ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರದ ನಾಗವಳ್ಳಿ, ದೊಡ್ಡರಾಯಪೇಟೆ, ಕೋಡಿಉಗನೆ ಹಾಗೂ ತಾಳವಾಡಿಯ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಸೇರಿ ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಿದರು.
ಮೈಸೂರು ಕೃಪಾಲಯದ ಗುರು ಅಲೆಕ್ಸ್ ಗಾಯನ ದಿವ್ಯ ಬಲಿಪೂಜೆಯನ್ನು ಸಮರ್ಪಿಸಿದರು. ಬೈಬಲ್ ವಾಚನ, ಸುಸಂದೇಶ ಪಠನ ನಡೆಯಿತು. ಪ್ರಬೋಧನೆ ನೀಡಿದ ಗುರು ಅಲೆಕ್ಸ್, ಪೌಲನು ಮೊದಲು ಸೌಲನೆಂಬ ಹೆಸರಿನಿಂದ ಕ್ರೈಸ್ತರಿಗೆ ಭಯಂಕರ ಹಿಂಸೆ, ಕಿರುಕುಳ ನೀಡುತ್ತಿದ್ದನು. ಒಮ್ಮೆ ಕುದುರೆ ಏರಿ ಹಿಂಸಾ ಪ್ರವೃತ್ತಿ ಮುಂದುವರಿಸಲು ಹೋಗುತ್ತಿದ್ದಾಗ ಕಣ್ಣು ಕಾಣದಾಗಿ ನೆಲಕ್ಕೆ ಉರುಳುತ್ತಾನೆ. ನನ್ನನ್ನೇಕೆ ಈ ಪರಿ ಹಿಂಸಿಸುತ್ತಿಯಾ ಎಂಬ ಯೇಸುವಿನ ಅಶರೀರವಾಣಿ ಕೇಳಿ ಜ್ಞಾನೋದಯವಾಗಿ ಅಂದಿನಿಂದ ಪೌಲನೆಂಬ ಹೆಸರಿನಿಂದ ಕ್ರಿಸ್ತನ ಹಿಂಬಾಲಕನಾಗಿ ಹುತಾತ್ಮನಾಗುವ ತನಕ ಯೇಸುವಿನ ಸಂದೇಶ ಸಾರುತ್ತಾನೆ. ಈಸಬೇಕು ಭಕ್ತರೇ, ಜೈಸಬೇಕು ಮಿತ್ರರೇ ಎಂಬುದು ಆತನ ಧ್ಯೇಯವಾಕ್ಯ. ಪ್ರಮುಖವಾಗಿ ಆತ ವಿವಿಧ ಪ್ರಾಂತದ ಭಕ್ತರಿಗೆ ಪ್ರೀತಿ, ಸಹನೆ, ಸೈರಣೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪತ್ರಗಳನ್ನು ಬರೆದು ಕರೆ ನೀಡುತ್ತಾನೆ. ಆತ ಯೇಸುವಿನ ನೇರ ಶಿಷ್ಯನಲ್ಲದಿದ್ಧರೂ ಕ್ರಿಸ್ತನ ಸಂದೇಶ ಸಾರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ ಎಂದರು.ಬಲಿಪೂಜೆಯ ಬಳಿಕ ಭಾಗವಹಿಸಿದ್ದ ಗುರುವರ್ಯರಿಗೆ ಹಾಗೂ ಹಬ್ಬದ ದಾನಿಗಳನ್ನು ಗೌರವಿಸಲಾಯಿತು.
ಹಬ್ಬದ ಮೂರು ದಿನಗಳ ಮೊದಲು ಧ್ವಜಾರೋಹಣ ವಿವಿಧ ಧರ್ಮಕೇಂದ್ರದ ತಜ್ಞ ಗುರುಗಳಿಂದ ದಿವ್ಯ ಬಲಿಪೂಜೆ ಪ್ರಬೋಧನೆ ಮೂಲಕ ಹಬ್ಬದ ಭೂಮಿಕೆ ಸಿದ್ಧಪಡಿಸಲಾಗಿತ್ತು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಒಳಾವರಣವನ್ನು ಹಾಗೂ ಪೂಜಾ ಪೀಠವನ್ನು ಹೂವುಗಳಿಂದ ಸಿಂಗರಿಸಲಾಗಿತ್ತು.
ಭಾನುವಾರದ ಪೂಜಾವಿಧಿಗಳ ಬಳಿಕ ಸರ್ವಾಲಂಕೃತ ಸಂತ ಪೌಲರ ಪುತ್ಥಳಿಯ ಮೆರವಣಿಗೆ ದೇವಾಲಯದಿಂದ ಹೊರಟು ರಾಮಸಮುದ್ರ ಬಾಗೇಮರದ ಕಡೆಯಿಂದ ಡಿವೈಎಸ್ಪಿ ಕಚೇರಿ ವರೆಗೆ ಸಾಗಿ ಮತ್ತೆ ದೇವಾಲಯ ತಲುಪಿತು. ಈ ವೇಳೆ ಹೂ ಕುಂಡಗಳನ್ನು ಪಟಾಕಿಗಳನ್ನು ಸಿಡಿಸಲಾಯಿತು. ಕೇರಳದ ಚಂಡೆ ಮದ್ದಳೆ ತಂಡ ಮೆರವಣಿಗೆಯ ವಿಶೇಷ ಅಕರ್ಷಣೆಯಾಗಿತ್ತು. ಮೆರವಣಿಗೆಯಲ್ಲಿ ಗುರುವರ್ಯರು, ಬ್ರದರ್ಸ್, ಸಿಸ್ಟರ್ಸ್, ಮಕ್ಕಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಿಗೀತೆ ಹಾಡುತ್ತಾ, ಜಪಸ್ವರ ಹೇಳುತ್ತಾ ಭಾಗವಹಿಸಿದ್ದರು. ಕೊನೆಯಲ್ಲಿ ಪರಮಪ್ರಸಾದದ ಆಶೀರ್ವಾದ ಪ್ರಸಾದ ವಿನಿಯೋಗ ನಡೆಯಿತು.