ಕಸಾಪ - ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಜಾನಪದ ರಸಪ್ರಶ್ನೆ ಸ್ಪರ್ಧೆ
ಗಾದೆ, ಒಗಟುಗಳಿಂದ ಕನ್ನಡ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ತಿಳಿಸಿದರು.
ಗುರುವಾರ ಸಿಂಸೆಯ ವಿಶ್ವ ಕರ್ಮ ಸಮುದಾಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನಪದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಆಲದಮರದಂತೆ ಬೆಳೆದು ನಿಂತಿದ್ದು ಇದಕ್ಕೆ ಜಾನಪದವೂ ಸೇರಿದೆ. ಜಾನಪದ ಬಾಯಿಂದ ಬಾಯಿಗೆ ಹರಡುವ ಕಲೆಯಾಗಿದೆ. ಹಿಂದೆ ಪೂರ್ವಿಕರು ತಮ್ಮ ಮಾತು ಗಳಲ್ಲಿ ಗಾದೆ ಬಳಸುತ್ತಿದ್ದರು.ಈಗ ಆಧುನಿಕ ಕಾಲ ಘಟ್ಟದಲ್ಲಿ ಗಾದೆ, ಒಗಟು ಮರೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಗ್ರಾಮೀಣ ಸೊಗಡು ಇರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಟಿವಿ ಮೊಬೈಲ್ ಬಂದ ನಂತರ ಜನರು ಪೇಸ್ ಬುಕ್, ವಾಟ್ಸಾಪ್ ನಲ್ಲಿ ಮುಳುಗಿ ಹೋಗಿದ್ದರಿಂದ ಜಾನಪದ ಮರೆ ಯಾಗುತ್ತಿದೆ.ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ ಉಳಿಸುವ ಜೊತೆಗೆ ಜಾನಪದ, ತತ್ವ ಪದ ಸಹ ಉಳಿಸಲು ಶ್ರಮಿಸುತ್ತಿದೆ. ಕನ್ನಡ ರಾಜ್ಯೋತ್ಸವದಲ್ಲಿ ಪ್ರತಿಯೊಬ್ಬ ಕನ್ನಡಿಗರು ಪಾಲ್ಗೊಂಡು ಕನ್ನಡ ರಥದ ತೇರು ಎಳೆಯಬೇಕು. ಇಂದು ನಡೆಯುವ ಒಗಟು, ಗಾದೆಗಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಸಾರ್ವಜನಿಕರಿಗಾಗಿ ಗಾದೆ, ಒಗಟು ಬಿಡಿಸುವ ಸ್ಪರ್ಧೆ ನಡೆಸಿಕೊಟ್ಟರು. ವಿಜೇತರಿಗೆ ಬಹುಮಾನ ನೀಡಲಾಯಿತು.