ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿಯ ಕೊಳಚಿಕಂಬಳದ ಅಳಿವೆ ಸಮೀಪದ ಸಸಿಹಿತ್ಲು ಮುಂಡಾ ಬೀಚ್ ಬಳಿ ಭಾನುವಾರ ಬೆಳಗ್ಗೆ ನೀರುಪಾಲಾದ ಬಜಪೆಯ ಅದ್ಯಪಾಡಿಯ ಅಭಿಲಾಶ್ (24) ಮೃತದೇಹವು ಮಂಗಳವಾರ ಹೆಜಮಾಡಿ ಕೋಡಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಶ್ (24) ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನ ಕೆಲಸ ನಿರ್ವಹಿಸುತ್ತಿದ್ದು ಉತ್ತಮ ಈಜುಗಾರ. ಭಾನುವಾರ ಬೆಳಗ್ಗೆ ಕೊಳಚಿ ಕಂಬಳ ಬಳಿಯ ಮೂಲ್ಕಿ ಅಳಿವೆ ಪ್ರದೇಶಕ್ಕೆ ಒಟ್ಟು 10 ಮಂದಿಯ ತಂಡ ಸಮುದ್ರದ ಚಿಪ್ಪು (ಮರುವಾಯಿ) ಹೆಕ್ಕಲು ಆಗಮಿಸಿತ್ತು. ಮೂಲ್ಕಿಯ ಕೊಳಚಿ ಕಂಬಳ ಬೀಚ್ ಬಳಿಗೆ ಬಂದು ಅಳಿವೆಯಲ್ಲಿ ಶಾಂಭವಿ ನದಿಯಲ್ಲಿ ನೀರಿನ ಇಳಿತವಿದ್ದ ಕಾರಣ ಚಿಪ್ಪು ಹೆಕ್ಕಲು ಸುಮಾರು 2 ಕಿ.ಮೀ. ದೂರ ಸಾಗಿದ್ದ ಸಂದರ್ಭ ಧನುಶ್ ಕುಲಶೇಖರ, ಜೀವನ್ ಎಕ್ಕಾರು ನೀರಿನ ಸುಳಿಗೆ ಸಿಲುಕಿದ್ದರು. ಮುಳುಗುತ್ತಿರುವ ಅವರನ್ನು ರಕ್ಷಿಸಲು ಹೋದ ಈಜುಗಾರ ಅಭಿಲಾಶ್ ನೀರು ಪಾಲಾಗಿದ್ದರು. ಈ ಸಂದರ್ಭ ಹೆಜಮಾಡಿಯ ಸದಾಶಿವ ಕೋಟ್ಯಾನ್ ಅವರ ಮೀನುಗಾರರ ತಂಡ ಮೀನುಗಾರಿಕೆ ಮುಗಿಸಿ ಬರುತ್ತಿದ್ದ ವೇಳೆ ಧನುಶ್ ಮತ್ತು ಜೀವನ್ ಅವರನ್ನು ರಕ್ಷಿಸಿದರು. ಕೊನೆ ಗಳಿಗೆಯಲ್ಲಿ ಅಭಿಲಾಶ್ ಮುಳುಗಿದ್ದರಿಂದ ರಕ್ಷಿಸಲು ಸಾಧ್ಯವಾಗಿರಲಿಲ್ಲ.
ನೀರು ಪಾಲಾದ ಅಭಿಲಾಶ್ ಪತ್ತೆಗಾಗಿ ಭಾನುವಾರ ರಾಜ್ಯ ವಿಪತ್ತು ಸ್ಪಂದನಾ ಪಡೆ, ಕರಾವಳಿ ಕಾವಲು ಪಡೆ, ಉಡುಪಿಯ ಅಪದ್ಭಾಂಧವ ಈಜುಗಾರರಾದ ಈಶ್ವರ್ ಮಲ್ಪೆ ತಮ್ಮ ತಂಡದೊಂದಿಗೆ ಸಸಿಹಿತ್ಲು ಮುಂಡಾ ಬೀಚ್ ಸಮುದ್ರದ ಅಳಿವೆ ಬಾಗಿಲಿನಲ್ಲಿ ನೀರಿನಲ್ಲಿ ಮುಳುಗಿ ಶೋಧ ಕಾರ್ಯ ನಡೆಸಿದರೂ ಸಫಲವಾಗಿರಲಿಲ್ಲ. ಮಂಗಳವಾರದಂದು ಹೆಜಮಾಡಿ ಕರಾವಳಿ ಕಾವಲು ಪಡೆ ಠಾಣೆಯ ಬಳಿ ಸಮುದ್ರ ತೀರದಲ್ಲಿ ಶವ ಕಂಡು ಬಂದಿದೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.