ವರುಣನ ಆರ್ಭಟಕ್ಕೆ ನಲುಗಿದ ಕಂಪ್ಲಿಯ ಅನ್ನದಾತರು

KannadaprabhaNewsNetwork | Published : Aug 21, 2024 12:31 AM

ಸಾರಾಂಶ

ಬಾಳೆ, ಕಬ್ಬು, ಸೊಪ್ಪು, ಮೆಕ್ಕೆ ಜೋಳ, ಮೆಣಸಿನಕಾಯಿ ಸೇರಿದಂತೆ ನೂರಾರು ಎಕರೆ ಬೆಳೆ ಜಲಾವೃತಗೊಂಡಿದೆ.

ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಮಂಗಳವಾರ ಬೆಳಗಿನಜಾವ 3 ಗಂಟೆ ಸುಮಾರಿಗೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು ಒಟ್ಟಾರೆ ಕಂಪ್ಲಿ ತಾಲೂಕಿನಲ್ಲಿ 8.14 ಸೆಂ.ಮೀ. ದಾಖಲೆಯ ಮಳೆಯಾಗಿದೆ. ಕಂಪ್ಲಿ ಪಟ್ಟಣ, ರಾಮಸಾಗರ, ದೇವಲಾಪುರ, ಮೆಟ್ರಿ, ದೇವಸಮುದ್ರ, ನಂ.10 ಮುದ್ದಾಪುರ, ಸಣಾಪುರ, ಬೆಳಗೋಡ್ ಹಾಳ್ ಸೇರಿದಂತೆ ತಾಲೂಕಿನಾದ್ಯಂತ ರೈತರ ಜಮೀನುಗಳಲ್ಲಿ ಹಳ್ಳದಂತೆ ನೀರು ಹರಿಯುತ್ತಿದ್ದು, ಭತ್ತ, ಹೂ, ಬಾಳೆ, ಕಬ್ಬು, ಸೊಪ್ಪು, ಮೆಕ್ಕೆ ಜೋಳ, ಮೆಣಸಿನಕಾಯಿ ಸೇರಿದಂತೆ ನೂರಾರು ಎಕರೆ ಬೆಳೆ ಜಲಾವೃತಗೊಂಡಿದೆ.

ಲಕ್ಷಾಂತರ ರು. ವ್ಯಯಿಸಿ ಬಿತ್ತನೆ ಮಾಡಿರುವ ರೈತರಲ್ಲಿ ಬೆಳೆ ನಷ್ಟದ ಆತಂಕ ಹೆಚ್ಚಾಗಿದೆ. ಹೊಸ ಬಸ್ ನಿಲ್ದಾಣದ ಬಳಿಯ ಚರಂಡಿ ನೀರೆಲ್ಲ ಹರಿದು ಬಂದು ಸ್ಥಳದಲ್ಲಿನ ಗ್ಯಾರೇಜ್ ಸೇರಿದಂತೆ ಇತರೆ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಯಂತ್ರಗಳು ಕೆಟ್ಟು ನಿಂತಿವೆ. ರಾಜ್ಯ ಹೆದ್ದಾರಿ-29ರ ಮಾರೆಮ್ಮ ದೇವಸ್ಥಾನ ಬಳಿ ಹರಿಯುತ್ತಿರುವ ನೀರಿನ ರಭಸಕ್ಕೆ ರಸ್ತೆ ಕೆಳ ಭಾಗದ ಮಣ್ಣೆಲ್ಲ ಕುಸಿದು ರಸ್ತೆ ಹಾನಿಯಾಗಿದ್ದು, ಸಂಚಾರ ವ್ಯತ್ಯಯವಾಗಿದೆ. ತಾಲೂಕಿನ ಎಲ್ಲೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು ಜವುಕು-ಜೀರಿಗನೂರು ಮತ್ತು ಚಿನ್ನಾಪುರ-ಮೆಟ್ರಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆ ಸೇತುವೆ ಮೇಲಿನ ಸಂಪರ್ಕ ಕಡಿತಗೊಂಡಿದೆ.

ದೇವಲಾಪುರ ಗ್ರಾಮದ ರಾಜನ ಮಟ್ಟಿಯ ಚರಂಡಿ ಭರ್ತಿಯಾಗಿ ಗ್ರಾಪಂ ಬಳಿಯ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ವಸ್ತುಗಳೆಲ್ಲ ನೀರಿನಲ್ಲಿ ತೇಲುತ್ತಿದ್ದವು. ದೇವಲಾಪುರ ಗ್ರಾಮದಿಂದ ಕಮಲಾಪುರಕ್ಕೆ ತೆರಳುವ ಮುಖ್ಯ ರಸ್ತೆಗೆ ಅಡ್ಡಲಾಗಿ ಬೃಹದಾಕರಾದ ಮರ ನೆಲಕ್ಕುರುಳಿದೆ. ಇನ್ನು ಸಣಾಪುರ ಗ್ರಾಪಂ ಪಕ್ಕದಲ್ಲಿನ 15ಕ್ಕೂ ಹೆಚ್ಚು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ತಾಲೂಕಿನ ಶಾಂತಿನಗರ ಬಳಿಯ ನಾರಿಹಳ್ಳ, ಎಮ್ಮಿಗನೂರು ಬಳಿಯ ಜಡಿಸಿದ್ದೇಶ್ವರ ಹಳ್ಳ, ದೇವಸಮುದ್ರ ಗ್ರಾಮದ ಬಳಿಯ ಮಾರೆಮ್ಮನ ಹಳ್ಳ ಸೇರಿದಂತೆ ಎಲ್ಲಾ ಹಳ್ಳಗಳು ತುಂಬಿ ಹರಿಯುತ್ತಿದ್ದು ಹಳ್ಳದ ಬದಿಯ ಜಮೀನುಗಳಿಗೆ ನೀರು ನುಗ್ಗಿ ಪಂಪ್ ಸೆಟ್ ಗಳು ಕೊಚ್ಚಿ ಹೋಗಿವೆ.

ಮೆಟ್ರಿ, ಸಣಾಪುರ, ಜವುಕು, ಸುಗ್ಗೇನಹಳ್ಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಬೆಳೆ ಜಲಾವೃತಗೊಂಡ ಜಮೀನುಗಳಿಗೆ, ಮನೆಗಳ ಸ್ಥಳಕ್ಕೆ ತಹಸೀಲ್ದಾರ್ ಶಿವರಾಜ್ ಶಿವಪುರ ಭೇಟಿ ನೀಡಿ ಪರಿಶೀಲಿಸಿದರು.

410ಕ್ಕೂ ಹೆಚ್ಚು ಎಕರೆಗಳಷ್ಟು ಬೆಳೆ ಜಲಾವೃತಗೊಂಡಿದೆ. ಕವಣಿತಿಮ್ಮಲಾಪುರ 2, ಜವುಕು 2, ಜೀರಿಗನೂರು, ಮೆಟ್ರಿ, ಉಪ್ಪಾರಹಳ್ಳಿ, ನೆಲ್ಲುಡಿಯಲ್ಲಿ ತಲಾ ಒಂದು ಸೇರಿ ತಾಲೂಕಿನಲ್ಲಿ 8 ಮನೆಗಳು ಭಾಗಶಃ ಕುಸಿದಿವೆ. ಜಮೀನುಗಳಿಗೆ ಕೃಷಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಲಿದ್ದು, ನಷ್ಟಕ್ಕೂಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

Share this article