ಮಹಾರಾಜ ಅಲಂಕಾರದಲ್ಲಿ ಕಂಗೊಳಿಸಿದ ಚೆಲುವನಾರಾಯಣಸ್ವಾಮಿ

KannadaprabhaNewsNetwork |  
Published : Oct 03, 2025, 01:07 AM IST
2ಕೆಎಂಎನ್ ಡಿ,29,30,31 | Kannada Prabha

ಸಾರಾಂಶ

ವಿಜಯದಶಮಿಯಂದು ಮೈಸೂರು ಸಂಸ್ಥಾನ ಸ್ಥಾಪಿಸಲು ವರನೀಡಿದ ಶ್ರೀಚೆಲುವನಾರಾಯಣಸ್ವಾಮಿ ಮಹಾ ರಾಜಾಲಂಕಾರದಲ್ಲಿ ಕಂಗೊಳಿಸಿದ ದಿವ್ಯಮಂಗಳ ರೂಪವನ್ನು ನಾಡಿನ ವಿವಿದೆಢೆಯಿಂದ ಬಂದಿದ್ದ ಸಹಸ್ರರಾರು ಭಕ್ತರು ಕಣ್ತುಂಬಿಕೊಂಡರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ವಿಜಯದಶಮಿಯಂದು ಮೈಸೂರು ಸಂಸ್ಥಾನ ಸ್ಥಾಪಿಸಲು ವರನೀಡಿದ ಶ್ರೀಚೆಲುವನಾರಾಯಣಸ್ವಾಮಿ ಮಹಾ ರಾಜಾಲಂಕಾರದಲ್ಲಿ ಕಂಗೊಳಿಸಿದ ದಿವ್ಯಮಂಗಳ ರೂಪವನ್ನು ನಾಡಿನ ವಿವಿದೆಢೆಯಿಂದ ಬಂದಿದ್ದ ಸಹಸ್ರರಾರು ಭಕ್ತರು ಕಣ್ತುಂಬಿಕೊಂಡರು.

ನಾಡಿನ ಸಮಸ್ತ ಅನ್ಯಾಯಗಳನ್ನು ನಿರ್ಮೂಲನೆ ಮಾಡಲು ಧರೆಗಿಳಿದ ಚಕ್ರವರ್ತಿಯಂತೆ ಕಂಡ ಸ್ವಾಮಿಯ ಚೆಲುವನ್ನು ಕಣ್ತುಂಬಿಕೊಳ್ಳಲು ಇಡೀದಿನ ಮೇಲುಕೋಟೆಯಲ್ಲಿ ಭಕ್ತಸಾಗರವೇ ಕಿಕ್ಕಿರಿದು ತುಂಬಿ ದೇವರದರ್ಶನ ಪಡೆದರು.

ಬೆಟ್ಟದೊಡೆಯ ಯೋಗಾ ನರಸಿಂಹಸ್ವಾಮಿಗೂ ಸಹ ಮಹಾರಾಜರ ಸಾಂಪ್ರದಾಯಿಕ ಅಲಂಕಾರ ಮಾಡಲಾಗಿತ್ತು. ರಾವಣಸಂಹಾರದ ಪ್ರತೀಕವಾಗಿ ನಡೆಯುವ ನವರಾತ್ರಿ ಕೊನೆ ದಿನವಾದ ಗುರುವಾರ ವಿಜಯದಶಮಿ ಆಚರಣೆ ಸಂಭ್ರಮ ಮನೆ ಮಾಡಿತ್ತು. ಹೊಯ್ಸಳ ದೊರೆಗಳು, ವಿಜಯನಗರ ಮಹಾಸಂಸ್ಥಾನಗಳಿಗೆ ಆರಾಧ್ಯದೈವ ಹಾಗೂ ಮೈಸೂರು ಅರಸರ ಕುಲದೈವ ಚೆಲುವನಾರಾಯಣಸ್ವಾಮಿ ಮಹಾರಾಜರ ಅಲಂಕಾರದಲ್ಲಿ ಪೇಟ ಚಕ್ರ, ಶಂಖ, ಗಧೆ, ಕತ್ತಿ ಮುಂತಾದ ದಿವ್ಯಾಯುಧಗಳೊಂದಿಗೆ ಚಕ್ರವರ್ತಿಯಂತೆ ಕಂಗೊಳಿಸಿದ್ದು, ವಿಜಯದಶಮಿಯ ವೈಭವವನ್ನು ಇಮ್ಮಡಿಗೊಳಿಸಿತ್ತು.

