ಕನ್ನಡಪ್ರಭ ವಾರ್ತೆ ಅಫಜಲ್ಪುರ
ಸುಗ್ಗಿಕಾಲದ ಮಾಗಿ ಹಬ್ಬ ಸಂಕ್ರಮಣ ಸಂಭ್ರಮ ಎಲ್ಲಡೆ ಮನೆ ಮಾಡಿದೆ. ಪಟ್ಟಣದ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ಮಾರುಕಟ್ಟೆಯಲ್ಲಿ ಖರೀದಿದಾರರಿಂದ ತುಂಬಿ ತುಳುಕುತ್ತಿದ್ದವು.
ಭಾನುವಾರ, ಹೆಣ್ಣು ಮಕ್ಕಳ ಬೋಗಿ ಹಬ್ಬವಾಗಿದ್ದು ಮತ್ತು ಸೋಮವಾರ ಮಕರ ಸಂಕ್ರಮಣ ನಡೆಯಲಿದೆ. ನೇಸರನು ತನ್ನ ಪಥವ ಬದಲಿಸುವ ಸಂಕ್ರಮಣ ದಿನದಂದು ಜನತೆ ತಮ್ಮ ಜೀವನ ಶೈಲಿಯನ್ನಷ್ಟೇ ಅಲ್ಲ, ಆಹಾರ ಪದ್ಧತಿಯಲ್ಲೂ ಸ್ವಲ್ಪ ಮಟ್ಟಿಗೆ ಬದಾಲಾವಣೆ ಬಯಸುವುದು ಈ ಹಬ್ಬದ ವಿಶೇಷವಾಗಿದೆ.
ಅಲ್ಲದೆ ಇದು ಜನರ ಪಾಲಿಗೆ ಸುಗ್ಗಿ ಹಬ್ಬ. ಸಂಕ್ರಮಣ ಹಬ್ಬ ಗ್ರಾಮೀಣ ಭಾಗದ ರೈತಾಪಿ ಕುಟುಂಬಗಳು ಅತ್ಯಂತ ಶ್ರದ್ಧೆ, ಭಕ್ತಿ ಭಾವಗಳೊಂದಿಗೆ ಆಚರಿಸುವುದು ವಾಡಿಕೆ. ಸುಗ್ಗಿಯ ಕಾಲವಾದ ಈ ಸಮಯದಲ್ಲಿ ಹೊಲದಲ್ಲಿ ಹುಲುಸಾಗಿ ಬೆಳೆದು ನಿಂತ ಬೆಳೆಗಳಿಗೆ ಮತ್ತು ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸುವುದು ಮತ್ತು ಪುಣ್ಯ ಸ್ನಾನ ಮಾಡುವುದು ನಡೆದುಕೊಂಡ ಪದ್ಧತಿಯಾಗಿದೆ.
ಈ ಹಬ್ಬಕ್ಕಾಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎಲ್ಲ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿ ಹೋಗಿದ್ದವು. ವಿಶೇಷವಾಗಿ ಈ ಹಬ್ಬಕ್ಕಾಗಿ ತಯಾರಿಸುವ ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಬಿಳಿ ಜೋಳದ ರೊಟ್ಟಿ, ಬರ್ತ್, ಹಿಂಡಿ ಪಲ್ಲೆ, ಪುಂಡಿ ಪಲ್ಲೆ, ನುಚ್ಚಿನಿ ಪುಂಡಿ ಪಲ್ಲೆ, ಬಜ್ಜಿ ಪಲ್ಲೆ,ಎಣ್ಣೆ ಬದನೆಕಾಯಿ,ಶೇಂಗಾ ಚಟ್ನಿ, ಜೋಳದ ಬಾನಾ, ನುಚ್ಚು, ಮೊಸರನ್ನ, ಚಿತ್ರಾನ್ನ ಇನ್ನಿತರ ತರಹೇವಾರಿ ಖಾಧ್ಯಗಳ ತಯಾರಿಗೆ ವಸ್ತುಗಳ ಖರೀದಿ ಜೋರಾಗಿತ್ತು.
ಮಾರುಕಟ್ಟೆಯ ಜೊತೆಯಲ್ಲಿ ಬಟ್ಟೆ, ಕಿರಾಣಿ, ಕಡಲೆಕಾಯಿ, ಬಾರಿಕಾಯಿ, ಪೇರಲ, ಖರ್ಜೂರ ಮೊದಲಾದ ಹಣ್ಣುಗಳ ಬೇಡಿಕೆ ಹೆಚ್ಚಿತ್ತು. ಸಂಕ್ರಮಣ ದಿನದಂದು ಒಬ್ಬರಿಗೊಬ್ಬರು ಎಳ್ಳು ಬೆಲ್ಲ ಹಂಚುವ ಮೂಲಕ ದುರ್ಗುಣವ ದೂರ ತಳ್ಳಿ ಹೊಸತನವ ಸೃಷ್ಠಿಸಲಿ ಎಂಬ ಸಂಕೇತ ಮೆರೆಯುತ್ತಾರೆ.