ಪ್ರಜ್ಞೆ ತಪ್ಪಿ ಕೊಠಡಿಯಲ್ಲಿಯೇ ಕುಸಿದು ಬಿದ್ದ ಸಹಾಯಕ ಪ್ರಾಧ್ಯಾಪಕಿ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ತರಗತಿಯಲ್ಲಿ ಪಾಠ ಮಾಡುತ್ತಿರುವ ವೇಳೆಯೇ ಸಹಾಯಕ ಪ್ರಾಧ್ಯಾಪಕಿಯೊಬ್ಬರು ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಘಟನೆ ಯಲ್ಲಾಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ.
ಯಲ್ಲಾಪುರ: ತರಗತಿಯಲ್ಲಿ ಪಾಠ ಮಾಡುತ್ತಿರುವ ವೇಳೆಯೇ ಸಹಾಯಕ ಪ್ರಾಧ್ಯಾಪಕಿಯೊಬ್ಬರು ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಘಟನೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ. ಅಸ್ವಸ್ಥಗೊಂಡಿದ್ದ ಸಹಾಯಕ ಪ್ರಾಧ್ಯಾಪಕಿ ಸುರೇಖಾ ತಡವಲ ಅವರು ಸದ್ಯ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಭಾರಿ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡ ಭವ್ಯಾ ಸಿ. ಅವರು, ಸುರೇಖಾ ತಡವಲಗೆ ಒಂದರ ಮೇಲೊಂದರಂತೆ ಒಟ್ಟು ೧೦ ಮೆಮೋ ನೀಡಿದ್ದಾರಂತೆ. ಅದರಿಂದ ಮನನೊಂದ ಅವರು ಆಘಾತಗೊಂಡು ಕಾಲೇಜಿನಲ್ಲಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾರೆ ಎನ್ನಲಾಗಿದೆ. ಪ್ರಭಾರಿ ಪ್ರಾಚಾರ್ಯೆ ಭವ್ಯಾ ಅವರು ತಮಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದು, ತಕ್ಷಣ ಅವರನ್ನು ವರ್ಗಾಯಿಸುವಂತೆ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿರುವದು ಚರ್ಚೆಗೆ ಗ್ರಾಸವಾಗಿದೆ. ಪಟ್ಟಣದಲ್ಲಿ ಇದೊಂದೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಆಗಿದ್ದು, ಪ್ರಾರಂಭವಾಗಿ ೩೦ ವರ್ಷ ಕಳೆದಿದೆ. ಸುಮಾರು ದಿನಗಳಿಂದ ಇಲ್ಲಿನ ಸಿಬ್ಬಂದಿಯಲ್ಲಿ ಎರಡು ಬಣಗಳಾಗಿ ಕಾಲೇಜಿನ ವಾತಾವರಣ ಹದಗೆಟ್ಟಿದೆ. ಹಿಂದೆ ಸ್ವತಃ ಶಾಸಕ ಶಿವರಾಮ ಹೆಬ್ಬಾರ ಕಾಲೇಜಿಗೆ ತೆರಳಿ ಸಿಬ್ಬಂದಿಯ ಸಭೆ ನಡೆಸಿ ತರಾಟೆಗೆ ತೆಗೆದುಕೊಂಡಿದ್ದರಿಂದ ಘರ್ಷಣೆ ಬೀದಿಗೆ ಬಂದಿರಲಿಲ್ಲ. ಹೊಸ ಪ್ರಾಚಾರ್ಯರ ನಡೆಯಿಂದ ಪುನಃ ಕಾಲೇಜಿನ ಉಪನ್ಯಾಸಕರ ಜಗಳ ಬೀದಿಗೆ ಬಂದಿದೆ. ಕಾಲೇಜಿನಲ್ಲಿ ಉಪನ್ಯಾಸಕರು ಪಾಠ-ಪ್ರವಚನ ಮಾಡಬೇಕೇ ವಿನಃ ಗೊಂದಲ ಸೃಷ್ಟಿಸಿ ಗುಂಪುಗಾರಿಕೆ ಮಾಡಿ ಕಾಲೇಜು ವಾತಾವರಣ ಕೆಡಿಸಬಾರದು. ಕಾಲೇಜಿನ ಸ್ಥಿತಿಗತಿಯ ಕುರಿತು ಶುಕ್ರವಾರ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದ್ದಾರೆ. ನಾನು ಸದ್ಯ ಈ ಕಾಲೇಜಿಗೆ ಬಂದಿದ್ದೇನೆ. ನಿಯಮಾವಳಿ ಪ್ರಕಾರ ಪ್ರಾಚಾರ್ಯಳಾಗಿ ಅಧಿಕಾರ ವಹಿಸಿಕೊಂಡಿದ್ದೇನೆ ಮತ್ತು ಯಾವುದೇ ಉಪನ್ಯಾಸಕರ ಮೇಲೆ ಕಾನೂನಿನ ವ್ಯಾಪ್ತಿಯಲ್ಲೇ ನೋಟಿಸ್ ನೀಡಿದ್ದೇನೆ ಪ್ರಭಾರ ಪ್ರಾಚಾರ್ಯೆ ಭವ್ಯಾ ಸಿ, ತಿಳಿಸಿದ್ದಾರೆ.

Share this article