ಜನಮನ ಸೂರೆಗೊಂಡ ಅಂಬೇಡ್ಕರ್ ಭಿತ್ತಿಚಿತ್ರಗಳ ಮೆರವಣಿಗೆ । ಒಂದೂವರೆ ಕಿಮೀ ಸಾಗಿದ ಅಮೂಲ್ಯ ಕ್ಷಣಗಳ ಜಾಡು
ಕನ್ನಡಪ್ರಭ ವಾರ್ತೆ ಚಿತ್ರದುರ್ಗಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಗೆ ಕೋಟೆ ನಾಡು ಸೋಮವಾರ ಅಕ್ಷರಶಃ ಸಿಂಗಾರಗೊಂಡಿತ್ತು. ಪ್ರತಿ ಬಾರಿ ಕೇವಲ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಗಷ್ಟೇ ಸೀಮಿತವಾಗುತ್ತಿದ್ದ ಕಾರ್ಯಕ್ರಮ ಈ ಬಾರಿ ಬೇರೆಯದೇ ಸ್ವರೂಪ ಪಡೆದಿತ್ತು. ಮೊದಲ ಬಾರಿಗೆ ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಎಂಟ್ರಿ ಕೊಟ್ಟಿದ್ದವು. ಹಾಗಾಗಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ನಗರದ ಕನಕದಾಸ ವೃತ್ತದಿಂದ ತರಾಸು ರಂಗಮಂದಿರದವರೆಗೆ ಸುಮಾರು ಒಂದೂವರೆ ಕಿಮೀ ಹಾದಿಯಲ್ಲಿ ಸಾಗಿದ ಡಾ.ಬಿ.ಆರ್.ಅಂಬೇಡ್ಕರ್ ಭಾಚಿತ್ರದೊಂದಿಗಿನ ವಿವಿಧ ಇಲಾಖೆಗಳ ಆಕರ್ಷಕ ಸ್ತಬ್ಧಚಿತ್ರ ಮೆರವಣಿಗೆ ಜನಮನ ಸೆಳೆಯಿತು.ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್.ರಾಘವೇಂದ್ರ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಿ.ಎನ್.ಮೈಲಾರಪ್ಪ, ನಸ್ರೂ ಅಂಬೇಡ್ಕರ್ ಭಾಚಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಕೃಷಿ, ತೋಟಗಾರಿಕೆ, ಶಿಕ್ಷಣ ಇಲಾಖೆ ಸ್ತಬ್ಧಚಿತ್ರಗಳು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಕೊಡುಗೆ ಹಾಗೂ ಸಂವಿಧಾನದ ಮಹತ್ವ ಸಾರಿದವು. ಕೃಷಿ ಇಲಾಖೆ, ಹೂವಿನಿಂದಲೇ ಅಂಬೇಡ್ಕರ್ ಹಾಗೂ ಸಂವಿಧಾನ ಪ್ರತಿಕೃತಿಯನ್ನು ರಚಿಸಿ ಗಮನ ಸೆಳೆಯಿತು. ತೋಟಗಾರಿಕೆ ಇಲಾಖೆ ಅಂಬೇಡ್ಕರ್ ಅವರ ಪೂರ್ಣಗೊಂಡ ಸಂವಿಧಾನ ಪ್ರತಿಕೃತಿಯನ್ನು ಅಂದಿನ ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಡಾ.ಬಾಬು ರಾಜೇಂದ್ರ ಪ್ರಸಾದ್‌ಗೆ ಹಸ್ತಾಂತರಿಸುವ ಐತಿಹಾಸಿಕ ಗಳಿಗೆಯನ್ನು ಸ್ತಬ್ಧಚಿತ್ರದ ಮೂಲಕ ಮರುಸೃಷ್ಟಿಸಿತ್ತು.ಸಂವಿಧಾನ ಪೀಠಿಕೆ, ಅಂಬೇಡ್ಕರ್ ಜೀವನದ ಅಮೂಲ್ಯ ಕ್ಷಣಗಳ ಸಾಕ್ಷೀಕರಿಸಿರುವ ಫೋಟೋಗಳ ಸಂಗ್ರಹ ಐತಿಹಾಸಿಕ ಕ್ಷಣಗಳನ್ನು ತೆರೆದಿಟ್ಟಿತ್ತು. ಶಾಲಾ ಸಾಕ್ಷರತಾ ಇಲಾಖೆಯು ಸ್ತಬ್ಧಚಿತ್ರ ಹಳೆ ಸಂಸತ್ತು ಭವನ, ಸಂವಿಧಾನ ಪೀಠಿಕೆ ಕಲಾಕೃತಿ ಮೂಲಕ ಸಂವಿಧಾನ ಮಹತ್ವ ಸಾರಿತು.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಂಶಗಳನ್ನು ಪ್ರಚುರಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶೇಷ ರೂಪಕ ಸಾದರಪಡಿಸಿತು. ಜಲಜೀವನ್ ಮಿಷನ್‍ನ ಜಲೋತ್ಸವ, ಹರ್ ಘರ್ ಜಲ್ ಯೋಜನೆ ಸ್ತಬ್ಧಚಿತ್ರ, ಕಾರ್ಮಿಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೆಎಸ್ಆರ್‌ಟಿಸಿಯ ಸ್ತಬ್ಧಚಿತ್ರಗಳು ಆಯಾ ಇಲಾಖೆಗಳ ಮಹತ್ವದ ಕಾರ್ಯಕ್ರಮಗಳ ಮಾಹಿತಿ ನೀಡಿದವು.ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳು, ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಮೆರವಣಿಗೆ ಹೊಳಲ್ಕೆರೆ ರಸ್ತೆಯ ಕನಕದಾಸ ವೃತ್ತದಿಂದ ಆರಂಭವಾಗಿ, ಸಂಗೊಳ್ಳಿರಾಯಣ್ಣ ವೃತ್ತ, ಗಾಂಧಿ ವೃತ್ತ, ಎಸ್‌ಬಿಐ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತವನ್ನು ಬಳಿಸಿ ತರಾಸು ರಂಗಮಂದಿರ ತಲುಪಿತು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಪೌರಾಯುಕ್ತೆ ಎಂ.ರೇಣುಕಾ, ಭರತ್ ಕಾಳೆಸಿಂಗೆ, ಮಂಜುನಾಥ್, ರಾಜಣ್ಣ, ಬಾಳೆಕಾಯಿ ಶ್ರೀನಿವಾಸ್, ಮಂಜುನಾಥ್, ಮಹಾಂತೇಶ್ ಇತರರು ಪಾಲ್ಗೊಂಡಿದ್ದರು.