ಕ್ರೀಡಾ ರಾಜಧಾನಿ ಆಗುವತ್ತ ಬೆಂಗ್ಳೂರು ದಾಪುಗಾಲು: ರಾಜ್ಯಪಾಲ

KannadaprabhaNewsNetwork |  
Published : Jul 4, 2025 12:32 AM ISTUpdated : Jul 4, 2025 7:20 AM IST
wilson manor hotel 1 | Kannada Prabha

ಸಾರಾಂಶ

ವರ್ಲ್ಡ್ ಪ್ರೀಮಿಯರ್ 10 ಕೆ ರನ್, ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ‘ಲೋಕೋಪಕಾರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಭಾಗಿಯಾದರು.

 ಬೆಂಗಳೂರು :  ಬೆಂಗಳೂರು ಐಟಿ ಮತ್ತು ನಾವೀನ್ಯತೆಯ ರಾಜಧಾನಿಯಾಗಿ ಹಾಗೂ ಕ್ರೀಡಾ ರಾಜಧಾನಿಯಾಗಿ ಮಾರ್ಪಡುತ್ತಿದ್ದು, ಜೀವನದಲ್ಲಿ ಕ್ರೀಡಾ ಮನೋಭಾವ ಅಳವಡಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡೋಣ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಹೇಳಿದ್ದಾರೆ.

ಗುರುವಾರ ಆಯೋಜಿಸಿದ್ದ ವರ್ಲ್ಡ್ ಪ್ರೀಮಿಯರ್ 10 ಕೆ ರನ್, ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ‘ಲೋಕೋಪಕಾರ ಪ್ರಶಸ್ತಿ’ (ಫಿಲಾಂಥರೋಪಿ ಅವಾರ್ಡ್) ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜ್ಞಾನ, ವಿಜ್ಞಾನ ಮತ್ತು ಸಂಸ್ಕೃತಿಯ ನಾಡಗಿರುವ ಕರ್ನಾಟಕ ಪ್ರಸ್ತುತ ಕ್ರೀಡಾ ಕ್ಷೇತ್ರದಲ್ಲೂ ಹೊಸ ಗುರುತನ್ನು ಮೂಡಿಸುತ್ತಿದ್ದು, ಇದು ಸಾಧನೆ, ಸಮರ್ಪಣೆ ಮತ್ತು ದೂರದೃಷ್ಟಿಯ ಫಲಿತಾಂಶವಾಗಿದೆ ಎಂದರು.

ಟಿಸಿಎಸ್ ವರ್ಲ್ಡ್ 10 ಕೆ, ಬೆಂಗಳೂರು ಮ್ಯಾರಥಾನ್, ಪ್ರೊ ಕಬಡ್ಡಿ ಮತ್ತು ಐಪಿಎಲ್‌ನಂತಹ ಕಾರ್ಯಕ್ರಮಗಳು ಬೆಂಗಳೂರು ನಗರವು ಫಿಟ್‌ನೆಸ್, ಭಾಗವಹಿಸುವಿಕೆ ಮತ್ತು ಸಾಮೂಹಿಕ ಶಕ್ತಿಯನ್ನು ಒಳಗೊಂಡ ಕ್ರೀಡಾ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದೆ. ಟಿಸಿಎಸ್ ವರ್ಲ್ಡ್ 10 ಕೆ ಕೇವಲ ಸ್ಪರ್ಧೆಯಲ್ಲ, ಬೆಂಗಳೂರಿನ ಗುರುತಾಗಿದೆ ಎಂದು ಹೇಳಿದರು.

ಏಪ್ರಿಲ್‌ನಲ್ಲಿ ಆಯೋಜಿಸಿದ್ದ ಓಟದಲ್ಲಿ 37 ದೇಶದ ಪ್ರತಿನಿಧಿಗಳು, 27 ಸಾವಿರ ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು. ಈ ಓಟವು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಜನಾಂಗಗಳಲ್ಲಿ ಒಂದೆಂದು ಪರಿಗಣಿಸಲು ಪ್ರಾರಂಭಿಸಿದ್ದು, ಹೆಮ್ಮೆಯ ವಿಷಯವಾಗಿದೆ ಎಂದರು.

