ್ಯಾರಾ ಐಚಿ ನಗೋ ಯ ಏಷ್ಯನ್ ಗೇಮ್ಸ್ ಗೆ ಆಯ್ಕೆ ಯಾಗಿರುವುದರಿಂದ ಚಿನ್ನದ ಕನಸು ಮತ್ತೊಮ್ಮೆ ಗರಿಗೆದರಿದೆ.

- 2028ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತಕ್ಕಾಗಿ ಪದಕ ಗೆಲ್ಲುವ ಗುರಿಜೋಸೆಫ್.ಎಂ.ಆಲ್ದೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅಪ್ಪಟ ಗ್ರಾಮೀಣ ಪ್ರತಿಭೆಯಾದ ರಕ್ಷಿತಾ ರಾಜು ಸತತವಾಗಿ ಪ್ಯಾರ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪ್ರತಿನಿಧಿಸಿ ವೈಯಕ್ತಿಕ 1500 (ಟಿ11) ಮೀ. ಓಟ ವಿಭಾಗದಲ್ಲಿ 3 ಬಾರಿ ಚಿನ್ನದ ಪದಕಗಳಿಸಿ ಇದೀಗ ಭಾರತಕ್ಕಾಗಿ ಜಪಾನ್ ನಲ್ಲಿ ಇದೇ ಅ.18 ರಿಂದ 25 ರವರೆಗೆ ನಡೆಯಲಿರುವ ಪ್ಯಾರಾ ಐಚಿ ನಗೋ ಯ ಏಷ್ಯನ್ ಗೇಮ್ಸ್ ಗೆ ಆಯ್ಕೆ ಯಾಗಿರುವುದರಿಂದ ಚಿನ್ನದ ಕನಸು ಮತ್ತೊಮ್ಮೆ ಗರಿಗೆದರಿದೆ.

ಮೂಡಿಗೆರೆಯ ಬಾಳೂರು ಗ್ರಾಮದ ಗುಡ್ನಳ್ಳಿ ರಕ್ಷಿತಾ ರಾಜು ತಂದೆತಾಯಿ ಆಸರೆಯಿಲ್ಲದೆ ಬೆಳೆದ ದಿಟ್ಟ ಹೆಣ್ಣುಮಗಳು ದೇಶದ ಕೀರ್ತಿ ಪತಾಕೆಯನ್ನು ಪ್ರಪಂಚದಾದ್ಯಂತ ಹಾರಿಸುತ್ತಿರುವುದು ಸಂತಸದ ವಿಷಯ. ಆಕೆ 2 ವರ್ಷವಿರುವಾಗಲೇ ತಾಯಿಯನ್ನು ಕಳೆದುಕೊಂಡಿದ್ದ ರಕ್ಷಿತಾಗೆ ಕೆಲವು ವರ್ಷಗಳಲ್ಲಿ ತಂದೆ ಕೂಡ ಅಗಲಿದರು. ಮೊದಲೇ ಕಿವಿ ಕೇಳದ, ಮಾತುಬಾರದ ದಿವ್ಯಾಂಗರಾದ ಅಜ್ಜಿ ಲಲಿತಾ ಅಂಧ ಮಗು ರಕ್ಷಿತಾರನ್ನು ಯಾವುದಾದರೂ ಆಶ್ರಮಕ್ಕೆ ಕೊಟ್ಟು ಬಿಡುವಂತೆ ಸಂಬಂಧಿಕರು ನೆರೆ ಹೊರೆಯವರು ಸಲಹೆ ನೀಡಿದಾಗಲೂ ಪಣತೊಟ್ಟು ಸಾಕಿದ್ದರು. ಇವರ ಈ ಸಾಧನೆ ಇನ್ನಷ್ಟು ದಿವ್ಯಾಂಗರಿಗೂ ಸಾಧಿಸುವ ಸ್ಫೂರ್ತಿಯ ಸೆಲೆ ಎಂದು ಆಶಾಕಿರಣ ಅಂಧ ಮಕ್ಕಳ ಪಾಠ ಶಾಲೆ ಪ್ರಾಂಶುಪಾಲ ಡಾ. ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತರಬೇತುದಾರ ರಾಹುಲ್ ಪ್ರತಿಕ್ರಿಯಿಸಿ ರಕ್ಷಿತಾ ರಾಜು ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಪಾಠಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಶಾಕಿರಣ ಸಂಸ್ಥೆಯಿಂದ ಆಯೋಜಿಸುವ ರಾಷ್ಟ್ರೀಯ ವಿಶೇಷ ಚೇತನರ ಐಬಿಎಸ್ಸಿ ಕ್ರೀಡಾ ಕೂಟದಲ್ಲಿ 2016ನೇ ವರ್ಷ ರಕ್ಷಿತಾ ನಮಗೆ ಪರಿಚಯವಾದರು. 400 ಮೀ. ಮತ್ತು 200 ಮೀ. ವಿಭಾಗದಲ್ಲಿ ಭಾಗವಹಿಸಿ ಪದಕ ಗಳಿಸಿದ್ದರು. ರಕ್ಷಿತಾರ ದೈಹಿಕ ಕ್ಷಮತೆ ಮತ್ತು ಸಾಮರ್ಥ್ಯ ಗಮನಿಸಿದ ನಾನು ನನ್ನ ಪತ್ನಿ ಅವರನ್ನು ಬೆಂಗಳೂರಿಗೆ ಕರೆತಂದು 1500ಮೀ (ಟಿ11) ಸ್ಪರ್ಧೆಗೆ ತರಬೇತಿ ನೀಡಲು ಪ್ರಾರಂಭಿಸಿದೆವು.ನಾನು ಆಗ ರಕ್ಷಿತಾಗೆ ನಿನ್ನನ್ನು ಏಷ್ಯನ್ ಗೇಮ್ಸ್ ನಲ್ಲಿ ಪದಕ ಗಳಿಸುವಂತೆ ಸಿದ್ಧಪಡಿಸುತ್ತೇನೆ ಎಂದು ಮಾತು ನೀಡಿದ್ದೆ, ಅದರಂತೆ 2018 ರಲ್ಲಿ ಇಂಡೋನೇಷಿಯಾ ಜಕಾರ್ತ್ ನಲ್ಲಿ ಆಯೋಜಿಸಿದ್ದ ಪ್ಯಾರ ಏಷ್ಯನ್ ಗೇಮ್ಸ್ ನಲ್ಲಿ 18ನೇ ವಯಸ್ಸಿನಲ್ಲಿ ಮೊದಲ ಪದಕ ಗಳಿಸಿದರು.

