ಹೊನ್ನಾವರ: ಯಕ್ಷಗಾನ ಸರ್ವಕಲೆಗಳ ಆಗರ, ಅದು ಮಾತೃಸ್ಥಾನದಲ್ಲಿದೆ. ಅಂತಹ ಯಕ್ಷಗಾನ ಕಲೆ ತನ್ನ ಸತ್ವವನ್ನು, ತತ್ವವನ್ನು ಕಳೆದುಕೊಳ್ಳದೆ ಮುಂದುವರಿಯುವಲ್ಲಿ ಕಲಾವಿದನ ಹಾಗೂ ಕಲಾಪ್ರೇಕ್ಷಕನ ಪಾತ್ರ ಅತ್ಯಮೂಲ್ಯವಾಗಿದೆ ಎಂದು ಮಾರುತಿ ಗುರೂಜಿ ನುಡಿದರು.
ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯ ವೀರಾಂಜನೇಯ ಸಭಾಭವನದಲ್ಲಿ ನಡೆದ ‘ಯಕ್ಷ ಪೂರ್ಣಿಮೆ - ೨೦೨೪’ರ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ವಿಶೇಷ ಆಹ್ವಾನಿತರಾದ ಯಕ್ಷಗಾನ ಕಲಾವಿದರು, ವಿಮರ್ಶಕರೂ ಆದ ಉಜಿರೆ ಅಶೋಕ ಭಟ್ ಮಾತನಾಡಿ, ಕಲಾವಿದರಿಗೆ ಯಕ್ಷಗಾನದ ಪ್ರಾವಿತ್ರ‍್ಯ ಉಳಿಸಿಕೊಳ್ಳಲು ಕಿವಿಮಾತುಗಳನ್ನಾಡಿ, ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಕಲಾರಾಧನೆ, ಕಲಾಸಂರಕ್ಷಣ, ಕಲಾವಿಸ್ತರಣ, ಕಲಾಶಿಕ್ಷಣಗಳು ನಡೆಯುತ್ತಿವೆ ಎಂದು ಸಂತಸಪಟ್ಟರು.ಅಧ್ಯಕ್ಷತೆ ವಹಿಸಿದ್ದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಮಾತನಾಡಿ, ಹಲವಾರು ವರ್ಷಗಳಿಂದ ಶಿಕ್ಷಣ ನೀಡುತ್ತಾ, ಕಲೆಗೆ ಪ್ರೋತ್ಸಾಹ ನೀಡುತ್ತಾ ಈ ಭಾಗದ ಜನಮಾನಸದಲ್ಲಿ ನೆಲೆ ನಿಂತ ಈ ಕ್ಷೇತ್ರ ಎಲ್ಲರಿಗೂ ಬಹಳ ಉಪಕಾರಿಯಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು, ಸಿಬ್ಬಂದಿ, ಕಲಾವಿದರು, ಭಕ್ತರು ಭಾಗವಹಿಸಿದ್ದರು.ಯಕ್ಷಗಾನದ ಕಲೆಗೆ ವೇದಿಕೆ: ಸೇವೆಯ ಜತೆಯಲ್ಲಿ ನಾಡಿನ ಪ್ರಸಿದ್ಧ ಕಲೆಯಾದ ಯಕ್ಷಗಾನದ ಕಲೆಗೆ ವೇದಿಕೆಯೊದಗಿಸುವುದು ‘ಯಕ್ಷ ಪೂರ್ಣಿಮೆ’ಯ ಪ್ರಮುಖ ಉದ್ದೇಶ. ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಅವರು ಇದರ ರುವಾರಿ. ಶ್ರೀ ವೀರಾಂಜನೇಯ ಯಕ್ಷಮಿತ್ರ ಬಳಗ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ನಿರ್ಮಾಣಗೊಳ್ಳುವ ವೇದಿಕೆಯಲ್ಲಿ ಕಲಾವಿದರು ಸಹ ಪರಸ್ಪರ ಕಲಿತು, ಕಲಿಸಿ ಕಲೆಯ ಶ್ರೇಷ್ಠತೆ ಗಳಿಸುತ್ತಾರೆ. ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಪ್ರತಿ ವರ್ಷದಂತೆ ನವರಾತ್ರಿ ಉತ್ಸವದ ಜತೆಯಲ್ಲಿ ಕಲಾರಾಧನೆಯ ಪ್ರತೀಕವಾಗಿ ೧೫ ದಿನಗಳ ಪರ್ಯಂತ ‘ಯಕ್ಷ ಪೂರ್ಣಿಮೆ’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.