ದೇವನಹಳ್ಳಿ: ದೇವನಹಳ್ಳಿ- ದೊಡ್ಡಬಳ್ಳಾಪುರ ರಸ್ತೆಯಲ್ಲಿ ಒಂದು ದೊಡ್ಡ ಬಂಡೆ ಸಿಗುತ್ತದೆ. ಆ ಬಂಡೆಯ ಮೇಲೆ ಒಂದು ಕಾಲದಲ್ಲಿ ಕಾಣ ಸಿಗುತ್ತಿದ್ದುದೇ ಚಪ್ಪರಕಲ್ಲು. ಆದರೆ ಅದೀಗ ಮಾಯವಾಗಿದ್ದು, ಅದನ್ನೀಗ ಉಳಿಸಿಕೊಡಬೇಕೆಂಬುದು ಆ ಭಾಗದ ಗ್ರಾಮಸ್ಥರ ಅಂಬೋಣ.
ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಸಮೀಪ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಮತ್ತು ವಿಶ್ವನಾಥಪುರ ಪೊಲೀಸ್ ಠಾಣೆಗಳ ಸಮೀಪವೇ ಈ ದೊಡ್ಡಬಂಡೆ ಚಪ್ಪರದಕಲ್ಲು ಕೂಡ ಇದೆ. ಪೊಲೀಸ್ ಠಾಣೆ ಹಿಂಭಾಗದ ಪ್ರದೇಶದಲ್ಲಿ ದೊಡ್ಡ ಬಂಡೆಯ ಮೇಲೆ ಕಲ್ಲಿನ ಚಪ್ಪರ ಇರುವುದರಿಂದ ಈ ಪ್ರದೇಶಕ್ಕೆ ಚಪ್ಪರ ಕಲ್ಲು ಎಂದು ಹೆಸರು ಬಂದಿದೆ.ಡಿಸಿ ಕಚೇರಿ, ಪೊಲೀಸ್ ಠಾಣೆಯ ಸಮೀಪವೇ ಸರ್ಕಾರಿ ಸ್ಥಳವೊಂದು ಮಾಯವಾಗಿದೆ ಅಂದರೆ, ಇನ್ನು ಸಾಮಾನ್ಯ ಜನರ ಆಸ್ತಿಪಾಸ್ತಿಗಳ ಕಥೆ ಏನು ಎಂಬುದು ಈ ಭಾಗದ ಗ್ರಾಮಸ್ಥರ ಪ್ರಶ್ನೆ.ಈ ಬಂಡೆಗೆ ಸುಮಾರು 500 ವರ್ಷಗಳ ಹಿಂದೆ ನಾಯಕರೊಬ್ಬರು ಕಲ್ಲಿನ ಚಪ್ಪರ ಕಟ್ಟಿಸಿದ್ದರು ಎಂಬ ಪ್ರತೀತಿ ಇದೆ. ಅದಕ್ಕೊಂದು ಇತಿಹಾಸವೇ ಇದೆ. ಇತ್ತೀಚಿನ ದಿನಗಳಲ್ಲಿ ಈ ಬಂಡೆಯ ಮೇಲಿರುವ ಚಪ್ಪರ ಕಾಣದಂತಾಗಿದೆ. ಕಾರಣ ಈ ಪ್ರದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ಸರ್ಕಾರಿ ಜಮೀನನ್ನು ಅಲ್ಲದೆ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣಕ್ಕೆ ಕೈ ಹಾಕಿದ್ದಾರೆನ್ನಲಾಗಿದೆ.
ಶಿಕ್ಷಣ ಸಂಸ್ಥೆಯವರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ನೋಟಿಸ್ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ರೈತರು ತಮ್ಮ ಕೃಷಿ ಜಮೀನುಗಳಿಗೆ ಹೋಗಲಾಗುತ್ತಿಲ್ಲ. ದಾರಿಯೇ ಇಲ್ಲದಂತೆ ಸ್ಥಳ ಒತ್ತುವರಿ ಮಾಡಿಕೊಳ್ಳಲಾಗಿದೆ. ಆದ್ದರಿಂದ ಈ ಕೂಡಲೇ ಅತಿಕ್ರಮಣಕಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.