ಹಾವೇರಿ: ಜಿಲ್ಲೆಯ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನಹಣ್ಣಿನದ್ದೇ ದರ್ಬಾರ್. ಎಲ್ಲಿ ಹೋದರೂ ಮಾವಿನ ಪರಿಮಳವೇ ಮೂಗಿಗೆ ಅಡರುತ್ತದೆ. ಹಣ್ಣುಗಳ ರಾಜ ಮಾವಿನ ಹಣ್ಣು ಜಿಲ್ಲೆಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಪ್ರಸಕ್ತ ವರ್ಷ ಮಾವು ಇಳುವರಿ ಕುಂಠಿತವಾಗಿದ್ದರಿಂದ ದರದಲ್ಲಿ ಹೆಚ್ಚಳವಾಗಿದ್ದು, ಗ್ರಾಹಕರ ಜೇಬು ಬಿಸಿಬಿಸಿ ಆಗುತ್ತಿವೆ. ಜಿಲ್ಲೆಯಲ್ಲಿ ಚಳಿಗಾಲದ ಇಬ್ಬನಿ, ಅಕಾಲಿಕ ಆಲಿಕಲ್ಲು ಮಳೆ ಸೇರಿದಂತೆ ವಿವಿಧ ರೋಗಗಳಿಂದ ಈ ಬಾರಿ ಮಾವು ನಿರೀಕ್ಷೆಯಷ್ಟು ಇನ್ನೂ ಮಾರುಕಟ್ಟೆಗೆ ಪ್ರವೇಶಿಸಿಲ್ಲ. ಕೊಳವೆಬಾವಿಯಲ್ಲಿ ನೀರಿನ ಅಂತರ್ಜಲ ಮಟ್ಟ ಹೆಚ್ಚಾಗಿದ್ದರೂ ನಗರದ ಮಾರುಕಟ್ಟೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷವೂ ಮಾವಿನ ಇಳುವರಿ ಕುಂಠಿತಗೊಂಡಿದೆ. ಏತನ್ಮಧ್ಯೆ ಕೆಲವೆಡೆ ಈಗಾಗಲೇ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆ ಪ್ರವೇಶಿಸಿದ್ದು, ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಇಳುವರಿ ಕುಂಠಿತಗೊಂಡಿರುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿಗೆ ಡಿಮ್ಯಾಂಡ್ ಬಂದಿದ್ದು, ದರವೂ ಕೂಡ ಜಾಸ್ತಿಯಾಗಿದೆ. ಬೇಸಿಗೆಯಲ್ಲಿ ಮಾವಿನ ಹಣ್ಣುಗಳನ್ನು ಸವಿಯಬೇಕೆಂದಿರುವ ಮಾವು ಪ್ರಿಯರು ವ್ಯಾಪಾರಸ್ಥರ ಜತೆಗೆ ಚೌಕಾಸಿ ಮಾಡಿ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ಮಾರುಕಟ್ಟೆಗೆ ಲಗ್ಗೆ: ಸದ್ಯ ನಗರದ ಮಾರುಕಟ್ಟೆಯಲ್ಲಿ ರಸಪೂರಿ, ಆಪೂಸ್, ಬೇನಿಶಾ, ಜವಾರಿ, ಸಿಂಡೂಲಾ, ಕೇಸರ್ ತಳಿಯ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿವೆ. ಮುಂದಿನ ದಿನಗಳಲ್ಲಿ ಮಲ್ಲಿಕಾ, ಲಕ್ನೋ, ನೀಲಂ, ಮಲಗೋಬಾ ಸೇರಿದಂತೆ ವಿವಿಧ ತಳಿಯ ಹಣ್ಣುಗಳು ಮಾರುಕಟ್ಟೆ ಬರುತ್ತವೆ ಎಂದು ವ್ಯಾಪಾರಸ್ಥರು ತಿಳಿಸುತ್ತಾರೆ.ಎಲ್ಲೆಲ್ಲಿಂದ ಆವಕ?: ಪ್ರಸ್ತುತ ನಗರದ ಮಾರುಕಟ್ಟೆಗೆ ಹಾನಗಲ್ಲ, ಹಿರೇಕೆರೂರು, ಹಾವೇರಿ, ಕಾಗಿನೆಲೆ, ಆನವಟ್ಟಿ, ಹರಿಹರ, ದಾವಣಗೆರೆ, ಶಿವಮೊಗ್ಗ, ರಾಣಿಬೆನ್ನೂರು, ಹುಬ್ಬಳ್ಳಿ ಇತರ ಕಡೆಗಳಿಂದ ಮಾವಿನ ಹಣ್ಣು ಬರುತ್ತಿದೆ. ಸದ್ಯ ಜಿಲ್ಲೆಯ ಹಣ್ಣು ಹೆಚ್ಚು ಮಾರುಕಟ್ಟೆಗೆ ಬರುತ್ತಿದೆ ಎಂದು ವ್ಯಾಪಾರಸ್ಥ ಮೆಹಬೂಬಸಾಬ ಹರಪನಹಳ್ಳಿ ಹೇಳುತ್ತಾರೆ.