ಕನ್ನಡಪ್ರಭ ವಾರ್ತೆ ಶೃಂಗೇರಿ
ತಾಲೂಕಿನಾದ್ಯಂತ ಆರಿದ್ರಾ ಮಳೆ ಅಬ್ಬರ ಜೋರಾಗಿದ್ದು ಬುಧವಾರ ಭಾರಿ ಮಳೆ ಸುರಿದು ತುಂಗಾ ನದಿಯಲ್ಲಿ ರಾತ್ರಿ ಪ್ರವಾಹ ಉಂಟಾಗಿ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿತ್ತು.ಕೆರೆಕಟ್ಟೆ, ನೆಮ್ಮಾರು, ಕಿಗ್ಗಾ, ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಸಂಜೆಯಿಂದ ಸತತವಾಗಿ ಸುರಿದ ಮಳೆಯಿಂದಾಗಿ ಬುಧವಾರವೂ ಮುಂದುವರೆದು ನಳಿನಿ, ನಂದಿನಿ, ತುಂಗಾ ನದಿಗಳಲ್ಲಿ ನೀರು ಅಪಾಯದಮಟ್ಟ ಮೀರಿ ಹರಿಯುತ್ತಿದ್ದು, ರಾತ್ರಿ ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಬೈಪಾಸ್ ರಸ್ತೆಗೆ ನೀರು ನುಗ್ಗಿ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿತ್ತು.
ಸಂಜೆಯಿಂದಲೇ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದರಿಂದ ಶ್ರೀ ಮಠದ ಗಾಂಧಿ ಮೈದಾನ ರಸ್ತೆ, ಕಟ್ಟೆಬಾಗಿಲು ಬೈಪಾಸ್ ರಸ್ತೆ, ಕೆವಿಆರ್ ವೃತ್ತ ಸಂಪರ್ಕ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗಿತ್ತು. ಬೆಳಗಿನವರೆಗೂ ರಸ್ತೆಯಲ್ಲಿ ನೀರು ತುಂಬಿತ್ತು. ಬೆಳಗ್ಗೆ ನೀರು ಇಳಿದು ಸಂಚಾರ ಆರಂಭಗೊಂಡಿತು. ಶ್ರೀ ಮಠದ ತುಂಗಾನದಿ ತೀರದಲ್ಲಿರುವ ಕಪ್ಪೆಶಂಕರ ದೇವಾಲಯ ಜಲಾವೃತಗೊಂಡಿತ್ತು. ಸಂಧ್ಯಾವಂದನ ಮಂಟಪಕ್ಕೂ ನೀರು ನುಗ್ಗಿತ್ತು. ತಗ್ಗುಪ್ರದೇಶಗಳೆಲ್ಲ ಜಲಾವೃತಗೊಂಡಿತ್ತು.ಭಾರಿ ಮಳೆ ಹಿನ್ನೆಲೆಯಲ್ಲಿ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ನೀಡಲಾಗಿತ್ತು. ಬೆಳಿಗ್ಗೆಯಿಂದಲೇ ಗಾಳಿ ಮಳೆ ಜೋರಾಗಿದ್ದು, ಕಚೇರಿಗಳಲ್ಲಿ ಜನಸಂದಣಿ ಕಡಿಮೆಯಿತ್ತು. ಆದರೆ ಶೃಂಗೇರಿ ಪಟ್ಟಣ, ಶ್ರೀಮಠದ ಆವರಣ, ಗಾಂಧಿ ಮೈದಾನದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು. ಮಳೆಯ ಆರ್ಭಟದ ನಡುವೆಯೂ ಪ್ರವಾಸಿಗರು ಲಗ್ಗೆಯಿಡುತ್ತಲೇ ಇದ್ದಾರೆ. ಶಂಕರಗಿರಿ ಬೆಟ್ಟ, ಸಿರಿಮನೆ ಜಲಪಾತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ.
