ಸರಳವಾಗಿ ಬದುಕುವುದೇ ಬಸವತತ್ವದ ಮೂಲ ಆಶಯ

KannadaprabhaNewsNetwork |  
Published : Jan 06, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್          | Kannada Prabha

ಸಾರಾಂಶ

ಬಸವ ಕೇಂದ್ರ ಮರುಘಾಮಠದಲ್ಲಿ ಸೋಮವಾರ ನಡೆದ ಐದು ಜೋಡಿ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಬಸವಪ್ರಭು ಸ್ವಾಮೀಜಿ ವಧೂವರರ ಮೇಲೆ ಪುಷ್ಪವೃಷ್ಟಿಗೈದು ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸರಳವಾಗಿ ಬದುಕುವುದು ಸಹಜತೆಯಿಂದ ಜೀವಿಸುವುದೇ ಬಸವತತ್ವದ ಮೂಲ ಆಶಯವಾಗಿದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮಿಗಳು ಹೇಳಿದರು.

ನಗರದ ಬಸವಕೇಂದ್ರ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಸೋಮವಾರ ಆಯೋಜಿಸಲಾದ 36 ನ ವರ್ಷದ ಒಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ವಧೂವರರಿಗೆ ಆಶೀರ್ವದಿಸಿ ಮಾತನಾಡಿದ ಅವರು ಇಂದಿನ ವ್ಯವಸ್ಥೆಯಲ್ಲಿ ಯಾವುದು ಹೆಚ್ಚು ಪ್ರಚಾರ ಪಡೆಯುತ್ತದೆಯೋ ಜನರು ಅದರ ಹಿಂದೆ ಹೋಗುತ್ತಿದ್ದಾರೆ. ಅದ್ಧೂರಿಗೆ ಹಾತೊರೆಯುತ್ತ ಸರಳತೆಯಿಂದ ವಿಮುಖರಾಗುತ್ತಿದ್ದಾರೆ. ಆದರೆ ದೇಶ ಕಟ್ಟುವಲ್ಲಿ ಸರಳತೆ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಜಗತ್ತಿನ ಪ್ರತಿ ವಿದ್ಯಮಾನವನ್ನು ನಾವಿಂದು ಕೆಲವೇ ಕ್ಷಣಗಳಲ್ಲಿ ತಿಳಿದುಕೊಳ್ಳುತ್ತೇವೆ. ಹೊರಜಗತ್ತಿನ ಜ್ಞಾನ ತಿಳಿಯುವುದು ಇಂದು ಅತಿಸುಲಭ. ಆದರೆ ನಮ್ಮೊಳಗಿನ ವಿಚಾರಗಳನ್ನು ತಿಳಿಯುವಲ್ಲಿ, ಅರ್ಥೈಸಿಕೊಳ್ಳುವಲ್ಲಿ ಸೋತಿದ್ದೇವೆ. ಶ್ರೀಮಠದಲ್ಲಿ ಐದು ಜೋಡಿಗಳು ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಒಂದು ಆದರ್ಶವೆಂದು ಭಾವಿಸಬೇಕು. ಮುರುಘಾಮಠವು ಬಡವರ, ದೀನರ ಮಠವಾಗಿದೆ. ಅತ್ಯಂತ ಕಡಿಮೆ ವಸ್ತುಗಳಲ್ಲಿ ಜೀವನ ಸಾಗಿಸುವುದೇ ಸರಳ ಜೀವನವಾಗಿದೆ. ಜಾತಿಯ ಗೋಡೆಗಳನ್ನು ಒಡೆಯುವಂಥ ಪ್ರಯತ್ನದಲ್ಲಿ ಅಂತರ್ಜಾತಿ ವಿವಾಹಗಳಿಗೆ ಹನ್ನೆರಡನೆಯ ಶತಮಾನ ನಾಂದಿಯಾಡಿತು. ಅದೇ ರೀತಿ ಮಠದಲ್ಲಿ ಅಂತರ್ಧರ್ಮೀಯ, ಅಂತರ್ಜಾತಿಯ ವಿವಾಹಗಳು ಜರುಗುತ್ತಿರುವುದು ವಿಶೇಷವಾಗಿದೆ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ.ಬಸವಪ್ರಭು ಸ್ವಾಮಿಗಳು, ಶ್ರೀಮಠವು ಮೂರುವರೆ ದಶಕಗಳಿಂದಲೂ ಅತ್ಯಂತ ಸರಳವಾಗಿ ಅರ್ಥಪೂರ್ಣವಾಗಿ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮದುವೆಯ ವೆಚ್ಚದ ಹೊರೆಯನ್ನು ತಗ್ಗಿಸುವುದು ಮತ್ತು ಜಾತಿ-ಮತಗಳ ಭೇದವಿಲ್ಲದೆ ಸಮಾಜವನ್ನು ಒಗ್ಗೂಡಿಸುವುದು ಇಂದಿನ ಅತ್ಯಂತ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದರು.

ಎತ್ತಿನ ಬಂಡಿಗೆ ಕಡೇಗೀಲು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಸಂಸಾರವೆಂಬ ಬಂಡಿಗೆ ಸತಿ-ಪತಿಗಳೆಂಬ ಎರಡು ಗಾಲಿಗಳಲ್ಲಿನ ಹೊಂದಾಣಿಕೆ. ಸತಿಪತಿಗಳ ನಡುವಿನ ಜಗಳ ಪರಸ್ಪರರ ನಡುವಿನ ಪ್ರೀತಿಯ ಜಗಳವಾಗಬೇಕು. ಮನಸ್ತಾಪದ ಜಗಳ ಆಗಬಾರದು. ನಂಬಿಕೆ, ವಿಶ್ವಾಸ, ಹೊಂದಾಣಿಕೆ ಮೂಲಕ ಜೀವನ ನಡೆಸಿದರೆ ಅದೇ ಸ್ವರ್ಗವಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಮೃತ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಮ್ಮದ್ ಖಾಸೀಂ ಅವರನ್ನು ಸನ್ಮಾನಿಸಲಾಯಿತು. ಬಸವ ಸಮಿತಿಯ ಅಧ್ಯಕ್ಷ ಮದ್ದೇರು ರಾಜಣ್ಣ ಮಾತನಾಡಿದರು. ಹರಗುರು ಚರಮೂರ್ತಿಗಳು, ಶ್ರೀಮಠದ ಗುರುಕುಲದ ವಟುಗಳು, ಗಂಜಿಗಟ್ಟೆ ಕೃಷ್ಣಮೂರ್ತಿ, ಚುಟುಕು ಸಾಹಿತಿ ಗಂಗಾಧರಪ್ಪ, ಭಕ್ತಾದಿಗಳು ಇದ್ದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಶಿಕ್ಷಕ ಗಿರೀಶಾಚರ‍್ಯ ಸ್ವಾಗತಿಸಿದರು. ಟಿ.ಪಿ ಜ್ಞಾನಮೂರ್ತಿ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