ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ವಿವೇಕಾನಂದ ರಂಗ ಮಂದಿರದಲ್ಲಿ ಭಾನುವಾರ ನಡೆದ ಎಂ.ಆರ್.ಎಂ.ಪ್ರಕಾಶನದ ಉದ್ಘಾಟನೆ, ಮೂರು ಕೃತಿಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾಷೆಯ ಮೂಲಕ ಯಾರನ್ನು ಬೇಕಾದರೂ ಸುಲಭವಾಗಿ ಆಕರ್ಷಿಸಬಹುದು. ಭಾಷೆಗೆ ಅಂತಹದ್ದೊಂದು ಶಕ್ತಿ ಇದೆ. ನಮ್ಮ ನಡತೆ ಮತ್ತು ವ್ಯಕ್ತಿತ್ವದಿಂದ ಮಾತಿನ ಚಾಟಿ ಬೀಸಬೇಕು. ಮಾತನಾಡುವಾಗ ನಮ್ಮ ಜವಾಬ್ದಾರಿಗಳು, ಹೊಣೆಗಾರಿಕೆ ಹೆಚ್ಚಾಗುತ್ತಿರುತ್ತವೆ ಎನ್ನುವುದರ ಅರಿವಿರಬೇಕು. ಒಮ್ಮೆ ಮಾತನ್ನು ಕೆಡಿಸಿಕೊಂಡರೆ ಅದರ ಮೇಲಿನ ಹೊಣೆಗಾರಿಕೆಯನ್ನು ಮತ್ತೆ ಸಂಪಾದಿಸಿಕೊಳ್ಳುವುದು ತುಂಬಾ ಕಷ್ಟ ಎಂದರು.ಕತೆಗಾರನಾದವನು ಕತೆಯನ್ನು ಹೇಳುತ್ತಾ ಹೇಳುತ್ತಾ ಅದನ್ನು ಉಳಿಸಿಕೊಂಡು ಹೋಗುವ ಮನಸ್ಥಿತಿಯನ್ನೂ ಹೊಂದಿರಬೇಕು. ಕತೆ ಹೇಳುವಾಗ ಕೇಳುವವರ ಮನಃಪರಿವರ್ತನೆ ಮಾಡುವುದರ ಜೊತೆಯಲ್ಲೇ ನಿಮ್ಮ ಅಸ್ತಿತ್ವವನ್ನೂ ಉಳಿಸಿಕೊಳ್ಳಬೇಕು. ನಾಳೆಯೂ ಕತೆಯನ್ನು ಹೇಳುವ ಮನಸ್ಥಿತಿಯನ್ನು ಇಟ್ಟುಕೊಂಡಿರಬೇಕು. ಅದೇ ರೀತಿ ಕವಿಗಳು, ಸಾಹಿತಿಗಳೂ ಕೂಡ ಬರವಣಿಗೆಯನ್ನು ನಿರಂತರವಾಗಿ ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ನುಡಿದರು.
ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಪುಸ್ತಕ ಸಂಸ್ಕೃತಿ ಇಂದು ಅಧೋಗತಿಗೆ ಇಳಿದಿದೆ. ಸರ್ಕಾರಗಳು ಪುಸ್ತಕ ಸಂಸ್ಕೃತಿಯ ಕತ್ತನ್ನು ಹಿಸುಕುತ್ತಿದ್ದಾರೆ. ಗ್ರಂಥಾಲಯಗಳು ಪುಸ್ತಕಗಳನ್ನು ಖರೀದಿ ಮಾಡುತ್ತಿಲ್ಲ. ಹಲವು ದಶಕಗಳ ಹಿಂದೆ ಖರೀದಿ ಮಾಡಿದ ಪುಸ್ತಕಗಳಿಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಇ.ಚನ್ನಬಸವಣ್ಣ ಹಾಗೂ ಮದ್ದೂರು ತಾಲೂಕು ಮಾದರಹಳ್ಳಿಯ ಸಾವಯವ ಕೃಷಿಕ ಮಾದರಹಳ್ಳಿ ಈರೇಗೌಡ ಅವರ ಅಸಾಮಾನ್ಯ ಸಾಧನೆ ಮತ್ತು ಸಾಮಾಜಿಕ ಕೊಡುಗೆಯನ್ನು ಪರಿಗಣಿಸಿ ಅಭಿನಂದಿಸಲಾಯಿತು.
ದಿವ್ಯಸಾನ್ನಿಧ್ಯವನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಎಂಆರ್‌ಎಂ ಪ್ರಕಾಶಕ ಮಂಜು ಮುತ್ತೇಗೆರೆ, ದ.ಕೋ.ಹಳ್ಳಿ ಚಂದ್ರಶೇಖರ ಇದ್ದರು.