ಆನೆಗಳ ಸೊಂಡಲು, ಕಿವಿ, ಕಾಲುಗಳಿಗೆ ಅಲಂಕಾರ...

KannadaprabhaNewsNetwork |  
Published : Oct 03, 2025, 01:07 AM IST
25 | Kannada Prabha

ಸಾರಾಂಶ

ಬಣ್ಣದ ಅಲಂಕಾರ ಮುಗಿದ ಮೇಲೆ ಆನೆಗಳ ಕಾಲಿಗೆ ಗೆಜ್ಜೆ, ಕತ್ತಿಗೆ ಗಂಟೆ ಸರ, ಮಾವಿನ ಸರ, ಅರಳಿ ಎಲೆಯ ಸರ, ಚಿನ್ನ ಲೇಪಿತ ಹಣೆ ಪಟ್ಟಿ ಧರಿಸಿ ಸಿಂಗರಿಸಲಾಯಿತು.

ಮೈಸೂರು  :  ವಿಜಯದಶಮಿ ಜಂಬೂಸವಾರಿಯಲ್ಲಿ ಸಾಗುವ ಆನೆಗಳು ಆಕರ್ಷಕವಾಗಿ ಕಾಣಲು ಕಲಾವಿದರು ಬಣ್ಣ ಬಣ್ಣದ ಚಿತ್ತಾರಗಳಿಂದಲೂ ಆನೆಗಳಿಗೆ ಅಲಂಕಾರ ಮಾಡಿದ್ದರು.

ದಸರಾ ಆನೆಗಳಿಗೆ ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಗುರುವಾರ ಮುಂಜಾನೆಯಿಂದಲೇ ಕಲಾವಿದರ ತಂಡವು ಅಲಂಕಾರ ಮಾಡುವ ಮೂಲಕ ಸಿದ್ಧಗೊಳಿಸಿದ್ದರು.

ಕಾಡಿನಿಂದ ಆಗಮಿಸಿದ್ದ 14 ಆನೆಗಳಿಗೂ ವಿವಿಧ ಬಣ್ಣಗಳಿಂದ ಸೊಂಡಲು, ಕಿವಿ, ಕಣ್ಣು, ಕಾಲುಗಳ ಮೇಲೆ ಅಲಂಕಾರ ಮಾಡಲಾಗಿತ್ತು. ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ ಹುಣಸೂರು ಮೂಲದ ಕಲಾವಿದರ ತಂಡವು ದಸರಾ ಆನೆಗಳಿಗೆ ವಿಶೇಷ ಬಣ್ಣದ ಅಲಂಕಾರ ಮಾಡಿದರು.

ಕಲಾವಿದರು ಮೊದಲು ಸಾಲಾನೆಗಳನ್ನು ಸಿಂಗಾರ ಮಾಡಿದರು. ನಂತರ ಕುಮ್ಕಿ ಆನೆಗಳನ್ನು ಸಿದ್ಧಗೊಳಿಸಿದರು. ಅಂತಿಮವಾಗಿ ಅಂಬಾರಿ ಆನೆ ಅಭಿಮನ್ಯು ಮೈಮೇಲೆ ಚಿತ್ತಾರ ಬಿಡಿಸಿದರು.

ಬಿಳಿ, ಹಳದಿ, ಹಸಿರು, ಕೆಂಪು, ಕೇಸರಿ ಸೇರಿದಂತೆ ವಿವಿಧ ಬಣ್ಣಗಳಿಂದ ಆನೆಗಳ ಕಿವಿಯ ಮೇಲೆ ಶಂಖ, ಚಕ್ರ, ಸೊಂಡಲಿನ ಮೇಲೆ ಗಂಡುಭೇರುಂಡ, ಹೂವು, ಎಲೆ, ಬಳ್ಳಿ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ, ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿ, ಆನೆಗಳ ಬಾಲದ ಗಾತ್ರಕ್ಕೆ ತಕ್ಕಂತೆ ಪಕ್ಷಿಚಿತ್ರ, ಹೂವು ಬಳ್ಳಿಗಳ ಅಲಂಕಾರ, ಆನೆಯ ಕಣ್ಣಿನ ಸುತ್ತಾ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ತಾರ ಬಿಡಿಸಿದ್ದರು.

