ಕನ್ನಡಪ್ರಭ ವಾರ್ತೆ ವಿಜಯಪುರ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಜೀವನದ ತತ್ವಗಳಂತೆ ನಡೆದು ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವಕರು ಅವರ ಚಿಂತನೆಗಳನ್ನು ಹಾಗೂ ಅವರ ಬದುಕನ್ನು ಅರಿಯಬೇಕಾಗಿದೆ. ಎಂದೆಂದಿಗೂ ಅವರ ಕಾರ್ಯ ಸಾಧನೆಯ ಮೇರು ಆದರ್ಶ ವ್ಯಕ್ತಿತ್ವ, ಅವರ ಚಿಂತನೆ, ನಂಬಿದ್ದ ತತ್ವಾದರ್ಶಗಳು ದೇಶದ ನಾಗರಿಕರಿಗೆ ಅಚ್ಚಳಿಯದೇ ನೆನಪಿನಲ್ಲುಳಿದಿವೆ. ಗಾಂಧೀಜಿಯವರ ಸತ್ಯ, ಅಹಿಂಸೆ ಮೂಲಕ ಕೈಗೊಂಡ ಸತ್ಯಾಗ್ರಹ ಬಲಿಷ್ಠ ಮಾನವ ಸಂಪನ್ಮೂಲ ಹೊಂದಿದ್ದ ಬ್ರಿಟೀಷ್ ಸಾಮ್ರಾಜ್ಯವೇ ತಲೆಬಾಗಿತ್ತು ಎಂದರು.
ಲಾಲ್ ಬಹದ್ದೂರ ಶಾಸ್ತ್ರೀಜಿ ನೀಡಿದ ಜೈ ಜೈವಾನ್, ಜೈ ಕಿಸಾನ್ ಘೋಷವಾಕ್ಯ ರೈತ ಹಾಗೂ ಸೈನಿಕರ ಬಗೆಗಿನ ಅಪಾರ ಕಾಳಜಿಯ ದ್ಯೋತಕವಾಗಿದೆ. ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜೀವನಾದರ್ಶಗಳು ನಮ್ಮೆಲ್ಲರ ಬದುಕಿಗೆ ಸ್ಪೂರ್ತಿ ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿದರು, ಸಂಗಮೇಶ ಮೇತ್ರಿ, ಕವಿತಾ ಕಲ್ಯಾಣಪ್ಪಗೋಳ ಉಪನ್ಯಾಸ ನೀಡಿದರು.
ನಗರದ ಸೈನಿಕ ಶಾಲೆ ಬಳಿಯ ಲಾಲ್ ಬಹಾದ್ದೂರ ಶಾಸ್ತ್ರೀಜಿ ಪುತ್ಥಳಿಗೆ ಹಾಗೂ ನಗರದ ಗಾಂಧಿವೃತ್ತದಲ್ಲಿನ ಗಾಂಧಿ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಗರದ ಜಲನಗರ ರಸ್ತೆಯ ಬುದ್ಧ ವಿಹಾರದಿಂದ ಗಾಂಧಿ ಭವನದ ವರೆಗೆ ಸ್ವಚ್ಛತಾ ನಡಿಗೆ ಜಾಥಾ ಮೂಲಕ ಸ್ವಚ್ಛತೆಯ ಮಹತ್ವ ಸಾರಲಾಯಿತು.ಮಹಾತ್ಮ ಗಾಂಧೀಜಿ ಅವರ 156ನೇ ಜಯಂತಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀ ಅವರ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಚರಕ ನೇಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲಾ ಮಟ್ಟದ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ-ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.ಎಸಿ ಗುರುನಾಥ ದಡ್ಡೆ, ವಿವಿಧ ಇಲಾಖೆಗಳ ಅಧಿಕಾರಿಗಳಾದ ರಾಜಶೇಖರ ಡಂಬಳ, ಬದ್ರುದ್ದಿನ್ ಸೌದಾಗರ, ಚಂದ್ರಶೇಖರ ಹೊಸಮನಿ, ಸಿ.ಬಿ.ಕುಂಬಾರ, ಮಹೇಶ ಪೋತದಾರ, ಪ್ರಶಾಂತ ಚನಗೊಂಡ, ಸಂತೋಷ ಭೋವಿ, ಮುಖಂಡರಾದ ಅಡಿವೆಪ್ಪ ಸಾಲಗಲ, ವಿದ್ಯಾವತಿ ಅಂಕಲಗಿ, ಪೀಟರ್ ಅಲೆಕ್ಸಾಂಡರ್, ಸುರೇಶ ಘೋಣಸಗಿ, ಬಾಬುಗೌಡ ಪಾಟೀಲ, ನಿಲೇಶ ಬೇನಾಳ, ನಾಗರಾಜ ಲಂಬು ಸೇರಿ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.