ಕನ್ನಡಪ್ರಭ ವಾರ್ತೆ ಬೆಳಗಾವಿ
ದೇವಮಾನವರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜೈನ ಧರ್ಮ ಮತ್ತು ಹಿಂದೂ ಧರ್ಮದ ಸಮಗ್ರ ಸಮಾಜದ ಸಂಪರ್ಕ ಸೇತುವಾಗಿದ್ದಾರೆ. ಹಿಂದೂಗಳನ್ನು ಮತ್ತು ಜೈನರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಜೈನರು ಹಾಗೂ ಜೈನಧರ್ಮದ ಬಗ್ಗೆ ಎಂದೂ ಅವಹೇಳನ ಸಲ್ಲದು ಎಂದು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಎಮಿನೆಂಟ್ ಇಂಜನಿಯರ್ ಅವಾರ್ಡ್ ಪುರಸ್ಕೃತರಾದ ಅರುಣ ಯಲಗುದ್ರಿ ಕಿಡಿಕಾರಿದರು.ಶ್ರೀ ಧರ್ಮಸ್ಥಳ ಕ್ಷೇತ್ರದಲ್ಲಿ ಎಲ್ಲ ಜೈನ ಮಠಗಳ ಭಟ್ಟಾರಕರ ನೇತೃತ್ವದಲ್ಲಿ ಆಯೋಜಿಸಿದ್ದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಭಾಗವಹಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಗೌರವ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡು ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಹಾಗೂ ವೈಯಕ್ತಿಕ ತೇಜೋವಧೆಯನ್ನು ಕಠೋರವಾಗಿ ಖಂಡಿಸುತ್ತೇವೆ. ಹಾಗೆಯೇ ಧರ್ಮ ರಕ್ಷಣೆಗಾಗಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರೊಂದಿಗೆ ನಾವಿದ್ದೇವೆ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸರ್ವಧರ್ಮ ಸಮನ್ವಯ ಕೇಂದ್ರ ಧರ್ಮಸ್ಥಳದ ಶೋಭೆ ಮತ್ತು ಕೀರ್ತಿಗೆ ಎಂದೂ ಚ್ಯುತಿಬಾರದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಎಕ್ಸಲೆನ್ಸ್ ಹೆಲ್ತ್‌ಕೇರ್ ಅವಾರ್ಡ್ ಪುರಸ್ಕೃತರಾದ ಡಾ.ಸತೀಶ ಮುಗ್ಗನವರ ಹಾಗೂ ಬೆಂಗಳೂರಿನ ಗುಣಪಾಲ ಜೈನ ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಹಾಗೂ ವೈಯಕ್ತಿಕ ತೇಜೋವಧೆ ವಿರುದ್ಧ ಧರ್ಮ ರಕ್ಷಣೆಗಾಗಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರೊಂದಿಗೆ ನಾವಿದ್ದೇವೆ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸರ್ವಧರ್ಮ ಸಮನ್ವಯ ಕೇಂದ್ರ ಧರ್ಮಸ್ಥಳದ
ಶೋಭೆ ಮತ್ತು ಕೀರ್ತಿಗೆ ಎಂದೂ ಚ್ಯುತಿಬಾರದು.-ಅರುಣ ಯಲಗುದ್ರಿ,
ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಎಮಿನೆಂಟ್ ಇಂಜನಿಯರ್ ಅವಾರ್ಡ್ ಪುರಸ್ಕೃತರು.