ಆರ್‌ಸಿಬಿ ಸೇವಕರಂತೆ ಪೊಲೀಸರ ವರ್ತನೆಯ ವಾದ ದುರದೃಷ್ಟಕರ

KannadaprabhaNewsNetwork |  
Published : Jul 19, 2025, 02:00 AM IST

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರು ಆರ್‌ಸಿಬಿ ಸೇವಕರಂತೆ ವರ್ತಿಸಿದ್ದಾರೆಂದು ರಾಜ್ಯ ಸರ್ಕಾರ ವಾದ ಮಂಡಿಸಿರುವುದು ದುರದೃಷ್ಟಕರ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ವಿಕಾಸ್ ಪರ ವಕೀಲರು ಹೈಕೋರ್ಟ್‌ ಮುಂದೆ ಆಕ್ಷೇಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರು ಆರ್‌ಸಿಬಿ ಸೇವಕರಂತೆ ವರ್ತಿಸಿದ್ದಾರೆಂದು ರಾಜ್ಯ ಸರ್ಕಾರ ವಾದ ಮಂಡಿಸಿರುವುದು ದುರದೃಷ್ಟಕರ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ವಿಕಾಸ್ ಪರ ವಕೀಲರು ಹೈಕೋರ್ಟ್‌ ಮುಂದೆ ಆಕ್ಷೇಪಿಸಿದ್ದಾರೆ.

ಪ್ರಕರಣ ಸಂಬಂಧ ಕರ್ತವ್ಯಲೋಪ ಆರೋಪ ಮೇಲೆ ವಿಕಾಸ್‌ಕುಮಾರ್‌ ವಿಕಾಸ್‌ ಅವರನ್ನು ಅಮಾನತುಗೊಳಿಸಿದ ಆದೇಶ ರದ್ದುಪಡಿಸಿರುವ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣದ (ಸಿಎಟಿ) ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಜಿ. ಪಂಡಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಗುರುವಾರ ನಡೆದಿದ್ದ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಪೊಲೀಸರು ಆರ್‌ಸಿಬಿ ಸೇವಕರಂತೆ ವರ್ತಿಸಿದ್ದರಿಂದಲೇ ಕಾಲ್ತುಳಿತ ಘಟನೆ ನಡೆಯಲು ಕಾರಣವಾಗಿದೆ. ಇದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಈ ಕಾರಣದಿಂದಲೇ ಪೊಲೀಸ್‌ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಯಿತು ಎಂದು ವಾದಿಸಿದ್ದರು.

ಶುಕ್ರವಾರದ ವಿಚಾರಣೆ ವೇಳೆ ಈ ವಾದಕ್ಕೆ ತಿರುಗೇಟು ನೀಡಿದ ವಿಕಾಸ್‌ ಕುಮಾರ್‌ ಪರ ವಕೀಲರು, ಪೊಲೀಸರು ಆರ್‌ಸಿಬಿ ಸೇವಕರಂತೆ ವರ್ತಿಸಿದ್ದಾರೆಂದು ರಾಜ್ಯ ಸರ್ಕಾರ ವಾದ ಮಂಡಿಸಿರುವುದು ನಿಜಕ್ಕೂ ದುರದೃಷ್ಟಕರ. ಸರ್ಕಾರಕ್ಕೆ ಮುಜುಗರವಾಗಿದೆ ಎಂದು ಯಾರನ್ನೋ ಅಮಾನತು ಮಾಡಲಾಗದು. ಯಾವುದೇ ದಾಖಲೆಗಳಿಲ್ಲದೆ ಪೊಲೀಸರನ್ನು ಸರ್ಕಾರ ಅಮಾನತುಪಡಿಸಿದೆ. ಪ್ರಕರಣ ಕುರಿತ ತನಿಖಾ ವರದಿ ಬರುವ ಮುನ್ನವೇ ಪೊಲೀಸರನ್ನು ಅಮಾನತು ಮಾಡಿರುವುದು ಸರಿಯಲ್ಲ. ಆರ್‌ಸಿಬಿ ತಂಡವನ್ನು ಸ್ವಾಗತಿಸಲು ಯಾರು ವಿಮಾನ ನಿಲ್ದಾಣಕ್ಕೆ ಹೋಗಿದ್ದರು ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ ಎಂದು ಬಲವಾಗಿ ವಾದಿಸಿದರು.

