ವರದಿ: ದುರ್ಗಾಕುಮಾರ್ ನಾಯರ್ ಕೆರೆ
ಕೇರಳಂನಲ್ಲಿ ಏಪ್ರಿಲ್ 9 ರಂದು 16 ನೇ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಹಲವು ಕಾರಣಗಳಿಗಾಗಿ ಈ ಪುಟ್ಟ ರಾಜ್ಯದ ಚುನಾವಣೆ ಮಹತ್ವ ಪಡೆದುಕೊಂಡಿದೆ. ‘ದೇವರ ಸ್ವಂತ ನಾಡು’ ಎಂದೇ ಪ್ರಸಿದ್ಧಿ ಪಡೆದಿರುವ ಕೇರಳದ ವಿಪರೀತ ರಾಜಕೀಯ ಪ್ರಜ್ಞಾವಂತಿಕೆಯು ಈ ರಾಜ್ಯವನ್ನು ಇತರ ರಾಜ್ಯಗಳಿಗಿಂತ ವಿಭಿನ್ನವಾಗಿ ನಿಲ್ಲಿಸಿದೆ. ಮಾತ್ರವಲ್ಲ ದೇಶದ ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಭದ್ರವಾಗಿರುವ ಎಡ ರಂಗದ ಪಕ್ಷಗಳ ಪಾಲಿಗೆ ಕೇರಳವೂ ಒಂದು ಶಕ್ತಿ ಕೇಂದ್ರ.
ಅನೂಚಾನವಾಗಿ ಪ್ರತೀ 5 ವರ್ಷಗಳಿಗೊಮ್ಮೆ ಅಧಿಕಾರ ಕೇಂದ್ರ ಬದಲಾಗುವುದು ಇಲ್ಲಿನ ವಿಶೇಷ. ಆದರೆ 2021 ರಲ್ಲಿ ಸತತ ಎರಡನೇ ಬಾರಿ ಎಲ್.ಡಿ.ಎಫ್. ಅಧಿಕಾರ ಹಿಡಿಯುವುದರೊಂದಿಗೆ ಈ ಸಂಪ್ರದಾಯ ಮುರಿದಿತ್ತು.ಎಲ್.ಡಿ.ಎಫ್. Vs ಯು.ಡಿ.ಎಫ್: ಕೇರಳದಲ್ಲಿ ಪ್ರಧಾನವಾಗಿ ರಾಜಕೀಯ ಎದುರಾಳಿಗಳಾಗುವುದು ಸಿಪಿಎಂ ನೇತೃತ್ವದ ಎಲ್.ಡಿ.ಎಫ್. ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಕ್ಕೂಟಗಳು. ಆದರೆ ಈಗ ಹಲವು ಚುನಾವಣೆಗಳಲ್ಲಿ ಎನ್‌ಡಿಎ ಕೂಡಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ.ಎಲ್.ಡಿ.ಎಫ್. ಮತ್ತು ಯು.ಡಿ.ಎಫ್. ಒಕ್ಕೂಟಗಳ ಜೊತೆ ಅಲ್ಲಿನ ಹಲವು ಪ್ರಾದೇಶಿಕ ಪಕ್ಷಗಳು ಜೊತೆಯಾಗಿದ್ದು, ಈ ಪೈಕಿ ಕೆಲವು ಪಕ್ಷಗಳು ಚುನಾವಣೆಯಿಂದ ಚುನಾವಣೆಗೆ ಒಕ್ಕೂಟ ಬದಲಾಯಿಸುವುದೂ ಇಲ್ಲಿನ ವಿಶೇಷತೆ.
ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆದಿರುವುದೂ ಅದರ ಭರವಸೆಗೆ ಕಾರಣವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 14 ಸ್ಥಾನ ಗಳಿಸಿತ್ತು.
