ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದ ಕಾಂಗ್ರೆಸ್ ಸರ್ಕಾರವು ರೈತರ ವಿರೋಧಿ ಧೋರಣೆ ಹೊಂದಿರುವ ವಿರುದ್ಧ ರಾಜ್ಯಾದಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪತ್ರಿಭಟಿಸುವ ಮೂಲಕ ಬೆಳಗಾವಿ ಅಧಿವೇಶನದ ಗಮನ ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಉಪಾಧ್ಯಕ್ಷ ಅಶ್ವತ್ಥ್ ನಾರಾಯಣ ತಿಳಿಸಿದರು. ನಗರದಲ್ಲಿ ಜಿಲ್ಲಾ ಬಿಜೆಪಿ ಪಕ್ಷವು ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ನಗರದ ಮೆಕ್ಕೆ ಸರ್ಕಲ್‌ನಿಂದ ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯವರೆಗೆ ಹಮ್ಮಿಕೊಂಡಿದ್ದ ಎತ್ತಿನ ಬಂಡಿ ಸಮೇತ ಪ್ರತಿಭಟನೆಯ ಜಾಥಾದಲ್ಲಿ ಮಾತನಾಡಿದರು.ಸರ್ಕಾರದ ರೈತ ವಿರೋಧಿ ಧೋರಣೆ
ರೈತರಿಗೆ ಸರ್ಕಾರ ಪರಿಹಾರ ನೀಡಲಿ
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಬೆಳೆ ನಷ್ಟಕ್ಕೆ. ರೈತರ ಆತ್ಮಹತ್ಯೆಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರದ ಹಣ ನೀಡುತ್ತಿಲ್ಲ. ಕೋಲಾರದಲ್ಲಿ ರೈತರ ಟೊಮೆಟೋ ಬಾಕ್ಸ್‌ಗೆ ಕನಿಷ್ಟ ೫೦೦ ರೂ ನಿಗದಿಪಡಿಸಬೇಕು, ಕೆಸಿ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ದೀಕರಿಸಿ ಪೂರೈಕೆ ಮಾಡಬೇಕು, ರಾಜ್ಯದ ರೈತ ವಿರೋಧಿ ಧೋರಣಿ ಹೊಂದಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.ಹಾಲಿಗೆ ಬೆಂಬಲ ಬೆಲೆ ಸ್ಥಗಿತ
ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿಚಲಪತಿ ಮಾತನಾಡಿ, ರಾಜ್ಯ ಸರ್ಕಾರವು ರೈತರ ಹಾಲಿಗೆ ಲೀಟರ್‌ಗೆ ೫ ರೂ ಬೆಂಬಲ ನೀಡುತ್ತಿರುವುದನ್ನು ಏರಿಕೆ ಮಾಡಿ ೭ ರೂ ನೀಡುತ್ತೇನೆಂದು ಭರವಸೆ ನೀಡಿದ್ದು ಕನಿಷ್ಟ ೫ ರೂ ಸಹ ಕೊಡಲಾಗದೆ ರೈತರಿಗೆ ೬೪೦ ಕೋಟಿ ರೂ ಬಾಕಿ ಉಳಿಸಿಕೊಂಡಿದೆ, ಇದರ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ತೋಟಗಾರಿಕೆ ಇಲಾಖೆಯವರೆಗೆ ಎತ್ತಿನ ಬಂಡಿಗಳ ಪ್ರದರ್ಶನೊಂದಿಗೆ ರೈತ ಮೋರ್ಚಾದ ಹಾಗೂ ಜಿಲ್ಲಾ ಬಿಜೆಪಿ ವಿವಿಧ ಘಟಕಗಳು ಮೆರವಣಿಗೆಯಲ್ಲಿ ತೆರಳಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಅಣುಕು ಪ್ರದರ್ಶನ ನಾಟಿಕೋಳಿ:ಮೆರವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯರ ಮುಖವಾಡ ಧರಿಸಿ ಹೆಗಲಿಗೆ ಎರಡು ನಾಟಿ ಕೋಳಿಗಳನ್ನು ಕಟ್ಟಿಕೊಂಡು ಅಣುಕು ಪ್ರದರ್ಶನ ಪ್ರದರ್ಶಿಸಲಾಯಿತು. ಮತ್ತೊಂದು ಕಡೆ ಸಿದ್ದರಾಮಯ್ಯ ಡಿ.ಕೆ.ಶಿ ಮನೆಯಲ್ಲಿ ನಾಟಿ ಕೋಳಿಯ ಬಾಡೂಟದ ಚಿತ್ರವನ್ನು ಹೊಂದಿರುವ ಬ್ಯಾನರ್ ಹಿಡಿದು ಪ್ರದರ್ಶಿಸಿದರು. ಇದೇ ವೇಳೆ ತಮಟೆ ಶಬ್ದ ಹಾಗೂ ಜನಸಂದಣಿ ಕಂಡು ಬೆದರಿದ ಜೋಡಿ ಎತ್ತುಗಳು ಕಟ್ಟಿದ್ದ ಅಗ್ಗ ಕಳಚಿಕೊಂಡು ಜನರ ಮೇಲೆ ಎಗರಗಲು ಮುಂದಾದವು. ಎತ್ತುಗಳನ್ನು ವಾಪಸ್ ಕಳುಹಿಸಿದ ಬೇರೆ ಎತ್ತಿನ ಬಂಡಿಗಳನ್ನು ತರಿಸಿ ಪ್ರತಿಭಟನೆ ಮುಂದುವರಿಸಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಮುಖಂಡರಾದ ಬೆಗ್ಲಿ ಪ್ರಕಾಶ್, ಸಿ.ಎಸ್.ವೆಂಕಟೇಶ್, ಎಸ್.ಬಿ. ಮುನಿವೆಂಕಟಪ್ಪ, ಕಪಾಲಿ ಶಂಕರ್, ರೈತ ಮೋರ್ಚ ಆನಂದ್, ವಿಜಯ ಕುಮಾರ್, ಬಾಲಾಜಿ ಕೆಂಬೋಡಿ ನಾರಾಯಣಸ್ವಾಮಮಿ, ಮಹೇಶ್, ಸಿ.ಡಿ.ರಾಮಚಂದ್ರ ಮತ್ತಿತರರು ಇದ್ದರು.