;Resize=(412,232))
ಬೆಂಗಳೂರು : ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಕಲಿಕಾ ಕೇಂದ್ರವಾಗಿರುವ ದುಬೈನ ‘ಕನ್ನಡ ಪಾಠ ಶಾಲೆ’ಯ 12ನೇ ವರ್ಷದ ವಾರ್ಷಿಕೋತ್ಸವಕ್ಕೆ ಆಗಮಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಆಹ್ವಾನಿಸಲಾಗಿದೆ.
ಭಾನುವಾರ ಕನ್ನಡ ಪಾಠ ಶಾಲೆ ದುಬೈ ಮತ್ತು ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಅವರ ನೇತೃತ್ವದ ನಿಯೋಗ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿತು. ದುಬೈನ ಊದ್ ಮೆತಾದಲ್ಲಿರುವ ಇಂಡಿಯನ್ ಹೈಸ್ಕೂಲ್‌ನಲ್ಲಿ ಏಪ್ರಿಲ್ 26ರಂದು ಬೆಳಗ್ಗೆ 10ಕ್ಕೆ ಹಮ್ಮಿಕೊಂಡಿರುವ ಕನ್ನಡ ಪಾಠ ಶಾಲೆಯ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಪ್ರತಿಭಾವಂತರಿಗೆ ಪ್ರಮಾಣ ಪತ್ರ ವಿತರಿಸಬೇಕೆಂದು ಮನವಿ ಸಲ್ಲಿಸಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಧರ್ ನಾಗರಾಜಪ್ಪ ಅವರು, ದುಬೈ ಕನ್ನಡ ಪಾಠಶಾಲೆಯ ವಾರ್ಷಿಕೋತ್ಸವಕ್ಕೆ ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವಂತೆ ರಾಜ್ಯಪಾಲ ಥಾವರ್‌ಚಂದ್ ಅವರಿಗೆ ಆಹ್ವಾನಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ವಿದೇಶದಲ್ಲಿ ಕನ್ನಡ ಕಲಿತ ಅನಿವಾಸಿ ಕನ್ನಡಿಗರ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ಕರ್ನಾಟಕ್ಕೆ ಬಂದಾಗ ಕೆಸಿಇಟಿ ಪರೀಕ್ಷೆಗೆ ಅರ್ಹತೆ ಪಡೆಯಲು ಕಡ್ಡಾಯವಾಗಿ ಮತ್ತೊಮ್ಮೆ ಕನ್ನಡ ಭಾಷಾ ಪರೀಕ್ಷೆ ಬರೆಯಲೇಬೇಕಾದ ನಿಯಮವಿದೆ. ಈ ನಿಯಮಕ್ಕೆ ವಿನಾಯಿತಿ ನೀಡಿ ಅನಿವಾಸಿ ಕನ್ನಡ ಕಲಿಕಾ ವೇದಿಕೆಯಾದ ಕನ್ನಡ ಪಾಠ ಶಾಲೆ ದುಬೈ ನೀಡುವ ಪ್ರಮಾಣ ಪತ್ರವನ್ನು ಮಾನ್ಯ ಮಾಡಬೇಕು. ಅನಿವಾಸಿ ಕನ್ನಡಿಗರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ದುಬೈನಲ್ಲಿ ಸುಮಾರು 1450ಕ್ಕೂ ಹೆಚ್ಚು ಮಂದಿ ಅನಿವಾಸಿ ಭಾರತೀಯರು ಕನ್ನಡ ಕಲಿಯುತ್ತಿದ್ದಾರೆ. ಈಗಾಗಲೇ 20 ಶಿಕ್ಷಕರು ಕನ್ನಡ ಕಲಿಸುತ್ತಿದ್ದು, ಇನ್ನೂ ಹೆಚ್ಚಿನ ಶಿಕ್ಷಕರ ಅವಶ್ಯಕತೆ ಇದೆ. ಆದ್ದರಿಂದ ಆನ್‌ಲೈನ್‌ನಲ್ಲಿ ಕನ್ನಡ ಪಾಠ ಕಲಿಸುವಂತ 5 ಶಿಕ್ಷಕರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಬೇಕೆಂದು ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಜೊತೆಗೆ ಯುಎಇನಲ್ಲಿ 1985ರಲ್ಲಿ ಸ್ಥಾಪಿಸಿರುವ ಕರ್ನಾಟಕ ಸಂಘ ದುಬೈ ಕರ್ನಾಟಕ ರಾಜ್ಯೋತ್ಸವವನ್ನು ನಿರಂತರವಾಗಿ ಆಚರಿಸಿಕೊಂಡು ಬರುತ್ತಿದೆ. ಅದಕ್ಕಾಗಿ ಸುಮಾರು ಒಂದು ಕೋಟಿ ರು.ಗಳಿಗೂ ಹೆಚ್ಚು ವೆಚ್ಚವಾಗುತ್ತಿದೆ. ಕನ್ನಡಿಗರ ಈ ನಾಡಹಬ್ಬದ ಆಚರಣೆಗೆ ರಾಜ್ಯ ಸರ್ಕಾರ 50 ಲಕ್ಷ ರು.ಗಳ ಅನುದಾನ ನೀಡಿ ಸಹಕರಿಸಬೇಕು ಎಂದು ಮನವಿ ಸಲ್ಲಿಸಿದ್ದೇವೆ ಎಂದರು.
ನಿಯೋಗದಲ್ಲಿ ಕನ್ನಡ ಪಾಠ ಶಾಲೆಯ ಸಲಹೆಗಾರ ಎಚ್.ಪಿ.ನೀಲೇಶ್, ಕರ್ನಾಟಕದ ಸಮನ್ವಯಾಧಿಕಾರಿ ವೆಂಕಟೇಶ್ ಮೌರ್ಯ, ಸಂಸ್ಥಾಪಕ ಸದಸ್ಯ ಚಂದ್ರಶೇಖರ ಸಂಕೋಲೆ, ಎ.ಎ.ಸನ್ನಿ, ಕೊಟ್ರೇಶ್ ಸೇರಿದಂತೆ ಮತ್ತಿತರರು ಇದ್ದರು.