ವಿಶೇಷ ಪ್ಯಾಕೇಜ್ ಘೋಷಣೆಗೆ ಕಲಬುರಗಿ ಜನನಾಯಕರ ಬಿಗಿಪಟ್ಟು । ತೊಗರಿ ರೈತರ ಸಮಸ್ಯೆ ಬಗ್ಗೆ ಡಾ.ಅಜಯ್ ಸಿಂಗ್ ವಿಷಯ ಮಂಡನೆಕನ್ನಡಪ್ರಭ ವಾರ್ತೆ ಕಲಬುರಗಿ
ಬೆಳಗಾವಿಯಲ್ಲಿ ಆರಂಭವಾಗಿರುವ ಚಳಿಗಾಲದ ಅಧಿವೇಶನದ ಗುರುವಾರದ ಕಲಾಪದಲ್ಲಿ ಕಲಬುರಗಿ ತೊಗರಿ ಕಣಜದ ರೈತರ ಸಂಕಷ್ಟ ಪ್ರತಿಧ್ವನಿಸಿತು.ಸದನದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷರಾದ ಜೇವರ್ಗಿ ಶಾಸಕ ಡಾ.ಅಜಯ್ ಧರ್ಮಸಿಂಗ್ ಅವರು, ತಮ್ಮ ಗಮನ ಸೆಳೆಯುವ ಗೊತ್ತುಳಿಯಲ್ಲಿ ತೊಗರಿ ರೈತರ ತಳಮಳ ಗಂಭೀರವಾಗಿ ಸದನದ ಗಮನಕ್ಕೆ ತಂದು ಕಳೆದ ಬಾರಿಯಂತೆ ಈ ಬಾರಿಯೂ ಕಂಗಾಲಾಗಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಕಳೆದ ಬಾರಿ ನೆಟೆ ರೋಗಬಾಧೆ ಕಾಡಿದಾಗ ನೊಂದ ರೈತರಿಗೆ ಸರ್ಕಾರದ ವಿಶೇಷ ಪ್ಯಾಕೇಜ್ 1.71 ಲಕ್ಷ ಹೆಕ್ಟರ್‌ಗೆ ₹181 ಕೋಟಿ ಹಾಗೂ ವಿಮಾ ಪರಿಹಾರ ಸೇರಿ ₹233 ಕೋಟಿ ಪರಿಹಾರ ಕೈ ಸೇರಿತ್ತು. ಈ ಬಾರಿಯೂ ಕೂಡ ಸರಕಾರ ತೊಗರಿ ರೈತರ ಕೈ ಹಿಡಿಯಬೇಕೆಂದು ಡಾ.ಅಜಯ್ ಸಿಂಗ್ ಆಗ್ರಹಿಸಿದರು.ಈ ಪ್ರಸ್ತಾವನೆ ಮೇಲೆ ನಡೆದ ಚರ್ಚೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಸಿಎಂ ಸಲಗೆಹಾರರಾದ ಬಿ.ಆರ್.ಪಾಟೀಲ್ ಸೇರಿ ಅನೇಕರು ಧ್ವನಿ ಗೂಡಿಸಿದ್ದಲ್ಲದೆ ಕಳೆದ ಬಾರಿಯಂತೆ ಈ ಬಾರಿ ವಿಶೇಷ ಪರಿಹಾರ ಘೋಷಣೆಯ ಅಗತ್ಯತೆಯನ್ನು ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು.
*ವಿಮೆ ಪರಿಹಾರವೇ ಹೊರತು ವಿಶೇಷ ಪ್ಯಾಕೇಜಲ್ಲ: ಚೆಲುವ
ಕಲಬುರಗಿ ಜನನಾಯಕರೆಲ್ಲರೂ ಸೇರಿಕೊಂಡು ಪ್ರಸ್ತಾಪಿಸಿದ್ದ ತೊಗರಿ ತಳಮಳಕ್ಕೆ ಸದನದಲ್ಲೇ ಉತ್ತರಿಸಿದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಕಾಂಡ ಮಚ್ಚೆ ರೋಗ, ತೇವಾಂಶ ಕೊರತೆಯಿಂದ ತೊಗರಿ ಹಾಳಾಗಿದೆ. ಗರಸು ಮಣ್ಣಿನ ಹೊಲಗಳಲ್ಲಿ ಸಮಸ್ಯೆ ಕಾಡಿದ್ದು ಬಿಟ್ಟರೆ ಫಲವತ್ತಾದ ಹೊಲ, ನೀರಾವರಿ ಇರುವ ಹೊಲಗಳಲ್ಲಿ ಈ ಸಮಸ್ಯೆ ಕಾಡಿಲ್ಲ. ಆದಾಗ್ಯೂ ವಿಜ್ಞಾನಿಗಳು, ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದರು.ಫಸಲ್ ಬಿಮಾ ಯೋಜನೆಯಲ್ಲಿ ವಿಮೆ ಮಾಡಿಸಿರುವ 1.70 ಲಕ್ಷ ರೈತರಿಗೆ ಈಗಾಗಲೇ ಮೊದಲ ಹಂತದ ₹71 ಕೋಟಿ ಪರಿಹಾರ ಬಿಡುಗಡೆಗೆ ಸಿದ್ಧತೆ ಸಾಗಿದೆ. ಬೆಳೆ ಕಟಾವು ಪ್ರಯೋಗದ ನಂತರ ವಿಮೆ ಪರಿಹಾರ ಹೆಚ್ಚಲಿದೆ ಎಂದು ತಿಳಿಸಿದ ಅವರು ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಏನನ್ನೂ ಸ್ಪಷ್ಟವಾಗಿ ಹೇಳಲಿಲ್ಲ.
ವಿಮೆ ವ್ಯಾಪಾತಿಗೆ ರೈತರು ಹೆಚ್ಚಾಗಿ ಬರಬೇಕು. ಇಂತಹ ಸಮಸ್ಯೆಗಳಿಗೆ ವಿಮೆಯೇ ಪರಿಹಾರ ಹೊರತು ವಿಶೇಷ ಪ್ಯಾಕೇಜ್ ಪರಿಹಾರವಲ್ಲ, ಹೀಗೆ ಪ್ಯಾಕೇಜ್ ನೀಡುತ್ತ ಹೋದಲ್ಲಿ ಇತರೆ ಬೆಳೆಗಳ ರೈತರು ಬೇಡಿಕೆ ಇಡುವ ಸಾಧ್ಯತೆಗಳಿರುತ್ತವೆ ಎಂದು ಚೆಲುವರಾಯಸ್ವಾಮಿಯ ಪ್ಯಾಕೇಜ್ ಬೇಡಿಕೆಯನ್ನು ನಯವಾಗಿಯೇ ತಳ್ಳಿ ಹಾಕಿದರು.*ಪರಿಹಾರಕ್ಕೆ ಪ್ರಿಯಂಕ್ ಖರ್ಗೆ ಆಗ್ರಹ:
ಏತನ್ಮಧ್ಯೆ ಚರ್ಚೆಯಲ್ಲಿ ಪಾಲ್ಗೊಂಡ ಸಚಿವ ಪ್ರಿಯಾಂಕ್ ಖರ್ಗೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಮಾಡಿದರೂ ರೈತರು ವಿಮೆ ವ್ಯಾಪ್ತಿಗೆ ಎಲ್ಲರೂ ಬರುತ್ತಿಲ್ಲ. ಹೀಗಾಗಿ ಈಗ ಸಂಕಷ್ಟದಲ್ಲಿರುವ ಅಂತಹ ರೈತರಿಗೆ ನಾವು ನೆರವಿಗೆ ಬರಲೇಬೇಕು. ಜನನಾಯಕರೆಲ್ಲರ ಆಗ್ರಹದಂತೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ನೀಡಿ ಪ್ಯಾಕೇಜ್‌ಗೆ ಆಗ್ರಹಿರೋದಾಗಿಯೂ, ವರದಿ ಮಂಡಿಸಲು ಸಿದ್ದರಾಮಯ್ಯನವರು ತಮಗೆ ಸೂಚಿಸಿದ್ದಾರೆ ಎಂದು ಕೃಷಿ ಸಚಿವರ ಗಮನ ಸೆಳೆದರು.
