ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಹೋರಾಟದಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರು

KannadaprabhaNewsNetwork | Published : Jul 13, 2024 1:34 AM

ಸಾರಾಂಶ

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಅಶ್ವಥ್ ನಾರಾಯಣ್, ಮನ್ಮುಲ್ ನಿರ್ದೇಶಕ ಎಸ್. ಪಿ. ಸ್ವಾಮಿ ಸೇರಿ ಹಲವು ಬಿಜೆಪಿ ನಾಯಕರು ಪೊಲೀಸರು ತಮ್ಮನ್ನು ವಶಕ್ಕೆ ಪಡೆಯುತ್ತಾರೆ ಎಂಬ ಕಾರಣಕ್ಕೆ ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಬೇರೆ ವಾಹನಗಳಲ್ಲಿ ಮೈಸೂರಿಗೆ ತೆರಳುವ ಮೂಲಕ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಮುಡಾ ಹಗರಣದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ಬಿಜೆಪಿ ನಾಯಕರು ಮೈಸೂರಿಗೆ ಪ್ರಯಾಣಿಸಿದ ಪ್ರಸಂಗ ಶುಕ್ರವಾರ ನಡೆಯಿತು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಅಶ್ವಥ್ ನಾರಾಯಣ್, ಮನ್ಮುಲ್ ನಿರ್ದೇಶಕ ಎಸ್. ಪಿ. ಸ್ವಾಮಿ ಸೇರಿ ಹಲವು ಬಿಜೆಪಿ ನಾಯಕರು ಪೊಲೀಸರು ತಮ್ಮನ್ನು ವಶಕ್ಕೆ ಪಡೆಯುತ್ತಾರೆ ಎಂಬ ಕಾರಣಕ್ಕೆ ತಮ್ಮ ಸ್ವಂತ ವಾಹನಗಳನ್ನು ಬಿಟ್ಟು ಬೇರೆ ವಾಹನಗಳಲ್ಲಿ ಮೈಸೂರಿಗೆ ತೆರಳುವ ಮೂಲಕ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದರು.

ಮುಡಾ ಹಗರಣದ ವಿರುದ್ಧದ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರು ಭಾಗವಹಿಸಲು ತೆರಳುತ್ತಿದ್ದರು. ಮಾರ್ಗ ಮಧ್ಯೆ ನಾಯಕರನ್ನು ತಡೆದು ವಶಕ್ಕೆ ಪಡೆಯಲು ಪೊಲೀಸರು ನಿರ್ಧರಿಸಿದ್ದರು.

ಅದರಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ. ಡಿವೈಎಸ್ಪಿ ಕೃಷ್ಣಪ್ಪ ನೇತೃತ್ವದಲ್ಲಿ ಸಿಪಿಐಗಳಾದ ಶಿವಕುಮಾರ್, ವೆಂಕಟೇಗೌಡ, ವಿವಿಧ ಠಾಣೆಗಳ ಪಿಎಸ್ಐ ಗಳಾದ ನರೇಶ್, ಮಲ್ಲಪ್ಪ ಕಂಬಾರ, ಸಂಚಾರಿ ಠಾಣೆ ಮಹೇಶ್, ಕಮಲಾಕ್ಷಿ ಸೇರಿ ನೂರಾರು ಪೊಲೀಸರು ಜಿಲ್ಲೆಯ ಗಡಿಭಾಗವಾದ ನಿಡಘಟ್ಟ ಹೊರವಲಯದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳನ್ನು ತಪಾಸಣೆ ನಡೆಸಿ ಬಿಜೆಪಿ ನಾಯಕರನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ಕೈಗೊಂಡಿದ್ದರು.

ಇದರ ಸುಳಿವನ್ನು ಅರಿತ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವ ಅಶ್ವಥ್ ನಾರಾಯಣ್ ಸೇರಿ ಹಲವು ಮುಖಂಡರು ಮಾರ್ಗ ಮಧ್ಯೆ ತಮ್ಮ ಕಾರುಗಳನ್ನು ಬಿಟ್ಟು ಗೂಡ್ಸ್ ವಾಹನದಲ್ಲಿ ಮೈಸೂರಿಗೆ ತೆರಳಿದರು.

ಈ ಮಧ್ಯೆ ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಸಹ ಚನ್ನಪಟ್ಟಣದ ಸಮೀಪದ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ತಮ್ಮ ಕಾರಿನಿಂದ ಇಳಿದು ಪಕ್ಷದ ಕಾರ್ಯಕರ್ತರ ಕಾರೊಂದರಲ್ಲಿ ಹೆದ್ದಾರಿ ಬಿಟ್ಟು ಹಳ್ಳಿಗಳ ರಸ್ತೆ ಮೂಲಕ ಮಂಡ್ಯಕ್ಕೆ ತೆರಳಿ ಮುಡಾ ಹಗರಣದ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೊಲೀಸರ ಬಂಧನಕ್ಕೆ ಒಳಗಾದರು.

ಬಿಜೆಪಿ ನಾಯಕರು ತಮಗೆ ಚಳ್ಳೆ ಹಣ್ಣು ತಿನ್ನಿಸಿ ಬೇರೆ ವಾಹನಗಳಲ್ಲಿ ಮೈಸೂರು, ಮಂಡ್ಯದ ಪ್ರತಿಭಟನೆಯಲ್ಲಿ ಭಾಗವಹಿಸಿರುವುದನ್ನು ಆರಿತ ಪೊಲೀಸರು ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲದಂತೆ ಸಿಬ್ಬಂದಿ ಸಮೇತ ಸ್ಥಳದಿಂದ ನಿರ್ಗಮಿಸಿದರು.

Share this article