ಕಳೆದ ಹತ್ತು ದಿನಗಳಿಂದ ಮಹಾಲಕ್ಷ್ಮಿ ಕಲ್ಯಾಣನಾಯಕಿ ಅಮ್ಮನವರಿಗೆ ಬಂಗಾರದ ಶೇಷವಾಹನೋತ್ಸವ ನಡೆದವು. ದೇವಿಗೆ ಪ್ರತಿದಿನ ವಿಶೇಷ ತೋಮಾಲೆ ಸೇವೆಗಳು, ವಿಶೇಷ ಮಂಗಳವಾದ್ಯ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ನಡೆದ ಚಿನ್ನದ ಪಲ್ಲಕ್ಕಿ ಉತ್ಸವ ಹಾಗೂ ಬಂಗಾರದ ಶೇಷವಾಹನೋತ್ಸವ ವೈಭವದಿಂದ ನೆರವೇರಿತು.

ನವರಾತ್ರಿಯ ಅಂಗವಾಗಿ ರಾಜಬೀದಿ ಹಾಗೂ ರಾಜಗೋಪುರಕ್ಕೆ ಸರಳ ದೀಪಾಲಂಕಾರ ಮಾಡಲಾಗಿತ್ತು. ದೇವಾಲಯದ ಇಒ ಶೀಲಾ ಮಾರ್ಗದರ್ಶನದಲ್ಲಿ ಪಾರುಪತ್ತೇಗಾರ್ ಸ್ಥಾನಾಚಾರ್ಯಶ್ರೀನಿವಾಸನರಸಿಂಹನ್ ಮತ್ತು ಪಾರ್ಥಸಾರಥಿ ಉತ್ಸವಗಳನ್ನು ನಡೆಸಿದರು.

ದೇಶಿಕರ ತಿರುನಕ್ಷತ್ರ ಮಹೋತ್ಸವ:

ವೇದಾಂತ ದೇಶಿಕರ ತಿರುನಕ್ಷತ್ರ ಮಹೋತ್ಸವ ವಿಜಯದಶಮಿಯಂದು ಸಾಂಪ್ರದಾಯಿಕ ಪೂಜಾ ವಿಧಾನಗಳೊಂದಿಗೆ ಪೂಜೆ ಮುಕ್ತಾಯವಾಯಿತು. ಕಲ್ಯಾಣಿಯಿಂದ ಮೆರವಣಿಗೆಯಲ್ಲಿ ಅಭಿಷೇಕದ ತೀರ್ಥತಂದು ವೇದಾಂತದೇಶಿಕರಿಗೆ ಅಭಿಷೇಕ ನೆರವೇರಿಸಲಾಯಿತು.

ಸಂಜೆ ಚೆಲುವನಾರಾಯಣಸ್ವಾಮಿಗೆ ರಾಮಾನುಜಾಚಾರ್ಯರು ಹಾಗೂ ವೇದಾಂತದೇಶಿಕರೊಂದಿಗೆ ಉತ್ಸವ ವೈಭವದಿಂದ ನಡೆಯಿತು. ಹತ್ತು ದಿನಗಳಕಾಲ ಅನ್ನಸಂತರ್ಪಣೆಯೊಂದಿಗೆ ವಿವಿಧ ಧಾರ್ಮಿಕ ಕೈಂಕರ್ಯಗಳೂ ಸಹ ಶ್ರದ್ಧಾಭಕ್ತಿಯಿಂದ ನಡೆದವು.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