ವಚನಕಾರ ಕ್ಷಿತಿಜದ ಉಜ್ವಲ ನಕ್ಷತ್ರ ಅಕ್ಕ: ಪ್ರಾಧ್ಯಾಪಕಿ ಡಾ.ಗಾಯತ್ರಿ

KannadaprabhaNewsNetwork |  
Published : Apr 03, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಅಕ್ಕಮಹಾದೇವಿ ವಚನಕಾರ ಕ್ಷಿತಿಜದ ಉಜ್ವಲ ನಕ್ಷತ್ರ ಎಂದು ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥೆ ಆದ ಡಾ.ಗಾಯತ್ರಿ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಕ್ಕಮಹಾದೇವಿ ವಚನಕಾರ ಕ್ಷಿತಿಜದ ಉಜ್ವಲ ನಕ್ಷತ್ರ ಎಂದು ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥೆ ಆದ ಡಾ.ಗಾಯತ್ರಿ ಬಣ್ಣಿಸಿದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಗುರುವಾರ ಏರ್ಪಡಿಸಿದ್ದ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಭಾಗವಹಿಸಿ ವಿಷಯಾವಲೋಕನ ಮಾಡಿ, ಅಕ್ಕಮಹಾದೇವಿ ಶ್ರೇಷ್ಠ ಅನುಭಾವಿ. ಕನ್ನಡದ ಮೊಟ್ಟಮೊದಲ ಕವಯತ್ರಿ. ಅಷ್ಟೇ ಅಲ್ಲ ಸ್ತ್ರೀ ಕುಲಕ್ಕೆ ಗೌರವ ತಂದುಕೊಡುವ ಕೆಲಸ ಆಕೆಯಿಂದ ನಡೆಯಿತು ಎಂದರು.

ಹನ್ನೆರಡನೇ ಶತಮಾನದ ಆ ಕಾಲದಲ್ಲಿ ಹೆಣ್ಣಿಗೆ ಯಾವ ಸ್ಥಾನಮಾನ ಇತ್ತು ಎನ್ನುವುದ ಊಹಿಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಅಂತಹ ಕಠಿಣ ವ್ಯವಸ್ಥೆಯಲ್ಲಿ ಸ್ತ್ರೀಕುಲದ ಅಸ್ಮಿತೆಯನ್ನು ಉಳಿಸಲು ಆದರ್ಶಕ್ಕಾಗಿ ಒಂದು ವ್ಯವಸ್ಥೆಯನ್ನೇ ಧಿಕ್ಕರಿಸಿ ಬಂದಳು. ಸಾಮಾಜಿಕ ಮತ್ತು ರಾಜಪ್ರಭುತ್ವ ಎರಡನ್ನೂ ವಿರೋಧಿಸಿದ ಅಕ್ಕನ ಇಡೀ ಬದುಕೇ ಹೋರಾಟದ ಹಾದಿಯಾಗಿತ್ತು. ಈ ಹೋರಾಟ ಕೇವಲ ತನಗಾಗಿ ಅಲ್ಲ. ಇಡೀ ಹೆಣ್ಣುಸಂಕುಲಕ್ಕಾಗಿಯೇ ಹೋರಾಟ ಮೀಸಲಾಗಿತ್ತು ಎಂದರು.

12ನೇ ಶತಮಾನದಲ್ಲಿ ಅಕ್ಕಮಹಾದೇವಿ ಮದುವೆಯಾದರೂ ಲೌಕಿಕ ಪ್ರಪಂಚದ ಗೊಡವೆ ಬೇಡ ಎಂದು ಧಿಕ್ಕರಿಸಿ ತನ್ನ ಪತಿ ಚೆನ್ನಮಲ್ಲಿಕಾರ್ಜುನ ಎನ್ನುವ ಪಾರಮಾರ್ಥಿಕ ಗಂಡನನ್ನು ಹುಡುಕುತ್ತ ಕಲ್ಯಾಣದ ಅಣ್ಣ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಪ್ರವೇಶಿಸುತ್ತಾಳೆ. ಅಲ್ಲಿನ ಶರಣತಿಂಥಿಣಿಯೊಳಗೆ ಉತ್ತರವನ್ನು ಯಾವ ರೀತಿ ಕೊಟ್ಟಿರಬಹುದು. ಸನ್ನಿವೇಶ ನೆನಪಿಸಿಕೊಂಡರೆ ಭಯವಾಗುತ್ತದೆ. ಆ ಧೈರ್ಯ ಬರಲು ಅಕ್ಕನಂಥವರಿಗೆ ಮಾತ್ರ ಸಾಧ್ಯ ಎಂದರು.

12ನೇ ಶತಮಾನದಲ್ಲಿ ಇಡೀ ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯ ದೊಡ್ಡ ಕೊಡುಗೆಯನ್ನು ನೀಡಿದೆ. ಬಸವಾದಿ ಶರಣರು ಸಾಮಾಜಿಕ ಆರ್ಥಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಗತಿಯನ್ನು ಸಾಧಿಸುವಲ್ಲಿ ಯಶಸ್ಸು ಕಂಡರು. ಬಸವಣ್ಣನವರ ನೇತೃತ್ವದಲ್ಲಿ ಅಂದಿನ ಹಿರಿಕಿರಿಯ ಶರಣರೆಲ್ಲ ಸೇರಿಕೊಂಡು ಉಜ್ವಲ ಪರಂಪರೆಗೆ ನಾಂದಿ ಹಾಡಿದರು. ಅದರ ಬಳುವಳಿಯೇ ಅಕ್ಕಮಹಾದೇವಿ ಎಂದರು.

ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಜಗತ್ತಿನ ಮೊಟ್ಟಮೊದಲ ಸಂಸತ್ ಅನುಭವ ಮಂಟಪ. ಅಲ್ಲಿಗೆ ಅತ್ಯಂತ ಚಿಕ್ಕವಯಸ್ಸಿನ ಅಕ್ಕಮಹಾದೇವಿ ಬರಲು ಕಾರಣ ಆಕೆಗೆ ದಿವ್ಯಜ್ಞಾನ ಪ್ರಾಪ್ತವಾಗಿತ್ತು. ಆಕೆಯ ಅನೇಕ ವಚನಗಳು ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ದಾರಿದೀಪಗಳಾಗಿವೆ ಎಂದರು.

ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಒಬ್ಬ ಹೆಣ್ಣುಮಗಳು ತನ್ನ ಜೀವನದಲ್ಲಿ ಪರಮಾನಂದ ಇದೆ ಎಂದು ನಡೆದುಕೊಂಡ ವ್ಯಕ್ತಿತ್ವವೇ ಅಕ್ಕಮಹಾದೇವಿ. ಅಕ್ಕ ಪ್ರಕೃತಿ ಧರ್ಮಪಾಲಕಿ. ಇಡೀ ಜಗತ್ತು ಅಕ್ಕನ ವ್ಯಕ್ತಿತ್ವಕ್ಕೆ ಗೌರವ ಕೊಡಬೇಕಿದೆ. ಆದರಣೀಯ ಸ್ಥಾನ ನೀಡಬೇಕಿದೆ. ಅನುಭವ ಮಂಟಪದಲ್ಲಿ ಎದುರಾದ ಪ್ರಶ್ನೆಗಳಿಗೆ ಧೀರೋದಾತ್ತ ಉತ್ತರ ನೀಡುತ್ತ ಸಾಗಿದ ಪರಿ ಊಹೆಗೆ ನಿಲುಕದ್ದು. ಅಕ್ಕನ ಶ್ರೇಷ್ಠ ವ್ಯಕ್ತಿತ್ವ ಮತ್ತೆ ಮತ್ತೆ ಇಂತಹ ಕಾರ್ಯಕ್ರಮಗಳ ಮೂಲಕ ಅನಾವರಣಗೊಳ್ಳಬೇಕಿದೆ ಎಂದರು.

ರಾವಂದೂರು ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ, ಕಲ್ಕೆರೆಯ ಪೂರ್ಣಾನಂದರು, ಹೊಳಲ್ಕೆರೆಯ ತಿಪ್ಪೇರುದ್ರಸ್ವಾಮಿ, ನಾಗೇನಹಳ್ಳಿಯ ಗೋವಿಂದ ಸ್ವಾಮೀಜಿ, ಬಾಲ್ಯವಿವಾಹ ವಿರೋಧಿ ಸಮಿತಿಯ ಅಧ್ಯಕ್ಷೆ ಡಿ.ಎಸ್.ಹಳ್ಳಿ ಕವಿತಾ ಹನುಮಂತರೆಡ್ಡಿ, ರೈತಸಂಘದ ಮುಖಂಡರಾದ ಶಾಂತಮ್ಮ, ಅನ್ನಪೂರ್ಣ ಸಜ್ಜನ್, ಡಾ.ದೊಡ್ಡಮಲ್ಲಯ್ಯ, ಜಿ.ಟಿ ನಂದೀಶ್, ಟಿ.ಪಿ ಜ್ಞಾನಮೂರ್ತಿ, ಬಸವರಾಜ ಕಟ್ಟಿ, ನೀಲಮ್ಮ, ಕವಿ ಗಂಗಾಧರಪ್ಪ, ಕಣಿವೆಮಾರಮ್ಮ ಸಂಘದ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಸಮಾಜಗಳ, ಸಂಘ-ಸಂಸ್ಥೆಗಳ ಅನೇಕ ಪದಾಧಿಕಾರಿಗಳು, ಮಹಿಳಾಪರ ಸಂಘಟನೆಗಳ ಪ್ರತಿನಿಧಿಗಳು ಇದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಅಕ್ಕಮಹಾದೇವಿಯವರ ವಚನ ಪ್ರಾರ್ಥನೆ ಮಾಡಿದರು. ಅಧ್ಯಾಪಕಿ ಡಾ.ಸ್ನೇಹಲತಾ ಸ್ವಾಗತಿಸಿದರು. ಅಧ್ಯಾಪಕಿ ಪೂಜಾ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳ್ಳಕೆರೆ ಅದ್ಧೂರಿ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ
ಸಿಬ್ಬಂದಿ ಜಾಸ್ತಿ ಇದ್ರೂ ಕೆಲಸ ಕಡಿಮೆ ಆಗಿಲ್ಲ: ಬಸವರಾಜು