ಕನ್ನಡಪ್ರಭ ವಾರ್ತೆ ರಾವಂದೂರು
ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಪ್ರವರ್ಗ 2ಎ ಗೆ ಸೇರ್ಪಡೆಯಾಗಿರುವ ಬಲಿಜ ಸಮುದಾಯಕ್ಕೆ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲೂ ಇದೇ ವರ್ಗಕ್ಕೆ ಸೇರಿಸಬೇಕು ಎಂದು ಮೈಸೂರು ಮಹಾರಾಜ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಸ್. ಕೃಷ್ಣಪ್ಪ ಹೇಳಿದರು.ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ, ಕೊಪ್ಪ ಗಡಿಭಾಗದ ಕುಶಾಲನಗರದಲ್ಲಿ ಯೋಗಿ ನಾರಾಯಣ ಬಲಿಜ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಯೋಗಿ ನಾರಾಯಣ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾವನೂರು ಆಯೋಗವು ಮಾಡಿದ ಶಿಫಾರಸ್ಸಿನಂತೆ ಬಲಿಜ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಲಾಗಿತ್ತು. ಆದರೆ, ರಾಜಕೀಯ ಒತ್ತಡದಿಂದ, ಅಸಾಂವಿಧಾನಿಕವಾಗಿ 1994ರಲ್ಲಿ 3ಎಪ್ರವರ್ಗಕ್ಕೆ ಸೇರಿಸಲಾಯಿತು. ಸತತ ಒತ್ತಾಯದ ನಂತರ, 2011ರಲ್ಲಿ ಶಿಕ್ಷಣದ ಉದ್ದೇಶಕ್ಕೆ ಮಾತ್ರ 2ಎ ಪ್ರವರ್ಗದ ಸೌಲಭ್ಯ ಕಲ್ಪಿಸಲಾಯಿತು. ಈಗ ಸಂಪೂರ್ಣವಾಗಿ ಪ್ರವರ್ಗ 2ಎ ಗೆ ಸೇರಿಸಬೇಕು. ನಾವೇನು ಹೊಸ ಮೀಸಲಾತಿಗೆ ಬೇಡಿಕೆ ಇಟ್ಟಿಲ್ಲ. ಈ ಹಿಂದೆ ನಮಗೆ ಕೊಟ್ಟಿದ್ದ ನಮಗೆ ‘ಪ್ರವರ್ಗ 2ಎ’ ಮೀಸಲಾತಿಯನ್ನು ಎಲ್ಲ ಕ್ಷೇತ್ರದಲ್ಲೂ ನೀಡಿ ಎಂದಷ್ಟೇ ಕೇಳುತ್ತಿದ್ದೇವೆ. ಬಲಿಜ ಸಮುದಾಯವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಇನ್ನೂ ಹಿಂದುಳಿದಿದೆ. ರಾಜ್ಯದಲ್ಲಿರುವ ಮೀಸಲಾತಿ ನಿಜಕ್ಕೂ ಅವೈಜ್ಞಾನಿಕ ಹಾಗೂ ಅಸಾಂವಿಧಾನಿಕವಾಗಿದೆ. ದೇವರಾಜ ಅರಸು ನಂತರ ಯಾವೊಬ್ಬ ಮುಖ್ಯಮಂತ್ರಿಯೂ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಚರ್ಚಿಸಿಲ್ಲ. ಯಾವುದೇ ಆಯೋಗದ ಶಿಫಾರಸು ಇಲ್ಲದೇ, ಒಂದು ಸಾಮಾನ್ಯ ವರ್ಗಾವಣೆ ಆದೇಶದಂತೆ ಸಮುದಾಯವನ್ನು ಒಂದು ಪ್ರವರ್ಗದಿಂದ ಮತ್ತೊಂದು ಪ್ರವರ್ಗಕ್ಕೆ ವರ್ಗಾಯಿಸಲಾಗುತ್ತಿದೆ ಎಂದರು.ಪಿರಿಯಾಪಟ್ಟಣ ಹಾಗೂ ಕುಶಾಲನಗರ ತಾಲೂಕುಗಳಲ್ಲಿ ಬಲಿಜ ಸಮುದಾಯಕ್ಕೆ ಸಮುದಾಯ ಭವನಗಳನ್ನು ನಿರ್ಮಿಸಲು ಇಲ್ಲಿನ ಶಾಸಕರು ಸಂಸದರು ಉತ್ಸಾಹ ತೋರಬೇಕು ಎಂದು ಬೇಡಿಕೆಯನ್ನಿಟ್ಟಿರು.
ಕಾರ್ಯಕ್ರಮವನ್ನು ಅಂಕಣಕಾರ ಗುಬ್ಬಿ ಗೂಡು ರಮೇಶ್ ಉದ್ಘಾಟಿಸಿದರು.ಪಿರಿಯಾಪಟ್ಟಣ ತಾಲೂಕು ಬಲಿಜ ಸಂಘದ ಅಧ್ಯಕ್ಷ ಜಗದೀಶ್, ಕುಶಾಲನಗರ ತಾಲೂಕು ಬಲಿಜ ಸಂಘದ ಅಧ್ಯಕ್ಷ ಟಿ.ಆರ್. ಬಾಬಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಸುಬ್ರಹ್ಮಣ್ಯ, ಮೀನಾಕ್ಷಿ ಕೇಶವ್, ಬೈಲುಕುಪ್ಪೆ ಗ್ರಾಪಂ ಅಧ್ಯಕ್ಷ ರಘು, ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಗೀತಾ ಹರೀಶ್, ಉಪಾಧ್ಯಕ್ಷೆ ಗೀತಾ ಸುಬ್ರಹ್ಮಣ್ಯ, ಬಲಿಜ ಸಂಘದ ಉಪಾಧ್ಯಕ್ಷರಾದ ಎಂ.ಆರ್. ಗಣೇಶ್, ಎನ್. ಸ್ವಾಮಿ, ಗೌರವಾಧ್ಯಕ್ಷರಾದ ಬಾಲಕೃಷ್ಣ, ದಯಾನಂದ, ಪ್ರಧಾನ ಕಾರ್ಯದರ್ಶಿ ನಿರಂಜನ್, ಖಜಾಂಚಿ ನವೀನ್, ಸಂಚಾಲಕ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಮದನ್, ನಿರ್ದೆಶಕರಾದ ಬಾಲಸುಬ್ರಹ್ಮಣ್ಯಂ, ಶ್ರೀನಿವಾಸ್, ಧರ್ಮ, ಕಿರಣ್, ಕಾಂತರಾಜ್, ಮಹೇಶ್, ಸೋಮಶೇಖರ್, ಜಗದೀಶ್, ಪುಂಡರಿಕಾಕ್ಷ ಸವಿತಾ ದಯಾನಂದ, ತುಳಸಿ, ಕಿರಣ್, ಟಿ.ಆರ್. ಜಗದೀಶ್ ಇದ್ದರು.