ಧರೆಗುರುಳಿದ ಮರಗಳು:ಭಾರಿ ಗಾಳಿಯ ಅರ್ಭಟದಿಂದ ಮರಗಳು ಧರೆಗುರುಳುತ್ತಿದ್ದು, ಶೃಂಗೇರಿ ಪಟ್ಟಣದ ಕುರುಬಗೇರಿ ಅದ್ವೈತ ಲ್ಯಾನ್ಸರ್ ಬಳಿ ಬೃಹತ್ ಮರವೊಂದು ಉರುಳಿ ಬಿದ್ದಿತು. ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ದುರ್ಗಾದೇವಸ್ಥಾನ ಸಮೀಪ ಮರವೊಂದು ಬಿದ್ದು ವಿದ್ಯುತ್ ಕಂಬ, ಲೈನ್ ಹಾನಿಯಾಗಿತ್ತು. ಭಾರಿ ಗಾಳಿ ಮಳೆಯ ಪರಿಣಾಮ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರ ಹಗಲು, ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮಂಗಳೂರು ಶೃಂಗೇರಿ ಸಂಪರ್ಕ ರಾ.ಹೆ 169 ರ ಕೆರೆಕಟ್ಟೆ, ಎಸ್.ಕೆ.ಬಾರ್ಡರ್ ರಸ್ತೆಯಲ್ಲಿಯೂ ಮರಗಳು ರಸ್ತೆಗುರುಳಿ ಬೀಳುತ್ತಿರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿದೆ.ಮುಂದುವರಿದ ಗುಡ್ಡಕುಸಿತ, ಭೂಕುಸಿತ:
ಸತತವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ಗುಡ್ಡಕುಸಿತ, ಭೂಕುಸಿತಗಳು ಮುಂದುವರೆದಿದ್ದು, ಶೃಂಗೇರಿ- ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಸಾಲ್ಮರ ಬಳಿ ಮತ್ತೆ ಗುಡ್ಡದ ಮಣ್ಣು ಕುಸಿದು ರಸ್ತೆಯ ಮೇಲೆ ಬೀಳಲಾರಂಬಿಸಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ತನಿಕೋಡು, ತ್ಯಾವಣ, ಶೃಂಗೇರಿ ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾ.ಹೆ 169ರ ಆನೆಗುಂದ ಬಳಿಯು ಗುಡ್ಡದ ಮಣ್ಣು ಕುಸಿದು ರಸ್ತೆಯ ಮೇಲೆ ಬೀಳುತ್ತಿದ್ದರಿಂದ ರಸ್ತೆಯೆಲ್ಲ ಕೆಸರುಮಯವಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.ಜನಜೀವನ ಅಸ್ತವ್ಯಸ್ತ:
ತುಂಗಾನದಿಯಲ್ಲಿ ಈ ವರ್ಷದ ಮೊದಲ ಪ್ರವಾಹ ಆಗಿದ್ದು, ಪ್ರವಾಹ ಇಳಿಮುಖವಾಗಿದ್ದರೂ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳೆದರೆಡು ದಿನಗಳಿಂದ ಭಾರಿ ಗಾಳಿ ಮಳೆಯ ಆರ್ಭಟದಿಂದ ವಿದ್ಯುತ್ ಸಂಪರ್ಕ, ಮೊಬೈಲ್, ದೂರವಾಣಿ ಅಸ್ತವ್ಯಸ್ತಗೊಳ್ಳುತ್ತಿರುವುದರಿಂದ ಕುಡಿಯುವ ನೀರು ಸೇರಿದಂತೆ ಅಗತ್ಯ ಕೆಲಸಗಳಿಗಾಗಿ ಜನರು ಪರದಾಡುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಕೃಷಿ ಚಟುವಟಿಕೆಗಳಿಗೆ ಹಿನ್ನಡೆ:
ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದ್ದು, ಅಡಕೆ ತೋಟಗಳಲ್ಲಿ ಔಷಧಿ ಸಿಂಪಡಣೆ ಕೆಲಸ ಸ್ಥಗಿತಗೊಂಡಿದೆ. ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೇ ರೈತರಿಗೆ ತೊಂದರೆಯುಂಟಾಗಿದೆ. ಹೊಲಗೆದ್ದೆಗಳಲ್ಲಿ ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಹಳ್ಳದ ದಂಡೆಗಳು ತುಂಡಾಗುತ್ತಿದ್ದು ಹಾನಿಯುಂಟಾಗುತ್ತಿದೆ. ಗುರುವಾರ ಸಂಜೆಯವರೆಗೂ ಮಳೆ ಆರ್ಭಟ ಮುಂದುವರೆದಿತ್ತು.