ಬಸ್ ನಿಲ್ದಾಣ ದ್ವಾರವೇ ಕಸದ ತೊಟ್ಟಿ

KannadaprabhaNewsNetwork | Published : Oct 25, 2024 12:58 AM

ಸಾರಾಂಶ

ದಿನಂಪ್ರತಿ ಈ ಭಾಗದಲ್ಲಿರುವ ಬಾರ್ ಮತ್ತು ಹೋಟೆಲ್‌ನ ಸಿಬ್ಬಂದಿ ಇಲ್ಲಿಯೇ ಬಂದು ಕಸ ಒಗೆದು ಸಂಪೂರ್ಣ ದುರ್ಣಾತಕ್ಕೆ ಕಾರಣವಾಗಿದ್ದಲ್ಲದೆ, ಅದೇ ಕಸದಲ್ಲಿಯೇ ಬಸ್‌ಗಳ ಸಂಚಾರವಾಗತ್ತವೆ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಳೆದ ತಿಂಗಳು ರಬಕವಿ-ಬನಹಟ್ಟಿ ಬಸ್ ನಿಲ್ದಾಣ ಉದ್ಘಾಟನೆ ಸಂದರ್ಭ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿ, ಈ ಭಾಗದ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನೂತನ ಬಸ್‌ಗಳನ್ನು ಓಡಿಸುವದರ ಜೊತೆಗೆ ನಿಲ್ದಾಣದೊಳಗಿನ ಮೂಲಭೂತ ಸೌಕರ್ಯಗಳಿಗೆ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕೇವಲ ಭರವಸೆಯಾಗಿಯೇ ಉಳಿದಿರುವುದು ಈ ಭಾಗದ ಜನರಲ್ಲಿ ಬೇಸರ ತರುವಲ್ಲಿ ಕಾರಣವಾಗಿದೆ.

ನೇಕಾರಿಕೆ ಉದ್ಯಮ ಹೊಂದಿರುವ ತಾಲೂಕು ಕೇಂದ್ರ ಪ್ರದೇಶವಾಗಿರುವ ರಬಕವಿ-ಬನಹಟ್ಟಿಗೆ ಹಲವಾರು ಬಸ್‌ಗಳು ಸಂಚರಿಸುವಂತೆ ಆಗ್ರಹಿಸಿದ್ದರು. ಅಲ್ಲದೆ ಬೆಂಗಳೂರಿಗೆ ಹವಾನಿಯಂತ್ರಿತ ಅಥವಾ ಸುಖಾಸೀನ ಬಸ್ ವ್ಯವಸ್ಥೆ ಕಲ್ಪಿಸುವಂತೆಯೂ ಬೇಡಿಕೆಯಿಟ್ಟಿದ್ದರು. ಒಂದು ವಾರದೊಳಗಾಗಿ ಈ ಕಾರ್ಯ ನಡೆಸುವ ಭರವಸೆ ಹಾಗೇ ಉಳಿದಿದೆ.

ಬಸ್ ನಿಲ್ದಾಣ ದ್ವಾರವೇ ಕಸದ ಕೊಟ್ಟಿಗೆ:

ಬಸ್ ಸಂಚಾರವಾಗುವ ದ್ವಾರವೇ ಕಸದ ಕೊಟ್ಟಿಗೆಯಾಗಿದ್ದು, ಸ್ವಚ್ಛತೆಯೆಂಬುದು ಸವಾಲಾಗಿದೆ. ದಿನಂಪ್ರತಿ ಈ ಭಾಗದಲ್ಲಿರುವ ಬಾರ್ ಮತ್ತು ಹೋಟೆಲ್‌ನ ಸಿಬ್ಬಂದಿ ಇಲ್ಲಿಯೇ ಬಂದು ಕಸ ಒಗೆದು ಸಂಪೂರ್ಣ ದುರ್ಣಾತಕ್ಕೆ ಕಾರಣವಾಗಿದ್ದಲ್ಲದೆ, ಅದೇ ಕಸದಲ್ಲಿಯೇ ಬಸ್‌ಗಳ ಸಂಚಾರವಾಗತ್ತವೆ. ಇದಕ್ಕೆ ನಗರಸಭೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದೆ ಕಾಟಾಚಾರಕ್ಕೆ ಆಗಾಗ್ಗೆ ಕಸ ವಿಲೇವಾರಿ ಮಾಡುತ್ತಿರುವುದು ಸೋಜಿಗದ ಸಂಗತಿ.

ನ.೮ರಂದು ಪ್ರತಿಭಟನೆಗೆ ನಿರ್ಧಾರ:

ತಾಲೂಕು ಕೇಂದ್ರವಾಗಿರುವ ರಬಕವಿ-ಬನಹಟ್ಟಿಗೆ ಸಮರ್ಪಕ ಬಸ್ ಸೌಕರ್ಯ ಹಾಗೂ ಬಸ್ ನಿಲ್ದಾಣದೊಳಗಿನ ಮೂಲಭೂತ ಸೌಕರ್ಯ ವೈಫಲ್ಯ ಖಂಡಿಸಿ ನ.೮ರಂದು ರಬಕವಿ-ಬನಹಟ್ಟಿ ಅಭಿವೃದ್ಧಿ ಸಮಿತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಸಮಿತಿ ಅಧ್ಯಕ್ಷ ಮುರಳಿಧರ ಕಾಬರಾ ತಿಳಿಸಿದ್ದಾರೆ.

ತಾಲೂಕು ಕೇಂದ್ರವಾಗಿ ೧೫ ವರ್ಷಗಳು ಉರುಳಿದರೂ ಬಸ್ ಘಟಕ ಸ್ಥಾಪನೆಯಾಗಿಲ್ಲ. ಜಮಖಂಡಿ ಘಟಕದಿಂದ ರಬಕವಿ-ಬನಹಟ್ಟಿ ತಾಲೂಕಿಗೆ ಅನ್ಯಾಯವಾಗುತ್ತಿದ್ದು, ಒಂದೇ ಒಂದು ಬಸ್ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ರಾತ್ರಿ ಹೊತ್ತು ಜಮಖಂಡಿಯಿಂದ ಬನಹಟ್ಟಿಗೆ ತೆರಳಲು ಬಸ್ ವ್ಯವಸ್ಥೆಯಿಲ್ಲ. ಹೀಗೆ ಹಲವಾರು ಸಮಸ್ಯೆಗಳನ್ನು ಹೊತ್ತು ನಿಂತಿರುವ ಅವಳಿ ಪಟ್ಟಣಕ್ಕೆ ಪಾರದರ್ಶಕ ನ್ಯಾಯ ಒದಗಿಸಬೇಕೆಂದು ನ.೮ ರಂದು ಪ್ರತಿಭಟನೆ ನಡೆಸಲಾಗುವದೆಂದು ಕಾಬರಾ ತಿಳಿಸಿದ್ದಾರೆ.

Share this article