ಆರ್‌ಸಿಬಿ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಜೂ.3ರಿಂದಲೇ ಜನ ಸಂಭ್ರಮಾಚರಣೆ ಮಾಡುತ್ತಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ಕರ್ತವ್ಯದಲ್ಲಿ ಪೊಲೀಸರಿದ್ದರು. ಬಂದೋಬಸ್ತ್‌ ಮಾಡಲು ಪೊಲೀಸರು ಯಾರ ಒಪ್ಪಿಗೆ ಕೇಳಿದೆ ಎಂದು ರಾಜ್ಯ ಸರ್ಕಾರ ಪ್ರಶ್ನಿಸಿದೆ. ಅಂದರೆ ಪೊಲೀಸರ ಬಂದೋಬಸ್ತ್ ಕೆಲಸದಲ್ಲೂ ಸರ್ಕಾರ ದೋಷ ಹುಡುಕುತ್ತಿದೆ. ಬೆಂಗಳೂರು ಪೊಲೀಸ್‌ ಆಯುಕ್ತರು ವಿಜಯೋತ್ಸವ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಬೆಂಗಳೂರಿನ ಪೊಲೀಸ್‌ ಮುಖ್ಯಸ್ಥರಾಗಿರುವ ಪೊಲೀಸ್‌ ಆಯುಕ್ತರನ್ನು ಹೊರತುಪಡಿಸಿ ಯಾವ ಮೇಲಾಧಿಕಾರಿಯ ಒಪ್ಪಿಗೆಯನ್ನು ವಿಕಾಸ್ ಕುಮಾರ್ ಪಡೆಯಬೇಕಿತ್ತು ಎಂದು ಕೇಳಿದರು.

ಕಾಲ್ತುಳಿತ ಪ್ರಕರಣ ಸಂಬಂಧ ವಿಭಾಗೀಯ ಪೀಠದ ಮುಂದಿರುವ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ವೇಳೆ ಯಾವುದೇ ದುರ್ಘಟನೆ ನಡೆಯದಂತೆ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕ್ರೀಡಾಂಗಣದ ಪ್ರತಿಯೊಂದು ಸ್ಥಳದಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಸ್ವತಃ ಸರ್ಕಾರವೇ ತಿಳಿಸಿದೆ. ಇದೀಗ ಸರ್ಕಾರ ಬೇರೆ ವಿಚಾರ ಹೇಳುತ್ತಿದೆ. ಇದು ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದರೂ ತಪ್ಪು, ಮಾಡದೇ ಇದ್ದರೂ ತಪ್ಪು ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ನ್ಯಾಯಾಲಯದ ಮುಂದೆ ಎಲ್ಲವೂ ಸರಿಯಾಗಿದೆ ಎಂಬುದನ್ನು ತೋರಿಸಲು ದಾಖಲೆಗಳ ಅನುಪಸ್ಥಿತಿಯಲ್ಲಿಯೂ ಒಬ್ಬ ವ್ಯಕ್ತಿಯನ್ನು (ವಿಕಾಸ್‌ ಕುಮಾರ್‌) ಸರ್ಕಾರ ನಿಂದಿಸುತ್ತಿದೆ ಎಂದು ಆಕ್ಷೇಪಿಸಿದರು. ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಸೋಮವಾರಕ್ಕೆ ನಿಗದಿಪಡಿಸಿತು.

PREV

Latest Stories

ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ
ಡಯಾಬಿಟೀಸ್ ಬಾಧಿತರಿಗಾಗಿ ಹುಟ್ಟಿದ ನಂದಿನಿ ಸ್ವಾದ್‌ ರೊಟ್ಟಿ
ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್‌ನಲ್ಲಿ ಮೆಟ್ರೋ ಸಂಚಾರ ಶುರು