ಶಿಗ್ಗಾಂವಿ: ಸುಮಾರು ೨೫ ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದೆ ಇಲ್ಲಿಯ ಕಾರ್ಯಕರ್ತರು ಸಂಕಷ್ಟ ಅನುಭವಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ತಮ್ಮ ಬಹುದಿನದ ಕನಸನ್ನು ಈಡೇರಿಸಿಕೊಳ್ಳಲು ಈ ಉಪ ಚುನಾವಣೆ ಸುವರ್ಣ ಅವಕಾಶ ಎಂದು ಅರಣ್ಯ, ಜೀವಶಾಸ್ತ್ರ, ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ಮಯೂರ್ ಜೈಕುಮಾರ ಮಾತನಾಡಿ, ಸಿದ್ದರಾಮಯ್ಯ ಡಿಕೆಶಿ ನೇತೃತ್ವದಲ್ಲಿ ರಾಜ್ಯದಲ್ಲಿ ಭ್ರಷ್ಟ ಸರ್ಕಾರವನ್ನು ಹೊಡೆದು ಹಾಕಿದ್ದೇವೆ. ಈ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರ ನಾಯಕತ್ವದಲ್ಲಿ ಈ ಕ್ಷೇತ್ರದ ಅಭ್ಯರ್ಥಿಯನ್ನು ವಿಧಾನಸಭೆಗೆ ಕರೆದುಕೊಂಡು ಹೋಗುತ್ತೇವೆ. ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವದಲ್ಲಿರುವುದು ನಮಗೆ ಶಕ್ತಿ ತುಂಬಿದೆ. ಸರ್ಕಾರದ ಸಾಧನೆಗಳನ್ನು ಸಾಮಾನ್ಯರಿಗೆ ಮುಟ್ಟಿಸುವ ಮೂಲಕ ಕಾರ್ಯಕರ್ತರು ಮತದಾರರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕರಾದ ರುದ್ರಪ್ಪ ಲಮಾಣಿ , ಶ್ರೀನಿವಾಸ ಮಾನೆ, ಸಂಜೀವ ನೀರಲಗಿ, ವಿನೋದ ಅಸೂಟಿ, ಆನಂದ ಗಡ್ಡದೇವರಮಠ, ಬಿ.ಸಿ. ಪಾಟೀಲ, ಎಂಜೆ ಮುಲ್ಲಾ, ಆಕಾಂಕ್ಷಿಗಳು ಸೇರಿದಂತೆ ಇತರರು ಇದ್ದರು. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸುವ ಶಕ್ತಿ ಯಾವ ಪಕ್ಷಕ್ಕೂ ಇಲ್ಲ. ಆದರೆ ನಮ್ಮ ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತು ಒಡಕಿನಿಂದಾಗಿ ನಾವು ಇಲ್ಲಿ ಸೋಲುತ್ತಾ ಬಂದಿದ್ದೇವೆ. ಪಕ್ಷದ ಕಾರ್ಯಕರ್ತರು ಮತ್ತು ಆಕಾಂಕ್ಷಿಗಳು ವಿರೋಧ ಪಕ್ಷಕ್ಕೆ ನಮ್ಮೊಳಗಿನ ಭಿನ್ನಾಭಿಪ್ರಾಯ ತೋರಿಸದಂತೆ ನಡೆದುಕೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.ವರಿಷ್ಠರು ಅವಕಾಶ ಕೊಟ್ಟರೆ ನನ್ನ ರಾಜಕೀಯ ಭವಿಷ್ಯವನ್ನು ಮುಗಿಸಲು ಪ್ರಯತ್ನಿಸಿದ ಬೊಮ್ಮಾಯಿಯವರ ಕ್ಷೇತ್ರದಲ್ಲಿ ಅವರ ಅಭ್ಯರ್ಥಿಯ ವಿರುದ್ಧ ಗೆದ್ದು ಬೀಗುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿ ಸೋಲಿಸಲು ಕಷ್ಟಪಟ್ಟು ಕೆಲಸ ಮಾಡಿದ್ದು, ಬೊಮ್ಮಾಯಿಯವರಿಗೆ ಅಲ್ಪ ಮತದ ಮುನ್ನಡೆ ಸಿಗುವಂತಾಯಿತು ಎಂದು ಮಾಜಿ ಸಚಿವ ಆರ್. ಶಂಕರ ಹೇಳಿದರು.
ಖಾದ್ರಿ ಅಭಿಮಾನಿಗಳು ಸಭೆಯ ಆವರಣದ ಮುಂಭಾಗದಲ್ಲಿ ಪ್ರತ್ಯೇಕವಾದ ಶಾಮಿಯಾನ ಹಾಕಿಸಿ ಶಕ್ತಿ ಪ್ರದರ್ಶನ ಮಾಡಿದರು.ಕಾರ್ಯಕರ್ತರು, ಅಭ್ಯರ್ಥಿಗಳನ್ನು ವೈಯಕ್ತಿವಾಗಿ ಮಾತುಕತೆಗೆ ಕರೆದಾಗ ಗೊಂದಲ ವಾತಾವರಣ ಸೃಷ್ಟಿಯಾಗಿ, ಹಿರಿಯರು ಸಭೆಯನ್ನು ಮೊಟಕುಗೊಳಿಸಿ ಹೊರನಡೆಯುತ್ತಿರುವಾಗ ಕಾರ್ಯಕರ್ತರು ಅವರ ನಾಯಕರ ವಿರುದ್ಧ ಪ್ರತಿಭಟನೆಗೆ ಮುಂದಾದ ಘಟನೆ ಜರುಗಿತು.