ಬೇಲೂರು ಶಾಸಕರು ಅಭಿವೃದ್ಧಿಯ ಶ್ವೇತಪತ್ರ ಹೊರಡಿಸಲಿ

KannadaprabhaNewsNetwork |  
Published : Sep 04, 2026, 02:00 AM IST
3ಎಚ್ಎಸ್ಎನ್7 : ಬೇಲೂರು ತಾಲೂಕು ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ಶರತ್  ಮಾತನಾಡಿದರು. | Kannada Prabha

ಸಾರಾಂಶ

ಜನರ ಸಂಕಷ್ಟಗಳಿಗೆ ಧ್ವನಿಯಾಗುವುದು ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅವರ ಸ್ವಭಾವವಾಗಿದೆ. ಆದರೆ ಶಾಸಕ ಸುರೇಶ್ ಅವರಿಗೆ ಇದನ್ನು ಸಹಿಸಲು ಆಗದೆ ಆದಾರ ರಹಿತ ಆರೋಪ ಮಾಡುತ್ತಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಯಾರು ಉತ್ತಮ ಕೆಲಸ ಮಾಡಿದ್ದಾರೆ ಎಂಬುದನ್ನು ಮುಂದಿನ ಚುನಾವಣೆಯಲ್ಲಿ ಜನರೇ ನಿರ್ಧರಿಸುತ್ತಾರೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಮಾಜಿ ಸಚಿವ ಹಾಗೂ ನೇರ ನಡೆ ನುಡಿಯ ಬಿ. ಶಿವರಾಂ ಬಗ್ಗೆ ಮಾತನಾಡಲು ಶಾಸಕ ಎಚ್ ಕೆ ಸುರೇಶ್‌ಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಯುವ ಕಾಂಗ್ರೆಸ್ ಮುಖಂಡ ಶರತ್ ಹೇಳಿದರು.

ತಾಲೂಕು ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ರಾಜಕೀಯವಾಗಿ ಆರೋಗ್ಯಕರ ಚರ್ಚೆ ನಡೆಸಲಿ. ಆದರೆ ವೈಯಕ್ತಿಕವಾಗಿ ಯಾವುದೇ ದಾಖಲೆಗಳನ್ನು ನೀಡದೇ ಆರೋಪ ಮಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಹಿರಿಯ ರಾಜಕಾರಣಿ ಶಿವರಾಂ ಅವರ ಬಗ್ಗೆ ಹಗುರವಾಗಿ ಮಾತನಾಡುವ ಶಾಸಕರು ತಾಲೂಕಿನಲ್ಲಿ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ದಾಖಲೆಗಳ ಮೂಲಕ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು. ನಮ್ಮ ನಾಯಕ ಬಿ. ಶಿವರಾಂ ಅವರು ಚುನಾವಣೆಯಲ್ಲಿ ಸೋತ ನಂತರವೂ ಮನೆಯಲ್ಲಿ ಕುಳಿತುಕೊಳ್ಳದೆ ಜನರೊಂದಿಗೆ ನಿರಂತರವಾಗಿ ಬೆರೆತು, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಜನರ ಸಂಕಷ್ಟಗಳಿಗೆ ಧ್ವನಿಯಾಗುವುದು ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅವರ ಸ್ವಭಾವವಾಗಿದೆ. ಆದರೆ ಶಾಸಕ ಸುರೇಶ್ ಅವರಿಗೆ ಇದನ್ನು ಸಹಿಸಲು ಆಗದೆ ಆದಾರ ರಹಿತ ಆರೋಪ ಮಾಡುತ್ತಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಯಾರು ಉತ್ತಮ ಕೆಲಸ ಮಾಡಿದ್ದಾರೆ ಎಂಬುದನ್ನು ಮುಂದಿನ ಚುನಾವಣೆಯಲ್ಲಿ ಜನರೇ ನಿರ್ಧರಿಸುತ್ತಾರೆ ಎಂದರು.ಹಳೇಬೀಡು, ಅಡಗೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಗಳಿಂದ ರೈತರಿಗೆ ಅನುಕೂಲವಾಗುತ್ತಿದೆ. ಅಡಗೂರು ಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ತುಂಬುತ್ತಿರುವುದರಿಂದ ಗ್ರಾಮೀಣ ಭಾಗದ ಜನರಲ್ಲಿ ಸಂತಸ ಮೂಡಿದೆ. ಈ ಭಾಗಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಹಿಂದೆ ಕೈಗೊಂಡಿರುವ ಪ್ರಯತ್ನಗಳ ಹಿಂದೆ ಮಾಜಿ ಸಚಿವ ಶಿವರಾಂ ಅವರ ಕೊಡುಗೆಯನ್ನೂ ಪರಿಗಣಿಸಬೇಕು ಎಂದು ಹೇಳಿದರು. ಶಾಸಕರಾಗಿ ತಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ವಿವರವನ್ನು ದೊಡ್ಡ ಫ್ಲೆಕ್ಸ್ ಮೂಲಕವಾಗಲಿ ಅಥವಾ ಬೇಲೂರಿನ ಶಾಸಕರ ಕಚೇರಿಯಲ್ಲಾಗಲಿ ಪ್ರಕಟಿಸಲಿ. ಯಾವ ಗ್ರಾಮದಲ್ಲಿ ಯಾವ ಕಾಮಗಾರಿ ಕೈಗೊಳ್ಳಲಾಗಿದೆ, ಎಷ್ಟು ಅನುದಾನ ಬಿಡುಗಡೆಯಾಗಿದೆ ಹಾಗೂ ಎಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂಬುದನ್ನು ಜನರಿಗೆ ತಿಳಿಸಲಿ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯಾರಿಗೆ ಮತ ನೀಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ವೈಯಕ್ತಿಕ ಆರೋಪಗಳನ್ನು ಬದಿಗಿಟ್ಟು ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ನಡೆಸುವುದು ಸೂಕ್ತ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಿಸಾನ್ ಘಟಕದ ತಾಲೂಕು ಅಧ್ಯಕ್ಷ ಕುಮಾರ್‌, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸಚಿನ್, ಉಪಾಧ್ಯಕ್ಷ ಸೈಯದ್ ಇಕ್ಬಾಲ್, ಯೋಜನಾ ಪ್ರಾಧಿಕಾರದ ಸದಸ್ಯ ಸುದರ್ಶನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ಕ ಸಮ್ಮೇಳನದಲ್ಲಿ ಕನ್ನಡದ ಸಾಧಕರ ಹೆಸರಲ್ಲಿ ವೇದಿಕೆ
ಶೂಟೌಟ್‌: ಘಟನಾ ಸ್ಥಳಕ್ಕೆ ಸಿಐಡಿ ಎಸ್‌ಪಿ