ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶ ರವಾನಿಸಿದ ಬಿಜೆಪಿ ಹೈಕಮಾಂಡ್

KannadaprabhaNewsNetwork | Published : Mar 26, 2024 1:18 AM

ಸಾರಾಂಶ

ಸಂಸದ ಅನಂತಕುಮಾರ ಹೆಗಡೆ ಅವರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ಹೈಕಮಾಂಡ್ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶ ರವಾನಿಸಿದೆ.

ಕಾರವಾರ: ಸಂಸದ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ಹೈಕಮಾಂಡ್ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶ ರವಾನಿಸಿದೆ.

ಮೋದಿ ಅವರು ಜಿಲ್ಲೆಗೆ ಬಂದಾಗಲೂ ಬಾರದೆ ಹೈಕಮಾಂಡಿಗೂ ಸೆಡ್ಡು ಹೊಡೆದು ರಾಜಕೀಯದಿಂದ ದೂರ ಉಳಿದರೂ ಅವರಿಗೆ ಟಿಕೆಟ್ ನೀಡಿದಲ್ಲಿ ಪಕ್ಷದ ಹೈಕಮಾಂಡ್ ಹೆಗಡೆ ಅವರಿಗೆ ಶರಣಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಆನೆ ನಡೆದಿದ್ದೇ ದಾರಿ ಎಂಬಂತೆ ಈ ಬಾರಿ ಗೆದ್ದರೂ ಅವರನ್ನು ಹಿಡಿಯುವವರೇ ಇರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ಅದಕ್ಕೆಲ್ಲ ಈಗ ಪೂರ್ಣವಿರಾಮ ಬಿದ್ದಿದೆ.

ಹಾಗಂತ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಸಿಕ್ಕಿದಲ್ಲಿ ಅವರ ಗೆಲುವಿನ ಬಗ್ಗೆ ಮಾತೇ ಇರಲಿಲ್ಲ. ಲಕ್ಷಾಂತರ ಮತಗಳ ಅಂತರದಿಂದ ನಿರಾಯಾಸವಾಗಿ ಗೆಲುವು ಸಾಧಿಸುತ್ತಿದ್ದರು. ಏಕೆಂದರೆ ಅವರ ಗೆಲುವಿನ ಹಿಂದೆ ಕಾಂಗ್ರೆಸ್ ಶಾಸಕರ ಕೊಡುಗೆಯೂ ಇರುತ್ತಿತ್ತು ಎನ್ನುವುದರಲ್ಲಿ ಯಾವುದೆ ರಹಸ್ಯ ಇರಲಿಲ್ಲ. ಸುಲಭದಲ್ಲಿ ಗೆಲ್ಲುವ ತಾಕತ್ತಿದ್ದರೂ ಹೈಕಮಾಂಡ್ ಇವರಿಗೆ ಮಣೆ ಹಾಕಿಲ್ಲ ಎಂದರೆ ಅನಂತಕುಮಾರ ಹೆಗಡೆ ಪಕ್ಷದೊಂದಿಗೆ ಯಾವ ಸಂಬಂಧ ಹೊಂದಿದ್ದರು ಎನ್ನುವುದು ಸ್ಪಷ್ಟವಾಗಿದೆ.

ಒಂದಿಲ್ಲೊಂದು ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದು, ಅವರ ಹೇಳಿಕೆಗಳು ಕಾಂಗ್ರೆಸ್‌ಗೆ ಚುನಾವಣಾ ಸರಕುಗಳನ್ನು ಒದಗಿಸಿ ಬಿಜೆಪಿಗೆ ಬೇಗುದಿಗೆ ಕಾರಣವಾಗುತ್ತಿತ್ತು. ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರಕ್ಕೂ ಬಾರದೆ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದು, ಮೇಲಾಗಿ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಅವರ ರಾಜಕೀಯ ಸಖ್ಯ ಅವರ ಮೇಲಿರುವ ಗಂಭೀರ ಆರೋಪ. ಅನಂತಕುಮಾರ ಅವರ ನಡೆಯಿಂದ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳದ್ದು ಮೂಕರೋದನವಾಗಿಯೇ ಉಳಿದಿತ್ತು. ಅನಂತಕುಮಾರ ಹೆಗಡೆ ಗೆಲ್ಲುವ ಕುದುರೆಯಾಗಿದ್ದರೂ ಅವರ ಅಪಸವ್ಯಗಳನ್ನು ಸಹಿಸಿಕೊಳ್ಳುವುದು ಹೈಕಮಾಂಡಿಗೆ ಕಷ್ಟಕರವಾಗಿತ್ತು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹೈಕಮಾಂಡ್ ಈಗ ಟಿಕೆಟ್ ಅನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡಿತು. ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ತಪ್ಪಲು ಅವರ ಸ್ವಯಂಕೃತಾಪರಾಧ ಕಾರಣವೇ ಹೊರತೂ ಬೇರೆ ಯಾವ ಕಾರಣವೂ ಇಲ್ಲ ಎನ್ನುವುದು ಸದ್ಯಕ್ಕೆ ಚರ್ಚಿತವಾಗುತ್ತಿರುವ ಸಂಗತಿ.

