ನಾಮಕರಣ ಚರ್ಚೆಯಲ್ಲೇ ಪಾಲಿಕೆ ಸಭೆ ವ್ಯರ್ಥ

KannadaprabhaNewsNetwork | Published : Nov 1, 2023 1:01 AM

ಸಾರಾಂಶ

ಆಡಳಿತ-ವಿಪಕ್ಷ ಸದಸ್ಯರ ವಾಕ್ಸಮರ । ಬಸ್‌ನಿಲ್ದಾಣ, ಹೊಸ ಬಡಾವಣೆ, ರಸ್ತೆ, ಚರಂಡಿಗಳಿಗೂ ಕಾಂಗ್ರೆಸ್‌ ನಾಯಕರ ಹೆಸರೇಕೆ?

ಆಡಳಿತ-ವಿಪಕ್ಷ ಸದಸ್ಯರ ವಾಕ್ಸಮರ । ಬಸ್‌ನಿಲ್ದಾಣ, ಹೊಸ ಬಡಾವಣೆ, ರಸ್ತೆ, ಚರಂಡಿಗಳಿಗೂ ಕಾಂಗ್ರೆಸ್‌ ನಾಯಕರ ಹೆಸರೇಕೆ?

ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಸಮಸ್ಯೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಆಗಬೇಕಿದ್ದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಸ್ಸುನಿಲ್ದಾಣ, ಬಡಾವಣೆಗಳಿಗೆ ಹೆಸರು ಇಡುವ ವಿಚಾರಕ್ಕೆ ಅನಗತ್ಯ ಚರ್ಚೆ, ವಾಗ್ವಾದಗಳ ಮೂಲಕ ಸಭೆಯ ಸಮಯ ವ್ಯರ್ಥವಾಯಿತು. ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್‌ ಬಿ.ಎಚ್‌.ವಿನಾಯಕ ಪೈಲ್ವಾನ್ ಅಧ್ಯಕ್ಷತೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಸಂಸದರಾದ ಜಿ.ಮಲ್ಲಿಕಾರ್ಜುನಪ್ಪ, ಚನ್ನಯ್ಯ ಒಡೆಯರ್ ಹೆಸರುಗಳ ಹೊಸದಾಗಿ ನಿರ್ಮಿಸುತ್ತಿರುವ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಹೊಸ ಬಡಾವಣೆಗಳಿಗೆ ನಾಮಕರಣ ಮಾಡಬೇಕು ಎಂದರು. ಮತ್ತೊಂದು ಹೆಜ್ಜೆ ಮುಂದೆ ಹೋದ ಬಿಜೆಪಿ ಸದಸ್ಯರು ಈಗಾಗಲೇ ಜಿಲ್ಲಾ ಕೇಂದ್ರದ ರಸ್ತೆಗಳು, ಬಡಾವಣೆಗಳು, ಚರಂಡಿಗಳಿಗೂ ಶಾಮನೂರು ಕುಟುಂಬದ ಹೆಸರು ಇಟ್ಟಿದ್ದು, ಅದನ್ನು ಬದಲಿಸಬೇಕು. ಹಳೆ ಬಸ್‌ ನಿಲ್ದಾಣಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಹೆಸರು ಬದಲಿಸಿ, ಊರಿನ ಅಭಿವೃದ್ಧಿಗೆ ಕೊಡುಗೆ ನೀಡಿದ ಇತರೆ ಗಣ್ಯರ ಹೆಸರಿಡಬೇಕು. ಶಿವಪಾರ್ವತಿ ಬಡಾವಣೆ ಹೆಸರನ್ನು ಬದಲಿಸಿ, ಜಿ.ಮಲ್ಲಿಕಾರ್ಜುನಪ್ಪ ಬಡಾವಣೆ ಎಂಬ ನಾಮಕರಣಕ್ಕೆ ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಪ್ರಸ್ತಾವಕ್ಕೆ ವಿಪಕ್ಷ ಸದಸ್ಯ ಕೆ.ಎಸ್‌.ಪ್ರಸನ್ನಕುಮಾರ, ಎಸ್‌.ಟಿ.ವೀರೇಶ, ಕೆ.ಎಂ.ವೀರೇಶ ಇತರರೂ ಧ್ವನಿಗೂಡಿಸಿದರು. ಅದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯ ಎ.ನಾಗರಾಜ ಇತರರು, ಹಳೆ ಬಸ್ಸು ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಹೆಸರು ಹಿಂದೆಯೇ ನಾಮಕರಣ ಮಾಡಲಾಗಿದೆ. ಶಿವ ಪಾರ್ವತಿ ಬಡಾವಣೆ ನಾಮಕರಣವಾಗಿದ್ದರೂ, ಅದಕ್ಕೆ ಜಿ.ಮಲ್ಲಿಕಾರ್ಜುನಪ್ಪ ಬಡಾವಣೆ ಅಂತಾ ಹೆಸರು ಬದಲಿಸಲು ಹೋಗಿದ್ದ ಬಿಜೆಪಿಯವರಿಗೆ ಆ ಭಾಗದ ಜನರೇ ಶಿವ ಪಾರ್ವತಿ ಬಡಾವಣೆಯೆಂದೇ ಹೆಸರಿರಲೆಂದು ಹೇಳಿ ಕಳಿಸಿದ್ದಾರೆಂದು ಬಿಜೆಪಿ ಸದಸ್ಯರ ಹೇಳಿಕೆಗೆ ತಿರುಗೇಟು ನೀಡಿದರು.