18ನೇ ಆವೃತ್ತಿಯಲ್ಲಿ ₹3.83 ಕೋಟಿ ಸಂಗ್ರಹಿಸಲಾಗಿದ್ದು, ಅನೇಕ ಸರ್ಕಾರೇತರ ಸಂಸ್ಥೆಗಳು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲಾಗುತ್ತಿದೆ. ಅತ್ಯಂತ ಸಂತೋಷದಾಯಕ ವಿಷಯವಾಗಿದೆ. ಯುವಕರು ಏಕಾಂಗಿಯಾಗಿ ₹28 ಲಕ್ಷ ಸಂಗ್ರಹಿಸುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಲೋಕೋಪಕಾರ ಪ್ರಶಸ್ತಿಗಳು ಕೇವಲ ಕ್ರೀಡಾ ಕಾರ್ಯಕ್ರಮವಲ್ಲ, ಇದು ಬೆಂಗಳೂರಿನಲ್ಲಿ ಸಮಾಜಕ್ಕೆ ನೀಡುವ ಶಕ್ತಿ, ಏಕತೆ ಮತ್ತು ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಸಮಾಜದ ಆರೋಗ್ಯ ಮತ್ತು ಸಾಮೂಹಿಕ ಉನ್ನತಿಯಲ್ಲಿ ಕಾರ್ಪೊರೇಟ್ ಜಗತ್ತು ಮತ್ತು ಸಾಮಾಜಿಕ ಸಂಸ್ಥೆಗಳು ಎಷ್ಟು ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದನ್ನು ಇಂತಹ ಚಟುವಟಿಕೆಗಳಿಂದ ಕಾಣಬಹುದಾಗಿದೆ ಎಂದು ಹೇಳಿದರು.

ವಿಶೇಷ ತರಬೇತಿ ಕೇಂದ್ರ ಸ್ಥಾಪನೆ:

ಕರ್ನಾಟಕವು ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಪಡಿಸಿ ವಿಶ್ವ ದರ್ಜೆಯ ಸೌಲಭ್ಯ ನೀಡಲಾಗಿದೆ. ಯುವ ಆಟಗಾರರಿಗೆ ವೈಜ್ಞಾನಿಕ ತರಬೇತಿ ನೀಡಲು ವಿಶೇಷ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ವಿಶೇಷ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಕ್ರೀಡಾ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ ಎಂದು ತಿಳಿಸಿದರು.

ಒಟ್ಟು ₹58 .20 ಕೋಟಿ ಸಂಗ್ರಹ:

ಟಿಸಿಎಸ್‌ನ ಪ್ರಾದೇಶಿಕ ಮುಖ್ಯಸ್ಥ ಸುನೀಲ್‌ ದೇಶಪಾಂಡೆ ಮಾತನಾಡಿ, ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ದಾನ ಮನೋಭಾವನ್ನು ಬೆಳಗಿಸುತ್ತಿದೆ. ಸಾಮಾಜಿಕ ಒಳಿತಿಗಾಗಿ ಎನ್‌ಜಿಒಗಳು, ನಾಗರಿಕರು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಂದ ₹3.83 ಕೋಟಿ ಪ್ರಸಕ್ತ ಆವೃತ್ತಿಯಲ್ಲಿ ಸಂಗ್ರಹಿಸಲಾಗಿದೆ. 2008 ರಿಂದ ಈವರೆಗೆ ಒಟ್ಟು ₹58 .20 ಕೋಟಿ ಸಂಗ್ರಹಿಸಲಾಗಿದೆ. 10ಕೆ ಮ್ಯಾರಥಾನ್‌ನಿಂದ ಟಿಸಿಎಸ್‌ ಬ್ರ್ಯಾಂಡ್‌ ಮೌಲ್ಯ ಹೆಚ್ಚಾಗಿದೆ. ನ್ಯೂಯಾರ್ಕ್‌, ಲಂಡನ್‌, ಸಿಡ್ನಿ ಸೇರಿದಂತೆ ವಿಶ್ವದ 14 ಪ್ರತಿಷ್ಠಿತ ಮ್ಯಾರಥಾನ್‌ಗಳನ್ನು ಟಿಸಿಎಲ್‌ ಆಯೋಜಿಸುತ್ತಿದೆ ಎಂದು ಹೇಳಿದರು.

ಈ ವೇಳೆ ಅತ್ಯಧಿಕ ನಿಧಿ ಸಂಗ್ರಹ ಮಾಡಿದ ಎನ್‌ಜಿಒ, ರ್ಕಾರ್ಪೋರೇಟ್‌ ನಿಧಿ ಸಂಗ್ರಹ ಹಾಗೂ ವೈಯಕ್ತಿಕ ನಿಧಿ ಸಂಗ್ರಹ ಮಾಡಿದ ಸಂಸ್ಥೆ ಮತ್ತು ಪ್ರತಿನಿಧಿಗಳಿಗೆ ‘ಲೋಕೋಪಕಾರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

PREV
Read more Articles on