ಬಣ್ಣದ ಅಲಂಕಾರ ಮುಗಿದ ಮೇಲೆ ಆನೆಗಳ ಕಾಲಿಗೆ ಗೆಜ್ಜೆ, ಕತ್ತಿಗೆ ಗಂಟೆ ಸರ, ಮಾವಿನ ಸರ, ಅರಳಿ ಎಲೆಯ ಸರ, ಚಿನ್ನ ಲೇಪಿತ ಹಣೆ ಪಟ್ಟಿ ಧರಿಸಿ ಸಿಂಗರಿಸಲಾಯಿತು. ಅಲ್ಲದೆ, ಪ್ರತಿ ಆನೆಗಳ ಮೇಲೆ ಗಾದಿ, ನಮ್ದಾ ಹಾಕಿ ಅವುಗಳ ಮೇಲೆ ವಿವಿಧ ವಿನ್ಯಾಸದ ಗಂಡುಭೇರುಂಡ ಚಿತ್ರಗಳಿರುವ ಜುಲಾ ಹೊದಿಸಲಾಯಿತು.

ಬಳಿಕ ಪ್ರತಿ ಆನೆಗಳ ಮೇಲೆ ಮಾವುತ, ವಿಶೇಷ ಮಾವುತ ಹಾಗೂ ಕಾವಾಡಿಗಳನ್ನು ನಿಯೋಜಿಸಲಾಗಿತ್ತು. ಸಮವಸ್ತ್ರ ತೊಟ್ಟ ಆನೆಗಳ ಮೇಲೆ ಕುಳಿತ ಮಾವುತರು ಆನೆಗಳನ್ನು ಮುನ್ನಡೆಸಿದರು. ವಿಶೇಷ ಮಾವುತರು ಕೆಂಪು, ಗುಲಾಬಿ ಬಣ್ಣದ ಛತ್ರಿಗಳನ್ನು ಹಿಡಿದು ಸಾಗಿದರು.

ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ, ಸಾಲಾನೆಗಳಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಪ್ರಶಾಂತ, ಸುಗ್ರೀವ, ಹೇಮಾವತಿ, ಕಂಜನ್, ಭೀಮ ಮತ್ತು ಏಕಲವ್ಯ ಆನೆಗಳು ಸಾಗಿ ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಗಜಪಡೆಯ ಕ್ಯಾಪ್ಟನ್ ಅಭಿಮನ್ಯು 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಿದರೇ ಇದರ ಅಕ್ಕಪಕ್ಕದಲ್ಲಿ ಕಾವೇರಿ ಮತ್ತು ರೂಪಾ ಕುಮ್ಕಿ ಆನೆಗಳು ಸಾಗಿದವು. ಒಟ್ಟಿನಲ್ಲಿ ಗಜಪಡೆಯು ವಿಜಯದಶಮಿ ಮೆರವಣಿಗೆಗೆ ಮೆರುಗು ಹೆಚ್ಚಿಸಿದವು. 

PREV
Read more Articles on

Recommended Stories

ಒಂದು ದಿನದ ಟ್ರಾಫಿಕ್‌ ಪೊಲೀಸ್‌ ಆದ ಶಾಸಕ ಸುರೇಶ್‌ ಕುಮಾರ್‌!
ಬೀದರ್‌ಗೆ ರಾಷ್ಟ್ರ ಮಟ್ಟದಲ್ಲಿ ‘ಅತ್ಯುತ್ತಮ ಜಿಲ್ಲೆ’ ಪ್ರಶಸ್ತಿ