ಸರ್ಕಾರದ ಮಟ್ಟದಲ್ಲಿ ತೀರ್ಮಾನ:

ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಮಾತನಾಡಿ, ಶಿವಪಾರ್ವತಿ ಹೆರಿನ ಬದಲಿಗೆ ಜಿ.ಮಲ್ಲಿಕಾರ್ಜುನಪ್ಪ ಬಡಾವಣೆಯೆಂದು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಿದೆ. ಇದು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದರು. ಆಗ ಕಾಂಗ್ರೆಸ್ ಸದಸ್ಯ ಎ.ನಾಗರಾಜ, ಸ್ಥಳೀಯ ಜನರೇ ಹೊಸ ಹೆಸರಿಗೆ ಆಕ್ಷೇಪಿಸಿದ್ದು, ಸರ್ಕಾರಕ್ಕೆ ಈ ವಿಚಾರವನ್ನೂ ತಿಳಿಸಲು ಅವಕಾಶ ಇದೆ. ಈ ವಿಚಾರವನ್ನು ಮೇಯರ್ ಹಾಗೂ ಆಯುಕ್ತರು ಸರ್ಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು.

ಬಿಜೆಪಿ ಸದಸ್ಯ ಎಸ್‌.ಟಿ.ವೀರೇಶ ಮಾತನಾಡಿ, ದಾವಣಗೆರೆ ಅಭಿವೃದ್ಧಿಯಲ್ಲಿ ಪಾಲುದಾರರಾದ 2 ಸಲ ಸಂಸದರಾಗಿದ್ದ ಜಿ.ಮಲ್ಲಿಕಾರ್ಜುನಪ್ಪ, ಮೂರು ಸಲ ಸಂಸದರಾಗಿದ್ದ ಚನ್ನಯ್ಯ ಒಡೆಯರ್‌ ರಂತವರು ತೆರೆಮರೆಗೆ ಸರಿಯುತ್ತಾರೆ. ಪಾಲಿಕೆ ಸಭಾಂಗಣದಲ್ಲಿ ಯಾವ ಸಭೆಯಲ್ಲಿ ನೀವು ಚರ್ಚಿಸಿ, ಶಾಮನೂರು ಶಿವಶಂಕರಪ್ಪ ಹೆಸರನ್ನು ಇಟ್ಟಿದ್ದೀರಿ ಎಂಬ ಬಗ್ಗೆ ಕಾಗದ ಪತ್ರ, ಸಭೆ ನಿರ್ಣಯ ದಾಖಲೆಗಳ ನೀಡಿ ಎಂಬುದಾಗಿ ಪಟ್ಟು ಹಿಡಿದರು. ದಾಖಲೆ ಒದಗಿಸುವುದಾಗಿ ಕಾಂಗ್ರೆಸ್ ಸದಸ್ಯರು ಸಾಕಷ್ಟು ಹೇಳಿದರೂ, ಕಿವಿಗೊಡದ ವೀರೇಶ ಇತರರು ದಾಖಲೆ ಇದ್ದರೆ ತಾನೇ ನೀಡು ಕೊಡುವುದು? ದಾಖಲಾತಿ ಇದ್ದರೆ ಇದೇ ಸಭೆಗೆ ಅರ್ಧ ಗಂಟೆಯಲ್ಲಿ ತಂದು ಕೊಡಬಹುದಿತ್ತಲ್ಲವೇ ಎಂದಾಗ ಆಡಳಿತ ಪಕ್ಷ ಸದಸ್ಯರು ನಿರುತ್ತರರಾದರು.

ಕಾಂಗ್ರೆಸ್‌ನ ಹಿರಿಯ ಸದಸ್ಯರಾದ ಕೆ.ಚಮನ್ ಸಾಬ್‌, ಎ.ನಾಗರಾಜ ಇತರರು ಮಾತನಾಡಿದರು. ಮೇಯರ್ ವಿನಾಯಕ ಪೈಲ್ವಾನ್, ಉಪ ಮೇಯರ್ ಯಶೋಧ ಯೋಗೇಶ, ಆಡಳಿತ ಮತ್ತು ವಿಪಕ್ಷ ಸದಸ್ಯರು, ಪಾಲಿಕೆ ಅಧಿಕಾರಿ, ಸಿಬ್ಬಂದಿ ಇದ್ದರು. .....................................