ಎನ್.ಡಿ.ಎ. ಪ್ರಾಬಲ್ಯ ಹೆಚ್ಚಳವಾದೀತೆ?: ಕೇರಳದಲ್ಲಿ ಬಿಜೆಪಿ ಸ್ಥಾನಗಳಿಕೆಯಲ್ಲಿ ಉಳಿದ ಪಕ್ಷಗಳಿಗಿಂತ ಬಹಳ ಹಿಂದೆ ಇದ್ದರೂ ಮತಗಳಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಅನೇಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎನ್ನುವುದು ಗಮನಾರ್ಹ. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಒಳ್ಳೆಯ ಸಾಧನೆ ಮಾಡಿದೆ.2016 ರ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಓ. ರಾಜಗೋಪಾಲ್ ವಿಜಯ ಸಾಧಿಸುವುದರ ಮೂಲಕ ಕೇರಳ ವಿಧಾನ ಸಭೆಯಲ್ಲಿ ಖಾತೆ ತೆರೆದಿತ್ತು. ಆದರೆ 2021ರಲ್ಲಿ ಬಿಜೆಪಿಗೆ ಯಶಸ್ಸು ಸಾಧ್ಯವಾಗಿರಲಿಲ್ಲ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಎನ್.ಡಿ.ಎ. ಮೊದಲ ಬಾರಿಗೆ ಗೆದ್ದು ಲೋಕಸಭೆ ಪ್ರವೇಶ ಮಾಡಿದೆ. ಕಳೆದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ತಿರುವನಂತಪುರಂ ಮಹಾನಗರ ಪಾಲಿಕೆಯನ್ನು ತೆಕ್ಕೆಗೆ ತೆಗೆದುಕೊಂಡು ಇತಿಹಾಸ ನಿರ್ಮಾಣ ಮಾಡಿರುವುದು ಬಿಜೆಪಿ ಪಾಲಿಗೆ ಧನಾತ್ಮಕವಾಗಿದೆ. ಕೇರಳದ ಸುರೇಶ್ ಗೋಪಿ, ಜಾರ್ಜ್ ಕುರಿಯನ್ ಕೇಂದ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದಾರೆ. ಹೆದ್ದಾರಿ ಯೋಜನೆ ಕೂಡಾ ಪ್ಲಸ್ ಆಗಬಹುದು ಎಂದು ಬಿಜೆಪಿ ನಂಬಿದೆ.ಘಟಾನುಘಟಿಗಳ ಸ್ಪರ್ಧೆ: ಪ್ರಸ್ತುತ ಎಲ್.ಡಿ.ಎಫ್. ನಿಂದ ಹಾಲಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್, ಅವರ ಅಳಿಯನೂ ಆಗಿರುವ ಸಚಿವ ಮೊಹಮ್ಮದ್ ರಿಯಾಸ್, ಎಂ.ಬಿ.ರಾಜೇಶ್, ಶಿವನ್ ಕುಟ್ಟಿ , ಕೆ.ಕೆ.ಶೈಲಜಾ ಸಹಿತ ಪ್ರಮುಖರು ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಹಾಲಿ ವಿಪಕ್ಷ ನಾಯಕ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ, ಕೆ. ಮುರಳೀಧರನ್ ಸಹಿತ ನಾಯಕರು ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ.ಎನ್.ಡಿ.ಎ. ಯಿಂದ ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಮಾಜಿ ಅಧ್ಯಕ್ಷ ಸುರೇಂದ್ರನ್, ಕೇಂದ್ರ ಮಾಜಿ ಸಚಿವ ವಿ. ಮುರಳೀಧರನ್, ಶೋಭಾ ಸುರೇಂದ್ರನ್ ಸೇರಿದಂತೆ ಹಲವು ನಾಯಕರು ಸ್ಪರ್ಧಾ ಕಣದಲ್ಲಿದ್ದಾರೆ.ಡೀಲ್ ಆರೋಪ: ಚುನಾವಣೆಗೆ ಹತ್ತು ದಿನಗಳು ಬಾಕಿ ಇರುವಂತೆ ಪ್ರಚಾರದ ಬಿಸಿ ಏರಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರೂ ಕೇರಳದತ್ತ ಚಿತ್ತ ನೆಟ್ಟಿದ್ದಾರೆ. ಮೂರೂ ಒಕ್ಕೂಟಗಳೂ ಉಳಿದ ಎರಡು ಒಕ್ಕೂಟಗಳ ನಡುವೆ ಚುನಾವಣಾ ಡೀಲ್ ನಡೆದಿದೆ ಎಂದು ಆರೋಪಿಸುತ್ತಿರುವುದೂ ಕುತೂಹಲ ಮೂಡಿಸಿದೆ.