ಬಳಿಕ 2022ರಲ್ಲಿ 23ನೇ ವಯಸ್ಸಿನಲ್ಲಿ ಚೀನಾದ ಹ್ಯಾನ್ ಜೋ ದಲ್ಲಿ 2ನೇ ಚಿನ್ನದ ಪದಕ ಗಳಿಸಿ, ಪ್ಯಾರಿಸ್ ನಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ನಲ್ಲಿ 5ನೇ ಸ್ಥಾನಕ್ಕೆ ಗಳಿಸಿದ್ದರು. ಪ್ರಸ್ತುತ ಜಪಾನ್ ನಲ್ಲಿ ನಡೆಯಲಿರುವ ಪ್ಯಾರಾ ಏಷ್ಯನ್ ಗೇಮ್ಸ್ ಗೆ ಪುನರಾಯ್ಕೆ ಆಗಿದ್ದು ಸಂತಸ ತಂದಿದೆ. ಈಗಾಗಲೇ 2 ಪ್ಯಾರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿರುವ ರಕ್ಷಿತಾ ಹ್ಯಾಟ್ರಿಕ್ ಪದಕ ಗಳಿಸುವ ಗುರಿ ಇಟ್ಟುಕೊಂಡಿದ್ದು ಮುಂಬರಲಿರುವ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಪದಕ ಗಳಿಸುವ ಕನಸು ಹೊಂದಿದ್ದಾರೆ ಎಂದು ತಿಳಿಸಿದರು.ಕರ್ನಾಟಕ ಸರ್ಕಾರ ರಾಷ್ಟ್ರೀಯ ಅಥ್ಲೆಟಿಕ್ ನಲ್ಲಿ ಪದಕ ಗಳಿಸುವ ಕ್ರೀಡಾಪಟುಗಳಿಗೆ ಪ್ರಥಮ ಸ್ಥಾನಕ್ಕೆ 2 ಲಕ್ಷ , ದ್ವಿತೀಯ ಸ್ಥಾನಕ್ಕೆ 1 ಲಕ್ಷ, ತೃತೀಯ ಸ್ಥಾನಕ್ಕೆ 50 ಸಾವಿರ ಬಹುಮಾನ ಒದಗಿಸುತ್ತಿದ್ದು, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಥಾನ ಗಳನ್ನು ಗಳಿಸುವವರಿಗೆ 35, 25, 15 ಬಹುಮಾನದ ನಿಧಿಯನ್ನು ಹೆಚ್ಚಿಸಬೇಕೆಂದು ಈಚೆಗೆ ಏಷ್ಯನ್ ಗೇಮ್ಸ್ ನಲ್ಲಿ ಪದಕ ಗಳಿಸಿದ ಕ್ರೀಡಾ ಪಟುಗಳಿಂದ ಒತ್ತಾಯ ಕೇಳಿ ಬಂದ ಹಿನ್ನೆಲೆ ಸರ್ಕಾರ 1 ಕೋಟಿ, 75 ಲಕ್ಷ, 50 ಲಕ್ಷ ನಿಗದಿಪಡಿಸಿದ್ದು, ಈ ಪ್ರೋತ್ಸಾಹ ನಿಧಿ ಪ್ಯಾರ ಅಥ್ಲೆಟಿಕ್ ಕ್ರೀಡಾಪಟುಗಳಿಗೂ ಅನ್ವಯಿಸಿದ್ದಾರೆಯೇ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.

