ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ದಂಧೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಬರೋಬ್ಬರಿ 6 ಕೋಟಿ ರು. ಮೌಲ್ಯದ 6.310 ಕೆಜಿ ತೂಕದ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸೊತ್ತು ಸಹಿತ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.ಮಂಗಳೂರಿನ ಇತಿಹಾಸದಲ್ಲೇ ಇದು ಅತಿ ದೊಡ್ಡ ಡ್ರಗ್ಸ್ ಪ್ರಕರಣವಾಗಿದ್ದು, ಕರ್ನಾಟಕದಲ್ಲಿಯೂ ಇತ್ತೀಚಿನ ಅತಿ ದೊಡ್ಡ ಪ್ರಕರಣವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.“ಡ್ರಗ್ಸ್ ಫ್ರಿ ಮಂಗಳೂರು” ಮಾಡುವ ನಿಟ್ಟಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಹಾಗೂ ಇತರ ರಾಜ್ಯಗಳಿಗೆ ಎಂಡಿಎಂಎ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನೈಜಿರಿಯಾ ಪ್ರಜೆ ಪೀಟರ್ ಅಕೆಡಿ ಬೆಲೆನ್ವೋ (38) ಬಂಧಿತ ಆರೋಪಿ. ಈತನ ವೀಸಾ ಅವಧಿ ಮುಗಿದಿದ್ದರೂ ಕಳೆದೆರಡು ವರ್ಷಗಳಿಂದ ಬೆಂಗಳೂರಿನ ದೊಮ್ಮಸಂದ್ರ ಗ್ರಾಮದ ಸ್ವಾಮಿ ವಿವೇಕಾನಂದ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಆತನ ಮನೆಯಿಂದಲೇ ಬಂಧಿಸಲಾಗಿದೆ ಎಂದರು.
ವಾರದ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೈದರ್ ಆಲಿ ಎಂಬಾತನನ್ನು ವಶಕ್ಕೆ ಪಡೆದು 15 ಗ್ರಾಂ ಎಂಡಿಎಂ ಜಫ್ತು ಮಾಡಲಾಗಿತ್ತು. ಈತನಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಪೆಡ್ಲರ್‌ಗಳ ಮಾಹಿತಿ ಸಂಗ್ರಹಿಸಿ, ತಾಂತ್ರಿಕ ಸಹಾಯಗಳ ಮೂಲಕ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಬೆಂಗಳೂರಿಗೆ ತೆರಳಿ ನೈಜಿರೀಯಾ ಪ್ರಜೆಯನ್ನು ಬಂಧಿಸಿದ್ದಾರೆ. ಆತ ತನ್ನ ಮನೆಯಲ್ಲಿ ದಾಸ್ತಾನು ಇರಿಸಿದ್ದ 6.310 ಕೆಜಿ ಎಂಡಿಎಂಎ ಜತೆಗೆ 3 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕ ಮಾಪಕ, 35 ಎಟಿಎಂ ಹಾಗೂ ಡೆಬಿಟ್ ಕಾರ್ಡ್‌ಗಳು, 17 ಇನಾಕ್ಟಿವ್ ಸಿಮ್ ಕಾರ್ಡ್‌ಗಳು, 10 ವಿವಿಧ ಬ್ಯಾಂಕ್‌ಗಳ ಪಾಸ್‌ಪುಸ್ತಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿ ಪೀಟರ್ ಅಕೆಡಿ ವಿರುದ್ಧ 2023ರಲ್ಲಿ ಬೆಂಗಳೂರಿನ ವಿದ್ಯಾರಣ್ಯಾಪುರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಈತ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಗೆ ಹಾಗೂ ಕೇರಳ ರಾಜ್ಯಕ್ಕೆ ಕೂಡ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿರುವುದು ಕಂಡು ಬಂದಿದೆ. ಈತನ ಜತೆ ಇನ್ನೂ ಹಲವರು ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅನುಪಮ್ ಅಗ್ರವಾಲ್ ಹೇಳಿದರು.
2 ಲಕ್ಷ ಬಹುಮಾನ:ಪ್ರಕರಣ ಭೇದಿಸಿದ ಸಿಸಿಬಿ ತಂಡಕ್ಕೆ ಡಿಜಿಪಿ ಒಂದು ಲಕ್ಷ ರು. ಬಹುಮಾನ ಘೋಷಿಸಿದ್ದು, ಕಮಿಷನರೆಟ್‌ನಿಂದ ಪ್ರತ್ಯೇಕವಾಗಿ ಒಂದು ಲಕ್ಷ ರು. ಬಹುಮಾನವನ್ನು ಕಮಿಷನರ್ ಘೋಷಿಸಿದರು. ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಂ ಸುಂದರ್ ಎಚ್.ಎಂ., ಪಿಎಸ್‌ಐಗಳಾದ ಸುದೀಪ್ ಎಂ.ವಿ., ಶರಣಪ್ಪ ಭಂಡಾರಿ, ನರೇಂದ್ರ, ಎಎಸ್‌ಐಗಳಾದ ಮೋಹನ್ ಕೆ.ವಿ., ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿಮತ್ತು ಸಿಸಿಬಿ ಘಟಕದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿಗೋಷ್ಠಿಯಲ್ಲಿ ಎಸಿಪಿ ಮನೋಜ್ ಕುಮಾರ್, ಇನ್ಸ್‌ಪೆಕ್ಟರ್ ಶ್ಯಾಂ ಸುಂದರ್ ಇದ್ದರು..................ಕಸ ಬಿಸಾಡುವ ಜಾಗದಲ್ಲಿ ಡ್ರಗ್ಸ್ ಪ್ಯಾಕೆಟ್ ದಂಧೆ!
ಮಾದಕ ವಸ್ತು ಎಂಡಿಎಂಎಯನ್ನು 50 ಗ್ರಾಂ., 100 ಗ್ರಾಂ. ಪ್ಯಾಕೆಟ್‌ಗಳನ್ನಾಗಿ ಮಾಡಿ ಅದನ್ನು ಬಿಸ್ಕತ್ತು ಪ್ಯಾಕೆಟ್, ಗುಟ್ಕಾ, ಚಿಫ್ಸ್ ಪ್ಯಾಕೆಟ್‌ಗಳಲ್ಲಿಟ್ಟು ಕಸ ಬಿಸಾಡುವ ಜಾಗದಲ್ಲಿ ಇಡುತ್ತಿದ್ದರು. ಬಳಿಕ ಅದರ ಫೋಟೊ ತೆಗೆದು ಅದನ್ನು ತಲುಪಿಸಬೇಕಾದ ಪೆಡ್ಲರ್‌ಗಳಿಗೆ ಕಳುಹಿಸುತ್ತಾರೆ. ಪೆಡ್ಲರ್‌ಗಳು ನಿಗದಿತ ಕಸದ ಜಾಗಕ್ಕೆ ಬಂದು ಡ್ರಗ್ಸ್ ಪಡೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ತನಿಖೆ ವೇಳೆ ಗೊತ್ತಾಗಿದೆ. ಇಂತಹ 50ಕ್ಕೂ ಅಧಿಕ ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದರು.