ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಮಂಜುನಾಥ್ ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬುಡಕಟ್ಟು ಜನಾಂಗ ಪ್ರಬಲವಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ನಾಯಕತ್ವ ಬೇಕು. ನೂತನ ಅಧ್ಯಕ್ಷ ಮಂಜುನಾಥ್‍ಗೆ ಸಂಘಟನೆ ಹೂವಿನ ಹಾಸಿಗೆಯಿಲ್ಲ. ಅನೇಕ ಸವಾಲುಗಳಿವೆ. ಸ್ಥಿರವಾದ ನಾಯಕತ್ವವಿಲ್ಲದ ಕಡೆ ಅರಾಜಕತೆಯಿರುತ್ತದೆ. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷವನ್ನು ಗೆಲ್ಲಿಸುವತ್ತ ಗಮನ ಕೊಡುವಂತೆ ಮನವಿ ಮಾಡಿದರು.
ರಾಷ್ಟ್ರೀಯ ಪಕ್ಷದ ಜೊತೆ ಮಾಡಿಕೊಂಡಿರುವ ಮೈತ್ರಿ ಮಲಿನವಾಗಬಾರದು. ಬೇಗುದಿ, ಕೆಟ್ಟ ಭಾವನೆಯನ್ನು ಬದಿಗಿಟ್ಟು ಪಕ್ಷವನ್ನು ಗೆಲ್ಲಿಸಿಕೊಳ್ಳಬೇಕು. ಪ್ರಾಮಾಣಿಕ ಕಾರ್ಯಕರ್ತರ ಶ್ರಮಕ್ಕೆ ಬೆಲೆ, ಗೌರವ ಸಿಗಬೇಕು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕಾಗಿ ಬಳಸಿಕೊಳ್ಳುತ್ತಿದೆಯೇ ವಿನಃ ಯಾವುದೇ ಅಧಿಕಾರ ನೀಡಿಲ್ಲ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಭೂಮಿಕೆ ಸಿದ್ದವಾಗಬೇಕಿದೆ ಎಂದರು.ಮಾಜಿ ಅಧ್ಯಕ್ಷ ಎಂ.ಜಯಣ್ಣ ಮಾತನಾಡಿ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕಿದೆ.ಜಿಲ್ಲೆಯಲ್ಲಿ ನಮ್ಮ ಪಕ್ಷದ ಶಾಸಕರುಗಳಿಲ್ಲದ ಕಾರಣ ಕಾರ್ಯಕರ್ತರು ಸೋತು ಬೆಂಡಾಗಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಎರಡರಿಂದ ಮೂರು ಸ್ಥಾನಗಳನ್ನಾದರೂ ಗೆಲ್ಲಬೇಕು. ಪಕ್ಷದಲ್ಲಿ ಅನುಭವಿಗಳಿದ್ದಾರೆ. ಎಲ್ಲರ ಸಲಹೆ ಮಾರ್ಗದರ್ಶನದಂತೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವಂತೆ ತಿಳಿಸಿದರು.
ನೂತನ ಜಿಲ್ಲಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಕೆ.ಮಂಜುನಾಥ್ ಮಾತನಾಡಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳಬೇಕಾದರೆ ತಳಮಟ್ಟದಿಂದ ಪಕ್ಷವನ್ನು ಕಟ್ಟಬೇಕು. ಮಾಜಿ ಜಿಲ್ಲಾಧ್ಯಕ್ಷರುಗಳು ಹಾಗೂ ಕಾರ್ಯಕರ್ತರು, ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಜೆಡಿಎಸ್ ಎಂದಿಗೂ ಕಾಡುಗೊಲ್ಲರು, ಯಾದವರ ವಿರೋಧಿಯಲ್ಲ. ಸಂಘಟನೆಯಲ್ಲಿ ಬೇಜವಾಬ್ದಾರಿ ತೋರಲ್ಲ ಎಂದು ಆಶ್ವಾಸನೆ ನೀಡಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರವೀಂದ್ರಪ್ಪ ಮಾತನಾಡಿ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆಯಿಟ್ಟುಕೊಂಡಿರುವ ಜೆಡಿಎಸ್ ನಿಂದ ಮಾತ್ರ ತಳ ಮಟ್ಟದ ಕಾರ್ಯಕರ್ತನು ಅಧಿಕಾರ ಹಿಡಿಯಬಹುದು. ಹೆಚ್.ಡಿ.ಕುಮಾರಸ್ವಾಮಿರವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಪಕ್ಷ ಸದಾ ಅನ್ನದಾತ ರೈತನ ಪರವಾಗಿದೆ ಎನ್ನುವುದನ್ನು ಸಾಬೀತುಪಡಿಸಿದ್ದರು. ಈಗಿನ ಕಾಂಗ್ರೆಸ್ ಸರ್ಕಾರ ಜನರ ತೆರಿಗೆ ಹಣದಿಂದಲೇ ಬಿಟ್ಟಿ ಭಾಗ್ಯಗಳನ್ನು ನೀಡಿ ಖಜಾನೆಯನ್ನು ದಿವಾಳಿಯಾಗಿಸಿದೆ ಎಂದರು.ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಜೆ.ಬಿ.ಶೇಖರ್, ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ನಗರಸಭೆ ಮಾಜಿ ಸದಸ್ಯ ನಸ್ರುಲ್ಲಾ, ಯುವ ವಕೀಲ ಓ.ಪ್ರತಾಪ್‍ಜೋಗಿ, ಮಠದಹಟ್ಟಿ ವೀರಣ್ಣ, ಎಂ.ಡಿ.ರಮೇಶ್‍ಕುಮಾರ್, ಶಿವಪ್ರಸಾದ್‍ಗೌಡ, ಶಂಕರಮೂರ್ತಿ, ಶಿವಶಂಕರ್, ವೀರಭದ್ರ, ಕರಿಬಸಪ್ಪ, ಆನಂದ,
ತಿಪ್ಪೀರಣ್ಣ, ಹನುಮಂತರಾಯ ಇದ್ದರು.