ಎಚ್.ಕೆ.ಬಿ. ಸ್ವಾಮಿ
ಕಳೆದ ವಿಧಾನಸಭಾ ಚುನಾವಣೆ ಬಳಿಕ ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿಯಲ್ಲಿನ ಒಳ ಬೇಗುದಿ ಲೋಕಸಭಾ ಚುನಾವಣೆಯ ಈಗಿನ ಸಂದರ್ಭದಲ್ಲಿ ಸ್ಫೋಟಗೊಳ್ಳಲು ಸಜ್ಜಾದಂತಿದೆ.
ಆ ಚುನಾವಣೆಯಲ್ಲಿನ ಕುಮಾರ್ ಬಂಗಾರಪ್ಪ ವರ್ಸಸ್ ನಮೋ ವೇದಿಕೆಯ ಮುಖಂಡರ ಜಿದ್ದಾಜಿದ್ದಿ ಕಾಳಗ ಪುನಃ ಬೀದಿಗೆ ಬರುವ ಸಾಧ್ಯತೆ ಕಂಡು ಬರುತ್ತಿದ್ದು, ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಸಂಕಟ ತರುವ ಸಂದರ್ಭ ಎದುರಾಗಿದೆ.ಹೇಗೋ ಮಾಡಿ ಮುನಿಸಿಕೊಂಡಿದ್ದ ಕುಮಾರ್ ಬಂಗಾರಪ್ಪ ಅವರನ್ನು ಚುನಾವಣಾ ರಂಗಕ್ಕೆ ಕರೆ ತಂದು ಪ್ರಚಾರ ಆರಂಭಿಸಿದ್ದ ರಾಘವೇಂದ್ರ ಅವರಿಗೆ ಇದೀಗ ನಮೋ ವೇದಿಕೆ ಮತ್ತೆ ಮಗ್ಗುಲು ಮುಳ್ಳಾಗುವಂತಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಲೆಂದೇ ಹುಟ್ಟುಕೊಂಡಿದ್ದ ನಮೋ ವೇದಿಕೆಯನ್ನು ಮುಂದಿಟ್ಟುಕೊಂಡು ಕೆಲವು ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮಧು ಬಂಗಾರಪ್ಪ ಅವರ ಗೆಲುವಿಗೆ ಕಾರಣರಾಗಿದ್ದಾರೆ. ಪಕ್ಷಕ್ಕೆ ಮತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ಕುಮಾರ ಬಂಗಾರಪ್ಪ ಅವರಿಗೆ ದ್ರೋಹ ಬಗೆದಿದ್ದಾರೆ. ಆದರೆ ಅವರ ವಿರುದ್ಧ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಅಭಿಪ್ರಾಯ ಈ ಸಭೆಯಲ್ಲಿ ವ್ಯಕ್ತವಾಯಿತು.
ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟನೆ ಬೇಕಿದೆ. ಅಲ್ಲಿಯವರೆಗೂ ಕುಮಾರ ಬಂಗಾರಪ್ಪ ಅವರು ಯಾವುದೇ ಕಾರಣಕ್ಕೂ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರವಾಗಿ ಪ್ರಚಾರ ನಡೆಸದಂತೆ ತಾಕೀತು ಮಾಡಿ ಸಹಿ ಸಂಗ್ರಹಿಸಿದ್ದಾರೆ.
ಸ್ವಪಕ್ಷೀಯರಿಂದಲೇ ಸೋಲು ಅನುಭವಿಸುವಂತಾಗಿದೆ ಎಂದು ಒಂದು ವರ್ಷದಿಂದಲೂ ಬಿಜೆಪಿ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಗೊಳ್ಳದೆ ಅಂತರ ಕಾಯ್ದುಕೊಂಡು ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ಕುಮಾರ ಬಂಗಾರಪ್ಪ ಬಿಜೆಪಿಯಲ್ಲಿ ಸಕ್ರಿಯ ವಾಗಿರುವ ನಮೋ ವೇದಿಕೆ ಮುಖಂಡರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬಂತೆ ಕಾಣುತ್ತಿದೆ. ತಮ್ಮ ಬೆಂಬಲಿಗರ ಮೂಲಕ ಜಿಲ್ಲಾ ವರಿಷ್ಠರ ಮುಂದೆ ದಾಳ ಉರುಳಿಸಿದ್ದಾರೆ.
ನಮೋ ವೇದಕೆಯಲ್ಲಿ ಗುರುತಿಸಿಕೊಂಡವರಿಗೆ ಈ ಸಂದರ್ಭದಲ್ಲಿ ನೀಡಿರುವ ವಿವಿಧ ಹುದ್ಧೆಗಳಿಂದ ಅವರನ್ನು ಬಿಡುಗಡೆಗೊಳಿಸಬೇಕು ಮತ್ತು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಇದನ್ನು ತಮ್ಮ ಬೆಂಬಲಿಗರಿಂದ ಹೈಕಮಾಂಡ್‍ಗೆ ಸಂದೇಶ ರವಾನಿಸಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ.
ಎಂ.ಡಿ. ಉಮೇಶ, ಮಾಜಿ ಪುರಸಭಾ ಅಧ್ಯಕ್ಷ ಹಾಲಿ ಸದಸ್ಯ, ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ.
ಮಲ್ಲಿಕಾರ್ಜುನ ವೃತ್ತಿಕೊಪ್ಪ, ಮಾಜಿ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಗುರುಕುಮಾರ ಪಾಟೀಲ್, ಜಿ.ಪಂ. ಮಾಜಿ ಸದಸ್ಯ