ಶಿವಮೊಗ್ಗ: ಸಿಗಂದೂರು ಸೇತುವೆ ಕೇವಲ ತಾಂತ್ರಿಕ ಶಿಲ್ಪವಲ್ಲ, ಹೃದಯದಿಂದ ಹುಟ್ಟಿದ ನಂಬಿಕೆ. ಈ ಸೇತುವೆ ಕೇವಲ ಸಂಪರ್ಕವಲ್ಲ, ಸ್ವಾತಂತ್ರ್ಯದ ಬದುಕಿಗೆ ಬೆಳಕು ಎಂದು ಸಂಸದ ಬಿ.ವೈ.ರಾಘವೇಂದ್ರ ಬಣ್ಣಿಸಿದರು.
ಸಿಗಂದೂರು ಸೇತುವೆ ಉದ್ಘಾಟನೆ ಹಿನ್ನೆಲೆ ಸಾಗರದ ನೆಹರೂ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಪ್ರತಿಯೊಬ್ಬ ರಾಜಕೀಯ ಪ್ರತಿನಿಧಿಯ ಬದುಕಿನಲ್ಲಿ ಕೆಲವೊಂದು ಕ್ಷಣಗಳು ಅಚ್ಚಳಿಯದೆ ನೆನಪಾಗಿ ಉಳಿಯುತ್ತವೆ. ನಮ್ಮ ಪಾಲಿಗೆ ಅಂಬಾರಗೋಡ್ಲು-ಕಳಸವಳ್ಳಿ- ಸಿಗಂದೂರು ಸೇತುವೆ ನಿರ್ಮಾಣ ಅಂತದ್ದೊಂದು ಐತಿಹಾಸಿಕ ಸಾಧನೆಯಾಗಿ ಉಳಿಯಲಿದೆ ಎಂದರಲ್ಲದೆ, ಇದು ಕೇವಲ ತಾಂತ್ರಿಕ ಶಿಲ್ಪವಲ್ಲ, ಹೃದಯದಿಂದ ಹುಟ್ಟಿದ ನಂಬಿಕೆಯಾಗಿದೆ ಎಂದರು.ಆರು ದಶಕಗಳ ಸಮಸ್ಯೆಯನ್ನು ಆರು ವರ್ಷದಲ್ಲಿ ಪೂರ್ಣಗೊಳಿಸಿದ ಕೀರ್ತಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಈ ಪವಿತ್ರವಾದ ಕಾರ್ಯಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ನಾಡಿಗೆ ಬೆಳಕು ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶರಾವತಿ ಮುಳುಗಡೆ ಸಂತ್ರಸ್ತರ ಕೊಡುಗೆ ಅಪಾರ. ದೀಪದ ಬುಡ ಕತ್ತಲ್ಲೂ ಎಂಬ ಮಾತಿನಂತೆ ರಾಜ್ಯಕ್ಕೆ ಬೆಳಕು ಕೊಟ್ಟ ಮುಳುಗಡೆ ಸಂತ್ರಸ್ತರು ಕತ್ತಲಲ್ಲಿದ್ದರು. ಶರಾವತಿ ಹಿನ್ನೀರಿನ ಮುಳುಗಡೆ ಸಂತ್ರಸ್ತರಿಗೆ ಸಾಗರ ಪಟ್ಟಣದ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡು ಮಾಜಿ ಸಿಎಂ ಯಡಿಯೂರಪ್ಪನವರು ಕೇಂದ್ರ ಸಚಿವ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿ ಕೇಬಲ್ ಬ್ರಿಡ್ಜ್ ಮಂಜೂರು ಮಾಡಿಸಿದ್ದಾರೆ. ಇದು ಇಂದು ಲೋಕಾರ್ಪಣೆಗೊಂಡಿದೆ ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ಜೋಷಿ, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಹರತಾಳು ಹಾಲಪ್ಪ, ಟಿ.ಡಿ.ಮೇಘರಾಜ್, ಪ್ರಸನ್ನ ಕೆರೆಕೈ, ಎಸ್.ದತ್ತಾತ್ರಿ, ಹರಿಕೃಷ್ಣ ಇನ್ನಿತರರಿದ್ದರು.
ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ: ಕಾಗೋಡುಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ ಕಾರ್ಯಕ್ರಮ ಸಾಗರದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಶರಾವತಿ ಹಿನ್ನೀರು ಭಾಗದ ಜನರಿಗೆ ಶಾಶ್ವತ ಸಂಪರ್ಕ ಕಲ್ಪಿಸಿರುವುದು ಸಂತೋಷದ ವಿಚಾರವಾಗಿದೆ. ಕೇಂದ್ರ ಸರ್ಕಾರದ ಕೆಲಸಕ್ಕೆ ಸೇತುವೆ ಉದ್ಘಾಟಿಸಿದ ಗಡ್ಕರಿಯವರಿಗೆ ವಿಶೇಷ ವಂದನೆ ಸಲ್ಲಿಸುತ್ತೇನೆ. ದೇವರು ಶಾಶ್ವತ ಪರಿಹಾರ ಕೊಟ್ಟಿದ್ದಾನೆ. ಈ ಒಂದು ಐತಿಹಾಸಿಕ ಅಂಬಾರಗೊಡ್ಲು-ಕಳಸವಳ್ಳಿ ಸಿಗಂದೂರು ಸೇತುವೆಗೆ ಶ್ರೀ ಮಾತಾ ಚೌಡೇಶ್ವರಿ ಸೇತುವೆ ಹೆಸರಿಡುವುದು ಸೂಕ್ತ ಎಂದರು.