ರಾಜ್ಯದಲ್ಲಿ ಬಿಜೆಪಿ ಹತ್ಯೆ ಮಾಡಿದ ಯತ್ನಾಳ: ಬಿ.ಕೆ.ಹರಿಪ್ರಸಾದ್‌

KannadaprabhaNewsNetwork |  
Published : May 05, 2024, 02:01 AM IST
(ಪೋಟೊ 4 ಬಿಕೆಟಿ 9, ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು) | Kannada Prabha

ಸಾರಾಂಶ

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ಹುದ್ದೆಗೆ ₹ 2500 ಕೋಟಿ ಡೀಲ್‌ ಸೇರಿ ಬಿಜೆಪಿ ಮುಖಂಡರ ವಿರುದ್ಧವೇ ಗಂಭೀರ ಆರೋಪ ಮಾಡಿದರೂ ಬಿಜೆಪಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ಹುದ್ದೆಗೆ ₹ 2500 ಕೋಟಿ ಡೀಲ್‌ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಬಿಜೆಪಿ ನಾಯಕರ ವಿರುದ್ಧವೇ ಬಾಯಿಗೆ ಬಂದಂತೆ ಮಾತನಾಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಯತ್ನಾಳ ಹತ್ಯೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನೇಹಾ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಯತ್ನಾಳ ನೇಹಾ ಪ್ರಕರಣದಲ್ಲಿ ಹೇಳಿಕೆ ನೀಡುತ್ತಿರುವುದರ ಹಿಂದೆ ಬೇರೆ ಉದ್ದೇಶ ಇದೆ. ನೇಹಾ ಹತ್ಯೆ ಆರೋಪಿ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ತಾವು ಹಿಂದೆ ನೀಡಿದ್ದ ಭರವಸೆಗಳನ್ನು 10 ವರ್ಷಗಳಾದರೂ ಈಡೇರಿಸಿಲ್ಲ. ಈವರೆಗೂ ಮೋದಿ ಒಂದೇ ಒಂದು ಸುದ್ದಿಗೋಷ್ಠಿ ಮಾಡಿಲ್ಲ. ಕಾಂಗ್ರೆಸ್ ಏನು ಮಾಡಿದೆ ಎಂಬುದು ಜನರಿಗೆ ಅರಿವಿದೆ. ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ, ನ್ಯಾಯಯಾತ್ರೆ ಮಾಡಿದ ಬಳಿಕ ಪ್ರಣಾಳಿಕೆ ಸಿದ್ಧಪಡಿಸಿ 5 ಗ್ಯಾರಂಟಿಗಳ ಭರವಸೆ ನೀಡಿದ್ದಾರೆ. ಬಿಜೆಪಿಯವರು ಕೇವಲ ಸ್ಲೋಗನ್‌ಗಳನ್ನು ರಚಿಸುವಲ್ಲಿ ಬ್ಯುಜಿಯಾಗಿದ್ದಾರೆ. ಅಚ್ಛೇ ದಿನ್, ಆತ್ಮ ನಿರ್ಭರ್‌, ಚೌಕಿದಾರ್ ಮುಗಿದು ಹೋಗಿದ್ದು, ಅಮೃತ ಕಾಲ ಅಂತ ಶುರು ಮಾಡಿದ್ದಾರೆ. ಆದರೆ ಭಾರತದಲ್ಲಿ ಬಿಜೆಪಿಯಿಂದ ಅನ್ಯಾಯದ ಕಾಲ ಆರಂಭವಾಗಿದೆ ಎಂದು ಟೀಕಿಸಿದರು.

ಗ್ಯಾರಂಟಿಗೆ ಹಣದ ಕೊರತೆ ಆಗಲ್ಲ. ಈ ಹಿಂದೆ ರಾಜ್ಯದಲ್ಲಿ ಭರವಸೆ ನೀಡಿದಂತೆ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ 5 ನ್ಯಾಯ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗುವುದು. 25 ಕೋಟಿ ಕುಟುಂಬಗಳಿಗೆ ವರ್ಷಕ್ಕೆ ತಲಾ ₹ 1 ಲಕ್ಷ ನೀಡಲಾಗುವುದು. ಉದ್ಯಮಿಗಳ ಸಾಲಮನ್ನಾ ಬದಲು ಇಂತಹ ಜನಪರ ಯೋಜನೆಗಳಿಗೆ ಅನುದಾನ ಮೀಸಲಿಡುತ್ತೇವೆ ಎಂದು ತಿಳಿಸಿದರು.

ಪ್ರಧಾನಿ ಮೋದಿಗೆ ಸವಾಲು:

ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ. ದುರಂತ ಎಂದರೆ ಹೇಳಿದಂತೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಸೋನಿಯಾಗಾಂಧಿ ಭಯಕ್ಕೆ ಬಿದ್ದಿಲ್ಲ. ಈ ಹಿಂದೆ ಬಳ್ಳಾರಿ, ರಾಯಬರೇಲಿ, ಅಮೇಠಿ ಸೇರಿದಂತೆ ಅನೇಕ ಕಡೆಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಮೋದಿಗೆ ತಾಕತ್ತಿದ್ದರೆ ಒಂದು ಸುದ್ದಿಗೋಷ್ಠಿ ನಡೆಸಲಿ ಎಂದು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ರಾಜಶೇಖರ ಗುಡದಿನ್ನಿ, ರಮೇಶ ಬದ್ನೂರ, ಚಂದ್ರ ಶೇಖರ ರಾಠೋಡ, ಬಿ.ಟಿ. ಶ್ರೀನಿವಾಸಮೂರ್ತಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