2 ವರ್ಷಗಳಿಂದ ತೊಗರಿ ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಆತ್ಮಹತ್ಯೆಯೂ ಶುರುವಾಗಿದೆ. ವಿಜಯಪುರ, ಬೆಳಗಾವಿ, ಕಲಬುರಗಿ ಸೇರಿದಂತೆ ಹಲವು ಭಾಗಗಳಲ್ಲಿ ತೊಗರಿ ಹಾಳಾಗಿರೋದರಿಂದ ರೈತರಿಗೆ ಪರಿಹಾರ ಕೊಡಿ ಎಂದು ಶಾಸಕರು ಹಲವರು ಆಗ್ರಹಿಸಿದರು.ಕಡತ ಮಂಡಿಸಲು ಕೃಷಿ ಸಚಿವರಿಗೆ ಸಿಎಂ ಸೂಚನೆ
ಕಲಬುರಗಿ ಜಿಲ್ಲೆಯಲ್ಲಿ ತೇವಾಂಶದ ಕೊರತೆಯಿಂದ ಆಗಿರುವ ತೊಗರಿ ಬೆಳೆ ಹಾನಿ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಜಿಲ್ಲೆಯ ಶಾಸಕರೊಂದಿಗೆ ಮಾಡಿರುವ ಮನವಿ, ಬರೆದ ಪತ್ರಕ್ಕೆ ಸಿಎಂ ಸ್ಪಂದಿಸಿ, ಪರಿಶೀಲಿಸಿ ಕಡತ ಮಂಡಿಸುವಂತೆ ಕೃಷಿ ಸಚಿವರಿಗೆ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸುವ ಮೂಲಕ ತೊಗರಿ ಬೆಳೆ ಹಾನಿಗೆ ಪರಿಹಾರ ಘೋಷಣೆ ಮಾಡಬೇಕೆಂಬ ಮನವಿಯನ್ನು ಸಚಿವರು ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಿಸಿದರು.
ಗಮನ ಸೆಳೆದ ಶಾಸಕ ಅಲ್ಲಂಪ್ರಭು ಗೊತ್ತುವಳಿ
ರೋಗದಿಂದ ಬಾಧಿತವಾಗಿರುವ ಕಲಬುರಗಿ ತೊಗರಿ ಲಕ್ಷಾಂತರ ಹೆಕ್ಟರ್ ಒಣಗಿ ನಿಂತಿದೆ. ರೈತರು ಕಂಗಾಲಾಗಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ ಎಂದು ತೊಗರಿ ರೈತರ ಗೋಳಿನ ಬಗ್ಗೆ ಕಲಬುರಗಿ ಶಾಸಕ ಅಲ್ಲಂಪ್ರಭು ಪಾಟೀಲ್ ಬೆಳಗಾವಿ ಸದನದಲ್ಲಿ ಮಂಡಿಸಿದ್ದು, ಗಮನ ಸಳೆಯುವ ಗೊತ್ತುವಳಿಗೆ ಸ್ಪಂದಿಸಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ, ಈಗಾಗಲೇ ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ತೊಗರಿ ಹೊಲಗಳಿಗೆ ಭೇಟಿ ನೀಡಿದ್ದಾರೆ. ಡಿಸಿಯವರೂ ಪರಿಶೀಲಿಸಿದ್ದು ವರದಿ ನೀಡಲಿದ್ದಾರೆ. ಮಳೆ ಕೊರತೆ, ತೇವಾಂಶದ ಕಾರಣ ತೊಗರಿ ಸಮಸ್ಯೆಯಾಗಿದೆ. ಅಧಿಕಾರಗಳ ಜಂಟಿ ಸಮೀಕ್ಷೆ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.