ಬೆಲೆ ಏರಿಕೆ ಬರೆ: ಸರ್ಕಾರದ ವಿರುದ್ಧ ರೈತ ಸಂಘಟನೆಗಳ ಆಕ್ರೋಶ

KannadaprabhaNewsNetwork |  
Published : Nov 07, 2026, 03:15 AM IST
ಕುಷ್ಟಗಿ ಪಟ್ಟಣದ ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರವು ಸರ್ಕಾರಿ ಬಸ್ ಪ್ರಯಾಣ ದರ ಹಾಗೂ ನಂದಿನಿ ಹಾಲಿನ ದರ ಹೆಚ್ಚಿಸಿರುವುದನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ಕುಷ್ಟಗಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕುಷ್ಟಗಿ: ರಾಜ್ಯ ಸರ್ಕಾರವು ಸರ್ಕಾರಿ ಬಸ್ ಪ್ರಯಾಣ ದರ ಹಾಗೂ ನಂದಿನಿ ಹಾಲಿನ ದರ ಹೆಚ್ಚಿಸಿರುವುದನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ದೋಟಿಹಾಳ ಮಾತನಾಡಿ, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬಸ್ ಪ್ರಯಾಣ ದರ ಮತ್ತು ಹಾಲಿನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲು ಪ್ರತಿಯೊಂದು ಕುಟುಂಬದ ದಿನನಿತ್ಯದ ಅಗತ್ಯ ವಸ್ತುವಾಗಿದ್ದು, ದರ ಏರಿಕೆಯಿಂದ ಬಡ ಕುಟುಂಬಗಳ ಮಾಸಿಕ ಖರ್ಚು ಹೆಚ್ಚಾಗಿದೆ. ಮತ್ತೊಂದೆಡೆ, ಉದ್ಯೋಗ, ಶಿಕ್ಷಣ, ಆಸ್ಪತ್ರೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಪ್ರತಿನಿತ್ಯ ಬಸ್‌ಗಳನ್ನು ಅವಲಂಬಿಸಿರುವ ಗ್ರಾಮೀಣ ಜನರು, ಕಾರ್ಮಿಕರು, ಹಿರಿಯ ನಾಗರಿಕರಿಗೆ ಪ್ರಯಾಣ ದರ ಏರಿಕೆ ಆರ್ಥಿಕ ಹೊರೆಯಾಗಿದೆ. ಹಾಲಿನ ದರ ಏರಿಕೆಯ ನೆಪದಲ್ಲಿ ಹೋಟೆಲ್ ಮತ್ತು ಟೀ ಅಂಗಡಿಗಳಲ್ಲಿಯೂ ತಿಂಡಿ-ತಿನಿಸುಗಳ ದರ ಹೆಚ್ಚಿಸಲಾಗುತ್ತಿದೆ ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷ ಹನುಮೇಶ ಶಾಖಾಪುರ ಮಾತನಾಡಿ, ಹೈನುಗಾರಿಕೆ ನಂಬಿಕೊಂಡಿರುವ ರೈತರು ಕೂಡ ಸಂಕಷ್ಟದಲ್ಲಿದ್ದಾರೆ. ಹಿಂಡಿ, ಬೂಸಾ, ಪಶು ಆಹಾರ ಹಾಗೂ ಔಷಧಿಗಳ ಬೆಲೆ ಹೆಚ್ಚಾಗಿದ್ದು, ಹಾಲು ಉತ್ಪಾದನೆಯ ವೆಚ್ಚಕ್ಕೆ ಅನುಗುಣವಾಗಿ ರೈತರಿಗೆ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ. ಸರ್ಕಾರ ನೀಡಬೇಕಾದ ಹಾಲಿನ ಪ್ರೋತ್ಸಾಹಧನವೂ ಸಕಾಲಕ್ಕೆ ಬಿಡುಗಡೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಬಸ್ ಪ್ರಯಾಣ ದರ ಹಾಗೂ ನಂದಿನಿ ಹಾಲಿನ ದರ ಏರಿಕೆಯನ್ನು ಮರುಪರಿಶೀಲಿಸಿ ಇಳಿಕೆ ಮಾಡಬೇಕು. ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆ ನೀಡಬೇಕು. ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಸಾರಿಗೆ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡಬೇಕು ಹಾಗೂ ಪಶು ಆಹಾರಕ್ಕೆ ಹೆಚ್ಚಿನ ಸಬ್ಸಿಡಿ ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ಒಂದು ವಾರದೊಳಗೆ ಬೆಲೆ ಏರಿಕೆ ಆದೇಶಗಳನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ರೈತ ಸಂಘಟನೆಯ ಪ್ರಮುಖರಾದ ಶರಣಪ್ಪ ಮೇಗೂರು, ಹೊನ್ನಪ್ಪ ತಳವಾರ, ಸಂಗಮ್ಮ ಗುಳಗೌಡ್ರ, ನೀಲಪ್ಪ ಎನ್. ಕಡಿಯವರ, ಅಡಿವೆಪ್ಪ ನೆರೆಬೆಂಚಿ, ಯಮನೂರಪ್ಪ ಮಡಿವಾಳರ, ಮರಿಸ್ವಾಮಿ ಮ್ಯಾಗಳಮನಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