ರಕ್ಷಿತಾ ರಾಜು ಅವರ ಲೈಫ್ ಲೈನ್ ಪ್ರಾಯೋಜಕತ್ವ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗಡೆ ಮಾತನಾಡಿ ಪ್ರಸ್ತುತ 12 ದಿವ್ಯಾಂಗ ಕ್ರೀಡಾಪಟುವನ್ನು 3 ವರ್ಷಗಳಿಂದ ದತ್ತು ಪಡೆದು ಸರ್ಕಾರ ಕ್ರೀಡಾಪಟುಗಳ ಆಯ್ಕೆ ಯಾದ ನಂತರ ಕ್ರೀಡೆಗೆ ಭಾಗವಹಿಸಿ ವಾಪಸ್ಸು ಹಿಂತಿರುಗುವ ಖರ್ಚು ವೆಚ್ಚ ಭರಿಸುತ್ತದೆ. 2-3 ವರ್ಷಗಳಿಂದ ಪ್ರತಿದಿನದ ಖರ್ಚು ವೆಚ್ಚ ಸಂಸ್ಥೆ ನಿಭಾಯಿಸುತ್ತಿದೆ. ಸದೃಢ ಕ್ರೀಡಾಪಟುಗಳು ಮತ್ತು ಇನ್ನು ಸಾಕಷ್ಟು ಓದಲು ಆಸಕ್ತಿ ಇರುವ ವಿದ್ಯಾರ್ಥಿ ಗಳಿಗೂ ಸಂಸ್ಥೆ ಪ್ರಾಯೋಜಕತ್ವ ನೀಡಿದೆ. ದೇಶದ ಪ್ರಜೆಗಳಾದ ನಾವು ಸಮಾಜಕ್ಕೆ ನಮ್ಮಿಂದಾದ ಕೊಡುಗೆ ನೀಡುವುದು ಆದ್ಯ ಕರ್ತವ್ಯ ಎಂದರು.

-- ಬಾಕ್ಸ್--ಮೂಲಭೂತ ಸೌಕರ್ಯವೇ ಕೊರತೆ ಕ್ರೀಡೆಯಲ್ಲಿ ಅಪರಿಮಿತ ಸಾಧನೆಗೈದು ಕರ್ನಾಟಕ ಮತ್ತು ಭಾರತದ ಕೀರ್ತಿ ಜಗದಲ್ಲೆಡೆ ಮೊಳಗಿಸಿದ ರಕ್ಷಿತಾ ರಾಜು ರವರ ಮನೆಗೆ ತೆರಳಲು ಸುಸಜ್ಜಿತ ರಸ್ತೆ ಇಲ್ಲದೆ ತೋಟದ ಮಧ್ಯದ ಕಾಲುದಾರಿ ಅವಲಂಬಿಸಬೇಕಾಗಿದೆ. ಇತ್ತೀಚೆಗೆ ಮನೆಗೆ ರಕ್ಷಿತಾ ಭೇಟಿ ನೀಡಿದಾಗ ಜಾರಿ ಬಿದ್ದು ಗಾಯಗೊಂಡಿದ್ದರು. ಓರ್ವ ಕ್ರೀಡಾಪಟು ವೃತ್ತಿ ಜೀವನದಲ್ಲಿ ಗಾಯಗಳು ಎಷ್ಟರ ಮಟ್ಟಿಗೆ ಪರಿಣಾಮ ಪ್ರಭಾವ ಬೀರುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಅವರ ಮನೆಗೆ ವಿದ್ಯುತ್ ಸಂಪರ್ಕವೂ ಇಲ್ಲ ಎಂದು ಸ್ಥಳೀಯರು ಬೇಸರ ತಿಳಿಸಿದ್ದಾರೆ. ಪ್ರಸ್ತುತ ರಕ್ಷಿತ ಮನೆಗೆ ಓಡಾಟ ನಡೆಸಲು ಕಾಲ್ನಡಿಗೆ ದಾರಿಯನ್ನು ತೋಟದ ಮಾಲೀಕರು ಬಿಟ್ಟುಕೊಟ್ಟಿದ್ದು, ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಇಲ್ಲವೇ ರಕ್ಷಿತಾ ಅವರಿಗೆ ಸುಸಜ್ಜಿತ ನಿವೇಶನ ಒದಗಿಸಿ ಸಹಕರಿಸಿದರೆ ಅನುಕೂಲ ಎಂದು ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಮನವಿ ಮಾಡಿದ್ದಾರೆ.

-- ಬಾಕ್ಸ್--

ಚಿನ್ನದ ಪದಕ ಗಳಿಸುವುದು ಅತಿ ದೊಡ್ಡ ಕನಸು; ರಕ್ಷಿತಾಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದ ರಕ್ಷಿತಾ ರಾಜು ನನ್ನ ಸಾಧನೆಗೆ ಪೂರಕವಾಗಿ ಸ್ಪಂದಿಸಿ ತರಬೇತಿ ನೀಡಿದ ತರಬೇತು ದಾರ ರಾಹುಲ್ ಸರ್ ಮತ್ತು ಗೈಡ್ ರನ್ನರ್ ಗಳಾದ ತಬ್ರೇಜ್, ಗೋವಿಂದ್ ರವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದು ತನಗೆ ಪ್ರಾಯೋಜಕತ್ವ ನೀಡಿದ ಲೈಫ್ ಲೈನ್ ಸಂಸ್ಥೆಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ಪ್ರಸ್ತುತ ಜಪಾನ್ ಪ್ಯಾರಾ ಒಲಿಂಪಿಕ್ಸ್ ಆಯ್ಕೆಯಾಗಿರುವುದು ಸಂತಸ ತಂದಿದೆ. ದೇಶಕ್ಕಾಗಿ ಚಿನ್ನದ ಪದಕ ಗಳಿಸುವ ಗುರಿ ಹೊಂದಿದ್ದೇನೆ. ಪ್ರಧಾನ ಮಂತ್ರಿಗಳಿಗೆ ನಾನು ಈಗಾಗಲೇ ಭರವಸೆ ನೀಡಿದ್ದು 2028 ರಲ್ಲಿ ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಪ್ಯಾರಾ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗಳಿಸುವುದು ಅತಿ ದೊಡ್ಡ ಕನಸಾಗಿದೆ. ಬಿಎ ಪದವಿ ಪೂರ್ಣಗೊಳಿಸಿದ್ದು, ಐಎಎಸ್ ಪದವಿಗಳಿಸಿ ದೇಶ ಸೇವೆ ಮಾಡಬೇಕೆಂಬುದು ಮಹದಾಸೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಲಿ: ಬೊಮ್ಮಾಯಿ
2ನೇ ದಿನವೂ ಕಬ್ಬು ಬೆಳೆಗಾರರ ಪ್ರತಿಭಟನೆ