ಮೋಡಗಳ ನಂಬಿ ಉಳುಮೆಗೆ ಮುಂದಾದ ಅನ್ನದಾತರು

KannadaprabhaNewsNetwork |  
Published : May 19, 2024, 01:47 AM IST
ಹರಪನಹಳ್ಳಿ ತಾಲೂಕಿನ ಮಾಡ್ಲಗೇರಿಯಲ್ಲಿ ಭೂಮಿ ಸಿದ್ದತೆಯಲ್ಲಿ ತೊಡಗಿರುವ ರೈತ. | Kannada Prabha

ಸಾರಾಂಶ

ಮಾರ್ಚ್‌ನಿಂದ ಈ ವರೆಗೆ 75.9 ಮಿ.ಮೀ. ವಾಡಿಕೆ ಮಳೆ ಬೀಳಬೇಕಾಗಿತ್ತು. ಆದರೆ 38.4 ಮಿ.ಮೀ. ಮಳೆ ಆಗಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಕಳೆದ ಮೂರು ತಿಂಗಳಲ್ಲಿ ವಾಡಿಕೆಗಿಂತ ಶೇ.49 ಮಳೆ ಕೊರತೆಯಾಗಿದ್ದರೂ ಬಿದ್ದ ಅಲ್ಪಸ್ವಲ್ಪ ಮಳೆಗೆ ಮತ್ತು ತೇಲಾಡುವ ಮೋಡಗಳ ನಂಬಿ ತಾಲೂಕಿನಲ್ಲಿ ರೈತರು ಭೂಮಿ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.

ಮಾರ್ಚ್‌ನಿಂದ ಈ ವರೆಗೆ 75.9 ಮಿ.ಮೀ. ವಾಡಿಕೆ ಮಳೆ ಬೀಳಬೇಕಾಗಿತ್ತು. ಆದರೆ 38.4 ಮಿ.ಮೀ. ಮಳೆ ಆಗಿದೆ. ಶೇ.49ರಷ್ಟು ಮಳೆ ಕೊರತೆಯಾಗಿದೆ. ತೆಲಿಗಿ ಹೋಬಳಿಯಲ್ಲಿ 52.8 ಮಿ.ಮೀ., ಅರಸಿಕೇರಿಯಲ್ಲಿ ಶೇ.33.3 ಮಿ.ಮೀ. ಮಳೆಯಾಗಿದೆ. ಬಿತ್ತನೆ ಗುರಿ 87396 ಹೆಕ್ಟೇರ್‌ನಷ್ಟು ಇದ್ದು, ಅದರಲ್ಲಿ 87704 ಹೆಕ್ಟೇರ್‌ನಷ್ಟು ಖುಷ್ಕಿ, ಕೇವಲ 669 ಹೆಕ್ಟೇರ್‌ ನೀರಾವರಿ ಇದೆ.

ಮೆಕ್ಕೆಜೋಳ, ರಾಗಿ, ತೊಗರಿ, ಶೇಂಗಾ, ದ್ವಿದಳ ಧಾನ್ಯಗಳು ಇಲ್ಲಿಯ ಪ್ರಮುಖ ಬೆಳೆಗಳು. ಅದರಲ್ಲೂ ಮೆಕ್ಕೆಜೋಳ ಶೇ.80ರಷ್ಟು ಇದೆ. ಹರಪನಹಳ್ಳಿ ತಾಲೂಕನ್ನು ಮೆಕ್ಕೆಜೋಳದ ಕಣಜ ಎಂದೇ ಕರೆಯುವರು.

6000 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು:

24,615 ಮೆಟ್ರಿಕ್‌ ಟನ್‌ ರಸಗೊಬ್ಬರ ತಾಲೂಕಿಗೆ ಅಗತ್ಯವಿದ್ದು, ಅದರಲ್ಲಿ ಸದ್ಯ 6 ಸಾವಿರ ಮೆಟ್ರಿಕ್‌ ಟನ್‌ ಮಾತ್ರ ದಾಸ್ತಾನು ಇದೆ. ಬಿತ್ತನೆ ಪ್ರಾರಂಭವಾದಾಗ ಅಗತ್ಯವಿರುವ ರಸಗೊಬ್ಬರ ಬರುತ್ತದೆ ಎಂದು ಕೃಷಿ ಇಲಾಖಾ ಮೂಲಗಳು ತಿಳಿಸಿವೆ.

ಬೀಜ ವಿತರಣೆಗೆ ಆರು ಕೇಂದ್ರಗಳು:

ಬೀಜ ವಿತರಣೆಗೆ ಹರಪನಹಳ್ಳಿ, ಚಿಗಟೇರಿ, ಸಾಸ್ವಿಹಳ್ಳಿ, ತೆಲಿಗಿ, ಹಲುವಾಗಲು, ಅರಸಿಕೇರಿ ಹೀಗೆ ಆರು ರೈತ ಸಂಪರ್ಕ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ತಾಲೂಕಿಗೆ ಬೇಕಾದ ರಸಗೊಬ್ಬರದ ಮಾಹಿತಿಯನ್ನು ಕಂಪನಿಗಳಿಗೆ ನೀಡಿದ್ದೇವೆ. ಮೇ ತಿಂಗಳ ಅಂತ್ಯಕ್ಕೆ ಅಗತ್ಯ ರಸಗೊಬ್ಬರ ಬರಲಿದ್ದು, ವಿತರಣೆ ಆರಂಭಿಸುತ್ತೇವೆ ಎಂದು ಕೃಷಿ ಅಧಿಕಾರಿಗಳು ತಿಳಿಸುತ್ತಾರೆ.

ರಾಣಿಬೆನ್ನೂರಿಗೆ ಹೋಗಿ ರೈತರು ಬಿಡಿ ಬೀಜ ತರುತ್ತಾರೆ ಎಂಬ ಮಾಹಿತಿ ಇದೆ. ಹಾಗೆ ಮಾಡಿದರೆ ಯಾವ ಕಂಪನಿ? ಯಾವ ತಳಿ? ಎನ್ನುವುದು ಗೊತ್ತಾಗುವುದಿಲ್ಲ. ಕಳಪೆಯಾದರೆ ಪರಿಹಾರ ಸಿಗುವುದಿಲ್ಲ. ಯಾವುದೇ ಬೆಳೆ ಬಿತ್ತನೆ ಮಾಡಿದರೂ ರೈತ ಸಂಪರ್ಕ ಕೇಂದ್ರ, ಅಥವಾ ಇತರೆ ಮಾರಾಟ ಮಳಿಗೆಗಳಲ್ಲಿ ಖರೀದಿ ಮಾಡಿ ಬಿಲ್‌ ತೆಗೆದುಕೊಳ್ಳಬೇಕು. ಹೊಸ ತಳಿಗಳನ್ನು ಸ್ವಲ್ಪ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಫಲಿತಾಂಶ ನೋಡಿ ಮುಂದಿನ ಬಾರಿ ಉಪಯೋಗಿಸಬಹುದು ಎನ್ನುತ್ತಾರೆ ಹರಪನಹಳ್ಳಿ ಸಹಾಯಕ ಕೃಷಿ ನಿರ್ದೆಶಕ ವಿ.ಸಿ. ಉಮೇಶ.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