ಭ್ರಷ್ಟರು ಸೇವೆಯಿಂದ ವಜಾ ಆಗಲಿ

ದಾವಣಗೆರೆ ಪಾಲಿಕೆಯಲ್ಲಿ ಭ್ರಷ್ಟಾಚಾರ ಎಸಗುತ್ತಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಕೇವಲ ಅಮಾನತುಗೊಳಿಸದರಷ್ಟೇ ಸಾಲದು. ಅಂತಹವರನ್ನು ಶಾಶ್ವತವಾಗಿ ಸೇವೆಯಿಂದ ವಜಾಗೊಳಿಸಬೇಕು. ಹಿರಿಯ ಸದಸ್ಯ ಎಲ್.ಡಿ.ಗೋಣೆಪ್ಪ ಮಾಡಿರುವ ಆರೋಪವನ್ನು ಮೇಯರ್, ಆಯುಕ್ತರು ಗಂಭೀರವಾಗಿ ಪರಿಗಣಿಸಿ, ಉನ್ನತ ಮಟ್ಟದ ತನಿಖೆಗೆ ಒಪ್ಪಿಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಡಳಿತ-ವಿಪಕ್ಷ ಸದಸ್ಯರು ಧ್ವನಿಗೂಡಿಸಿದರು.

₹ 20 ಕೋಟಿಗೂ ಅಧಿಕ ಭ್ರಷ್ಟಾಚಾರ ದಾವಣಗೆರೆ 6ನೇ ವಾರ್ಡ್‌ ಎಸ್ಸೆಂ ಕೃಷ್ಣ ನಗರದಲ್ಲಿ 7 ಫಲಾನುಭ‍ವಿಗಳಿಗೆ ಆಶ್ರಯದಡಿ ನಿವೇಶನದ ಹಕ್ಕುಪತ್ರ ನೀಡಿದ್ದು, ಅಲ್ಲಿ ಹೋಗಿ ನೋಡುವಷ್ಟರಲ್ಲಿ ನಾಲ್ಕು ಅಡಿ ಜಾಗವೂ ಇಲ್ಲ. ಗೋವಿಂದ ನಾಯ್ಕ ಎಂಬ ಅಧಿಕಾರಿಯಿಂದ ಇಷ್ಟೆಲ್ಲಾ ಭ್ರಷ್ಟಾಚಾರ ನಡೆದಿದೆ. ಪಾಲಿಕೆಯಲ್ಲಿ ಸುಮಾರು 20 ಕೋಟಿ ರು.ಗೂ ಅಧಿಕ ಭ್ರಷ್ಟಾಚಾರ, ಅಕ್ರಮ ನಡೆದಿದ್ದು, ಉನ್ನತ ಮಟ್ಟದ ತನಿಖೆಗೆ ಪಾಲಿಕೆ ಮುಂದಾಗಬೇಕು.

ಎಲ್‌.ಡಿ.ಗೋಣೆಪ್ಪ, ಬಿಜೆಪಿ ಹಿರಿಯ ಸದಸ್ಯ.

...................

ನೀರಿನ ಬವಣೆ ತಪ್ಪಿಸಿ ನಗರದ 45 ವಾರ್ಡ್ ಪೈಕಿ ಕೆಲ ವಾರ್ಡ್‌ಗಳಲ್ಲಿ ಈಗಲೇ ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತಿದೆ. ನೀರು ಪೂರೈಕೆ ವಿಭಾಗದ ಎಇಇ ನಿರ್ಲಕ್ಷ್ಯವೂ ಇದಕ್ಕೆ ಕಾರಣ. ಮುಂಬರುವ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರು ಸಿಗದೇ, ಜನರು ಪಾಲಿಕೆಗೆ ಹಿಡಿಶಾಪ ಹಾಕುವುದನ್ನು ತಡೆಯಿರಿ. ವಾಟ್ಸಪ್‌ ಗ್ರೂಪ್ ಮಾಡಿ, ನೀರಿನ ಬವಣೆ ತಪ್ಪಿಸಲು ಆಯುಕ್ತರು ಮುಂದಾಗಬೇಕು.

ಆರ್‌.ಶಿವಾನಂದ, ಬಿಜೆಪಿ ಸದಸ್ಯ. ಅಧಿಕಾರಿಗಳ ಬದಲಾಯಿಸಿ ಹಿಂದೆ ತಾವು ಮೇಯರ್ ಆಗಿದ್ದ ವೇಳೆ ಪಾಲಿಕೆಯ 140 ಅಧಿಕಾರಿಗಳ ಬದಲಾಯಿಸಿದ್ದೆ. ಹಾಗಾದಾಗ ಮಾತ್ರ ಪಾಲಿಕೆಯಲ್ಲಿ ಎಲ್ಲಾ ಕಾರ್ಯ ಸುಗಮವಾಗಿ ಆಗುತ್ತವೆ. ಐದು ವರ್ಷ ಮೇಲ್ಪಟ್ಟು ಪಾಲಿಕೆಯಲ್ಲಿ ಇರುವವರಿಗೆ ಬೇರೆಡೆ ವರ್ಗಾವಣೆ ಮಾಡುವ ಕೆಲಸ ಮೊದಲು ಆಗಬೇಕು.

ಬಿ.ಜಿ.ಅಜಯಕುಮಾರ, ಬಿಜೆಪಿ ಸದಸ್ಯ.

..........................

Share this article