ವಾಸನೆ ನೋಡಿ ಖರೀದಿ: ಮಾವಿನ ಕಾಯಿಗಳಿಗೆ ನಾನಾ ರೀತಿಯ ಪೌಡರ್‌ಗಳನ್ನು ಬಳಕೆ ಮಾಡಿ ಹಣ್ಣುಗಳ ರುಚಿ ಹೆಚ್ಚಿಸಲಾಗುತ್ತದೆ. ಜತೆಗೆ ಕೆಲ ವ್ಯಾಪಾರಿಗಳು ಹುಲ್ಲಿನಲ್ಲಿ ಇಟ್ಟು ಹಣ್ಣು ಮಾಡಿ ಮಾರಾಟ ಮಾಡುತ್ತಾರೆ. ಆದರೆ ಇವೆರಡರಲ್ಲೂ ಹಣ್ಣಿನ ರುಚಿ ಬೇರೆ ಬೇರೆಯಾಗಿರುತ್ತದೆ. ಈ ನಡುವೆ ಗ್ರಾಹಕರು ಹಣ್ಣುಗಳ ಸ್ಮೇಲ್ ನೋಡಿ ನ್ಯಾಚುರಲ್ ಆಗಿರುವ ಹಣ್ಣುಗಳನ್ನು ಖರೀದಿಸುವ ದೃಶ್ಯ ಸಾಮಾನ್ಯವಾಗಿದೆ.ವ್ಯಾಪಾರ ಜೋರು: ವರ್ಷದಿಂದ ವರ್ಷಕ್ಕೆ ಮಾವಿನ ಹಣ್ಣುಗಳ ಬೆಲೆ ಏರಿಳಿತವಾಗುವುದು ಸಾಮಾನ್ಯ. ಗ್ರಾಹಕರು ಕೂಡ ಚೌಕಾಸಿ ಮಾಡುತ್ತಾ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ಸದ್ಯ ರಸಪೂರಿ ಮಾವಿನ ಹಣ್ಣು ಕೆಜಿಗೆ ₹180ರಿಂದ ₹200ಕ್ಕೆ ಮಾರಾಟವಾಗುತ್ತಿದೆ. ಅದೇರೀತಿ ಆಪೂಸ್ ₹200ರಿಂದ ₹220, ಬೇನಿಶಾ ₹120ರಿಂದ ₹140, ಜವಾರಿ ₹80ರಿಂದ ₹100, ಸಿಂಧೂರ ₹60ರಿಂದ ₹70, ಕೇಸರ್ ₹130ರಿಂದ ₹140ಕ್ಕೆ ಮಾರಾಟ ಮಾಡಲಾಗುತ್ತಿದೆ. ದರ ಇಳಿಕೆ ಸಾಧ್ಯತೆ: ಮಾವಿನ ಸೀಜನ್ ಈಗಷ್ಟೇ ಪ್ರಾರಂಭ ಆಗಿರುವುದರಿಂದ ರೇಟ್ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ದಾಸ್ತಾನು ಬಂದರೆ ಅಥವಾ ಮಳೆ ಬಂದರೆ ದರ ಕೂಡ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಸದ್ಯದ ಮಟ್ಟಿಗೆ ರಜಾದಿನ ಹೊರತುಪಡಿಸಿ ಸೋಮವಾರ, ಗುರುವಾರ ಹೀಗೆ ಹಲವು ದಿನಗಳಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.ತಿಂಗಳ ಹಿಂದೆ ಸುರಿದ ಅಕಾಲಿಕ ಆಲಿಕಲ್ಲು ಮಳೆ, ನಾನಾ ರೋಗಗಳ ಹೊಡೆತಕ್ಕೆ ಮಾವು ಇನ್ನೂ ಹೆಚ್ಚಾಗಿ ಮಾರುಕಟ್ಟೆಗೆ ಬಂದಿಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ಮಾವಿನ ಇಳುವರಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಹಣ್ಣುಗಳು ಸಹಜವಾಗಿ ದುಬಾರಿಯಾಗಿವೆ. ಈಗಷ್ಟೇ ಸೀಜನ್ ಆರಂಭಗೊಂಡಿದ್ದು, ಪ್ರಸ್ತುತವಾಗಿ ಹಣ್ಣಿನ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಮಳೆಯಾದರೆ ಬೇಡಿಕೆ ಕಡಿಮೆಯಾಗಿ ರೇಟ್ ಕೂಡ ಇಳಿಯುತ್ತದೆ ಎಂದು ಹಣ್ಣಿನ ವ್ಯಾಪಾರಿ ಚಮನ್‌ಸಾಬ್ ದೊಡ್ಮನಿ ಹೇಳಿದರು.