ವೀರ ವನಿತೆ ಓಬವ್ವ ಜಯಂತಿ । ಛಲವಾದಿ ಸಮುದಾಯ ಸಾಧನೆ ಮಾಡಿದವರಿಗೆ ಸನ್ಮಾನ
ಚಿತ್ರದುರ್ಗದ ಕೋಟೆಯನ್ನು ಹೈದರಾಲಿಯ ದಾಳಿಯಿಂದ ತಪ್ಪಿಸಿದ ವೀರ ವನಿತೆ ಒನಕೆ ಓಬವ್ವ ಅವಳ ಸಾಹಸ ಮತ್ತು ಶೌರ್ಯದಿಂದ ಚಿತ್ರದುರ್ಗದ ಕೋಟೆ ಹೈದರಾಳಿಯ ಕೈ ವಶವಾಗುವುದನ್ನ ತಪ್ಪಿಸಿದರು ಎಂದು ತಹಸಿಲ್ದಾರ್ ಸಿ.ಪಿ.ನಂದಕುಮಾರ್ ತಿಳಿಸಿದರು
ಛಲವಾದಿ ಮಹಾಸಭಾ ಒಕ್ಕೂಟ ಆಲೂರು ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ವೀರ ವನಿತೆ ವನಕೆ ಓಬವ್ವ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೈದರಾಲಿಯು ದುರ್ಗವನ್ನು ವಶಪಡಿಸಿಕೊಳ್ಳಲು ಸದಾ ತವಕಿಸುತ್ತಿದ್ದ. ಕ್ರಿ.ಶ. 1762, 1774, 1777 ಹೀಗೆ ಸತತವಾಗಿ ಮೂರು ಬಾರಿ ದಂಡೆತ್ತಿ ಬಂದು, ನಿರಾಶನಾಗಿ ಹಿಂದಿರುಗಿದ್ದ. 1779ರಲ್ಲಿ ನೇರವಾಗಿ ಕಾದಾಡುವ ಬದಲು ಕುಟಿಲೋಪಾಯದಿಂದ ಕೋಟೆಯನ್ನು ವಶಪಡಿಸಿಕೊಳ್ಳಲು ಮುಂದಾಗಿ ಗೂಢಚಾರರನ್ನು ನೇಮಿಸಿದ. ವಾಯವ್ಯ ದಿಕ್ಕಿನಲ್ಲಿ ಕೋಟೆಯ ಸಾಲಲ್ಲೊಂದು ಕಳ್ಳಗಿಂಡಿ ಕಂಡಾಗ ಸುಲಭವಾಗಿ ಒಳಗೆ ನುಸುಳುವ ಸಂಚು ರೂಪಿಸಿ ಸೇನೆಯನ್ನು ಕಳುಹಿಸಿದ ನರಿ ಬುದ್ಧಿಯವ ಎಂದು ಹೇಳಿದರು.ಒಬ್ಬರು ಮಾತ್ರವೇ ನುಸುಳಬಹುದಾದ ಕಿಂಡಿಯ ಬಳಿಯೇ ಓಬವ್ವೆಯ ಮನೆ. ಮಧ್ಯಾಹ್ನದ ವೇಳೆ ಆಕೆಯ ಪತಿ ಕೋಟೆಯ ಕಾವಲಿನಲ್ಲಿ ನಿರತನಾಗಿದ್ದುದು ದೂರದ ಕಹಳೆ ಬತೇರಿಯ ಮೇಲೆ. ಇತ್ತ ಹೈದರಾಲಿಯ ಸೇನಾ ಪಡೆ ಹೊಂಚು ಹಾಕಿ ಕಿಂಡಿಯ ಮೂಲಕ ಕೋಟೆಯ ಒಳ ನುಸುಳಲು ಸಜ್ಜಾಯಿತು. ಮನೆಯಲ್ಲಿ ಅಡುಗೆ ಮಾಡಿಟ್ಟು ಗಂಡನ ಬರುವಿಕೆಗಾಗಿ ಕಾಯುತ್ತಿದ್ದ ಓಬವ್ವೆ, ಗಂಡ ಬರುವುದು ತಡವಾದ್ದರಿಂದ ಏನು ತುರ್ತು ಇದೆಯೋ ಎಂದು ಭಾವಿಸಿ ಮಗುವನ್ನು ಮಲಗಿಸಿ, ನೆರೆಯ ಮನೆಯವರಿಂದ ಕಾಳು ಕುಟ್ಟಲು ತಂದಿದ್ದ ಒನಕೆಯನ್ನು ಕೊಟ್ಟು ಬರಲು ಹೊರಟಳು. ಕಳ್ಳ ಕಿಂಡಿಯ ಮುಂದೆ ಹಾದು ಹೋಗುವಾಗ ಅಸ್ಪಷ್ಟ ಮಾತುಗಳು ಕೇಳಿ ಬಂದವಲ್ಲದೆ ಕತ್ತಿ ಗುರಾಣಿಗಳ ಶಬ್ದ, ಕುದುರೆಗಳ ಕಲರವ ಕೇಳಿ ಬಂದಾಗ ಜಾಗೃತವಾದಳು. ಕಳ್ಳಗಿಂಡಿಯತ್ತ ಬಾಗಿ ನೋಡಿದಾಗ ಒಬ್ಬ ನುಸುಳುತ್ತಿರುವುದು ಗೋಚರವಾಯಿತು. ಅವನ ಹಿಂದೆ ಹಲವರು ಕಂಡಾಗ ಇದು ಶತ್ರುಗಳ ಹುನ್ನಾರವೆಂದು ಯೋಚಿಸಿ, ಸಮಯ ವ್ಯರ್ಥ ಮಾಡದೆ ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ, ವೀರಗಚ್ಚೆ ಹಾಕಿ ತನ್ನ ಕೈಯಲ್ಲಿದ್ದ ಒನಕೆಯಿಂದಲೇ ಶತ್ರುಗಳ ತಲೆ ಒಡೆಯಲು ಸನ್ನದ್ಧಳಾಗಿ ನಿಂತಳು. ಇವಳ ಕೆಚ್ಚೆದೆಯ ಶೌರ್ಯವು ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದು ಮಾಹಿತಿ ನೀಡಿದರು.
ಪಪಂ ಅಧ್ಯಕ್ಷೆ ತಾಹೀರ ಬೇಗಂ, ಸದಸ್ಯ ತೌಪಿಕ್ ಅಹಮದ್, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಎ.ಟಿ ಮಲ್ಲೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷೆ ಉಮಾ ರವಿಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್ ಶಿವಮೂರ್ತಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಕೃಷ್ಣ, ಹಿಂದುಳಿದ ವರ್ಗಗಳ ಮುಖಂಡ ಬಿ.ಸಿ ಶಂಕರಚಾರ್, ಹಾಸನ ಹಾಲೂ ಒಕ್ಕೂಟ ನಿರ್ದೇಶಕ ಪಿ.ಎಲ್ ನಿಂಗರಾಜು, ಡಿಎಸ್ಎಸ್ ತಾಲೂಕು ಸಂಚಾಲಕ ಬಸವರಾಜು, ಮುಖಂಡರದ ಅಜ್ಜನಹಳ್ಳಿ ಲೋಕೇಶ್, ದೇವರಾಜು ಸೇರಿದಂತೆ ಇತರರು ಹಾಜರಿದ್ದರು.