ಹಿಂದುತ್ವ ಅನಂತಕುಮಾರ ಹೆಗಡೆ ಅವರ ಕೈಹಿಡಿದಿತ್ತು. ಆದರೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಿತ್ತು. ಕೇವಲ ಹಿಂದೂ ಹುಲಿಯಾದರೆ ಸಾಲದು, ಅಭಿವೃದ್ಧಿಯಲ್ಲೂ ಅವರು ಹುಲಿಯಾಗಬೇಕಿತ್ತು ಎನ್ನುವ ಅಭಿಪ್ರಾಯವೂ ಜಿಲ್ಲೆಯಲ್ಲಿ ಬಹುಸಮಯದಿಂದ ಕೇಳಿಬರುತ್ತಿತ್ತು.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡದಿದ್ದರೂ, ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತಿದ್ದರೂ, ಮೋದಿ ಜಿಲ್ಲೆಗೆ ಬಂದಾಗಲೂ ಬಾರದೆ ಇದ್ದರೂ, ನಾಲ್ಕೂವರೆ ವರ್ಷಗಳ ಕಾಲ ರಾಜಕೀಯದಿಂದ ದೂರ ಇದ್ದರೂ, ಪಕ್ಷಕ್ಕೆ ಮುಜುಗರ ಉಂಟುಮಾಡುವ ಹೇಳಿಕೆಗಳನ್ನು ನೀಡುತ್ತಿದ್ದರೂ ಅವರಿಗೆ ಟಿಕೆಟ್ ನೀಡಿದರೆ ಹೈಕಮಾಂಡ್ ಹಾಗೂ ಪಕ್ಷ ಅನಂತಕುಮಾರ ಹೆಗಡೆ ಅವರಿಗೆ ಶರಣಾದಂತೆ ಎಂಬ ಅಭಿಪ್ರಾಯದ ಜತೆಗೆ ಬಿಜೆಪಿಯಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಸಂದೇಶ ಹೋಗುತ್ತಿತ್ತು. ಹೈಕಮಾಂಡ್ ಗಟ್ಟಿಯಾದ ನಿರ್ಧಾರ ಮಾಡಿ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶ ನೀಡಿದಂತಾಗಿದೆ.

ಮುಂದಿನ ನಡೆ ಏನು?: ಅನಂತಕುಮಾರ ಹೆಗಡೆ ಅವರಿಗೆ ಪಕ್ಷ 7 ಬಾರಿ ಸ್ಪರ್ಧೆಗೆ ಅವಕಾಶ ನೀಡಿದೆ. ಆರು ಬಾರಿ ಗೆದ್ದಿದ್ದಾರೆ. ಒಮ್ಮೆ ಕೇಂದ್ರ ಸಚಿವರೂ ಆಗಿದ್ದರು. ಈಗ ಟಿಕೆಟ್ ಕೈತಪ್ಪಿದಾಗ ಅವರು ಹಿಂದಿನಂತೆ ಅದೇ ರೋಷಾವೇಷದಿಂದ ಚುನಾವಣಾ ಕಣಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗೆಲುವಿಗೆ ಅಂದರೆ ಪಕ್ಷದ ಜಯಕ್ಕಾಗಿ ಕೆಲಸ ಮಾಡಲಿದ್ದಾರೆಯೇ? ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ಕೊಡುಗೆ ನೀಡಲಿದ್ದಾರೆಯೇ ಅಥವಾ ಚುನಾವಣಾ ರಾಜಕೀಯದಿಂದ ದೂರ ಸರಿಯಲಿದ್ದಾರೆಯೇ ಎನ್ನುವುದು ಸದ್ಯಕ್ಕೆ ಕ್ಷೇತ್ರದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

Share this article