-ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಆರೋಪ
----------ಕನ್ನಡಪ್ರಭ ವಾರ್ತೆ ಯಾದಗಿರಿ
ಸರ್ಕಾರಿ ನೌಕರ ಬೇಡಿಕೆಯಂತೆ ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸುವ ಬದಲು ಬಿಜೆಪಿ ನೇತೃತ್ವದ ಸರ್ಕಾರ ಏಕೀಕೃತ ಪಿಂಚಣಿ (ಯುಪಿಎಸ್) ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು ಸರ್ಕಾರಿ ನೌಕರರಿಗೆ ಬಗೆದ ದ್ರೋಹ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಆರೋಪಿಸಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್, ಯುಪಿಎಸ್ ಎಂಬುದು ಕೊಡುಗೆಯಾಧಾರಿತ ಪಿಂಚಣಿ ಹೋಲುವಂತಿದ್ದು, ಇದು ನಿಸ್ಸಂಶಯವಾಗಿ ಒಪಿಎಸ್‌ಗೆ ವಿರುದ್ಧವಾಗಿದೆ. ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರದ ಬಿಜೆಪಿ ಸರ್ಕಾರ ಘೋಷಿಸಿದೆ ಎಂದಿದ್ದಾರೆ.
ಪಿಂಚಣಿ ಮೊತ್ತವನ್ನು ಹಳೆಯ ಪಿಂಚಣಿ ಯೋಜನೆಯ ಪ್ರಕಾರ ಕೊನೆಯ ಸಂಬಳದ ಮೂಲವೇತನ ಮತ್ತು ಡಿಎ ದಲ್ಲಿ ಶೇ.50ರಷ್ಟು ಎಂದು ಪರಿಗಣಿಸುವ ಬದಲಿಗೆ, ಇದೀಗ ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲವೇತನದ 50% ಎಂದು ಲೆಕ್ಕ ಹಾಕಲಾಗುತ್ತದೆ ಮತ್ತು ಹಳೆಯ ಪಿಂಚಣಿ ಯೋಜನೆಗೆ ವ್ಯತಿರಿಕ್ತವಾಗಿ ಕೇಂದ್ರದ ಡಿಎ ಮಾದರಿಯ ಬದಲಿಗೆ ಯುಪಿಎಸ್ ಅಡಿಯಲ್ಲಿನ ಪಿಂಚಣಿಯನ್ನು ಕೈಗಾರಿಕಾ ಡಿಎ ಮಾದರಿಗೆ ಲಿಂಕ್ ಮಾಡಲಾಗುತ್ತದೆ ಹಾಗೂ ಯುಪಿಎಸ್ ಪಿಂಚಣಿ ಪಡೆಯಲು ಕನಿಷ್ಠ 25 ವರ್ಷಗಳ ಅರ್ಹ ಸೇವೆಯ ನಿರ್ಬಂಧಗಳನ್ನು ನಿಗದಿಪಡಿಸಿದೆ ಇಲ್ಲವೇ ಅನುಪಾತದ ಆಧಾರದ ಮೇಲೆ ಪಿಂಚಣಿ ನೀಡಲಾಗುವುದು.ಹಳೆಯ ಪಿಂಚಣಿ ಯೋಜನೆಗೆ ಹೋಲಿಸಿದರೆ ಯುಪಿಎಸ್ ಅಡಿಯಲ್ಲಿ ಪಿಂಚಣಿ ಪ್ರಮಾಣವು ತುಂಬಾ ಕಡಿಮೆಯಾಗಿರುತ್ತದೆ ಹಾಗೂ ಇದು ಹೊಸ ಪಿಂಚಣಿ ಯೋಜನೆಯ ಮಾದರಿಯದ್ದೇ ಆಗಿರುತ್ತದೆ. ವಾಸ್ತವವಾಗಿ ಕೆಲವು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಲು ಹೊರಟಿದ್ದು, ದೇಶದಾದ್ಯಂತ ಕೇಂದ್ರ ಸರ್ಕಾರಿ ನೌಕರರು ನಡೆಸಿದ ಸುಧೀರ್ಘ ಚಳುವಳಿಯೇ ಕಾರಣವಾಗಿದ್ದು, ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಯುಪಿಎಸ್ ಅನ್ನು ಅನಿವಾರ್ಯವಾಗಿ ಘೋಷಿಸಲು ಮುಂದಾಯಿತು.
ಹಾಗೆಯೇ, ಇದೊಂದು ವಿಶ್ವಾಸಾರ್ಹ ಯೋಜನೆ ಎಂಬ ಹೆಸರಿನಲ್ಲಿ ಸರ್ಕಾರಿ ನೌಕರರನ್ನು ವಂಚಿಸುವ ಹೀನ ಕುತಂತ್ರದ ಕ್ರಮ ಹಾಗೂ ಯುಪಿಎಸ್ ಅನ್ನು ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳು ಅದನ್ನೇ ಜಾರಿಗೊಳಿಸಬಹುದೆಂಬ ಹುನ್ನಾರವನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ದೇಶದಾದ್ಯಂತ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಪ್ರಬಲ ಚಳುವಳಿ ಬೆಳೆಸುವಂತೆ ಸರ್ಕಾರಿ ನೌಕರರು ಅದರಲ್ಲೂ ವಿಶೇಷವಾಗಿ ಕೇಂದ್ರ ಸರ್ಕಾರಿ ನೌಕರರು ಮುಂಬರಬೇಕೆಂದು ಎಐಯುಟಿಯುಸಿ ಕರೆ ನೀಡುತ್ತದೆ ಎಂದು ತಿಳಿಸಿದ್ದಾರೆ.------31ವೈಡಿಆರ್3: ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್.