ಒಳಮೀಸಲಾತಿಗೆ ಸಂಪುಟ ಸಮ್ಮತಿ

KannadaprabhaNewsNetwork |  
Published : Oct 29, 2024, 12:50 AM ISTUpdated : Oct 29, 2024, 12:51 AM IST
ವಿಧಾನಸೌಧ | Kannada Prabha

ಸಾರಾಂಶ

ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಅಗತ್ಯ ದತ್ತಾಂಶ ಸಂಗ್ರಹಣೆ ಕುರಿತು ವರದಿ ನೀಡಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಲು ಮಹತ್ವದ ತೀರ್ಮಾನ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಅಗತ್ಯ ದತ್ತಾಂಶ ಸಂಗ್ರಹಣೆ ಕುರಿತು ವರದಿ ನೀಡಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಲು ಮಹತ್ವದ ತೀರ್ಮಾನ ಕೈಗೊಂಡಿದೆ.

ಅಲ್ಲದೆ, ಆಯೋಗವು 3 ತಿಂಗಳ ಒಳಗಾಗಿ ‘ಎಂಪಿರಿಕಲ್‌ ಡಾಟಾ’ ವರದಿ (ಪ್ರಾಯೋಗಿಕ ದತ್ತಾಂಶ ವರದಿ) ನೀಡಬೇಕು. ವರದಿ ಬರುವವರೆಗೆ ಇನ್ನು ಮುಂದೆ ಹೊಸದಾಗಿ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಬಾರದು ಎಂದು ಹೊಸ ನೇಮಕಾತಿಗಳಿಗೆ ತಡೆ ನೀಡಿದೆ.

ತನ್ಮೂಲಕ 3 ದಶಕಗಳ ಒಳ ಮೀಸಲಾತಿ ಹೋರಾಟಕ್ಕೆ ಕೊನೆಗೂ ಸ್ಪಂದನೆ ವ್ಯಕ್ತವಾಗಿದ್ದು, ಒಳ ಮೀಸಲಾತಿ ಜಾರಿ ನಿರ್ಣಾಯಕ ಘಟ್ಟ ತಲುಪಿದಂತಾಗಿದೆ.

ಸಂಪುಟದಲ್ಲಿ ಗಹನ ಚರ್ಚೆ:

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಈ ವೇಳೆ ಪರಿಶಿಷ್ಟ ಜಾತಿಯ ಎಡ ಹಾಗೂ ಬಲಗೈ ಸಮುದಾಯದ ಸಚಿವರು, ಭೋವಿ ಸಮುದಾಯದ ಸಚಿವರು ಸೂಕ್ತ ದತ್ತಾಂಶ ಆಧರಿಸಿ ಒಳ ಮೀಸಲಾತಿ ಜಾರಿಗೆ ಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದತ್ತಾಂಶ ಸಂಗ್ರಹದ ಬಗ್ಗೆ ನಿರ್ಧಾರಕ್ಕೆ ಏಕ ಸದಸ್ಯ ಆಯೋಗ ರಚನೆಗೆ ತೀರ್ಮಾನ ಮಾಡಲಾಯಿತು ಎಂದು ತಿಳಿದುಬಂದಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌, ‘ಇಡೀ ದೇಶದಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದು, ರಾಜ್ಯಗಳಿಗೆ ಅಧಿಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಎಸ್ಸಿ ಒಳ ಮೀಸಲಾತಿ ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ. ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗ ರಚಿಸಿ ಅವರಿಂದ ದತ್ತಾಂಶ ಪಡೆದು ಮುಂದಿನ ನಿರ್ಧಾರ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

‘ಎಂಪಿರಿಕಲ್‌ ಡೇಟಾ ಎಂಬುದು ಎಲ್ಲಿ ಲಭ್ಯವಿದೆ? ಹೇಗೆ ಸಂಗ್ರಹಿಸಬೇಕು ಎಂಬುದನ್ನು ಆಯೋಗಕ್ಕೆ ಬಿಡುತ್ತೇವೆ. ಅವರ ವರದಿ ಆಧರಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದರು.ಹೊಸ ನೇಮಕಾತಿಗೆ ತಡೆ:

ಆಯೋಗವು 3 ತಿಂಗಳಲ್ಲಿ ವರದಿ ನೀಡಬೇಕು. ಆಯೋಗ ವರದಿ ನೀಡುವವರೆಗೆ ಈಗ ನೇಮಕಾತಿ ಅಧಿಸೂಚನೆ ಹೊರಡಿಸಿ ಪ್ರಕ್ರಿಯೆ ನಡೆಯುತ್ತಿರುವ ನೇಮಕಾತಿಗಳನ್ನು ಬಿಟ್ಟು ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬಾರದು ಎಂದು ಸ್ಪಷ್ಟವಾಗಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ಎಲ್ಲರೂ ಒಳ ಮೀಸಲಾತಿ ಪರ:ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್‌ ಎಸ್ಸಿ-ಎಸ್ಟಿ ಸಮಾವೇಶದಲ್ಲೇ ನಾವು ಒಳ ಮೀಸಲಾತಿ ಜಾರಿ ಭರವಸೆ ನೀಡಿದ್ದೇವೆ. ಪಕ್ಷ ಹಾಗೂ ಸರ್ಕಾರ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದೆ. ಈ ಹಿಂದಿನ ಸರ್ಕಾರ ಅವೈಜ್ಞಾನಿಕವಾಗಿ ಜಾರಿಗೆ ಮುಂದಾಗಿತ್ತು. ನಾವು ಆಯೋಗದ ವರದಿ ಆಧರಿಸಿ ಯಾವ ದತ್ತಾಂಶದ ಆಧಾರದ ಮೇಲೆ ಮಾಡಬೇಕು ಎಂಬುದನ್ನು ಪರಿಶೀಲಿಸಿ ಮಾಡುತ್ತೇವೆ.

ದಲಿತ ಎಡ, ಬಲ, ಬೋವಿ, ಲಂಬಾಣಿ ಯಾವ ನಾಯಕರಲ್ಲೂ ಅಸಮಾಧಾನ ಇಲ್ಲ. ಈ ಮೊದಲೇ ಅವರೆಲ್ಲರೂ ಕುಳಿತು ಒಮ್ಮತವಾಗಿ ಚರ್ಚೆ ಮಾಡಿ ನಿರ್ಧಾರ ಮಾಡಿದ್ದಾರೆ. ನಿಖರ ದತ್ತಾಂಶ ಆಧರಿಸಿ ಮಾಡಲು ಎಲ್ಲರೂ ಒಪ್ಪಿದ್ದೇವೆ ಎಂದರು.ನಮಗೆ ಸಿಟ್ಟಿಲ್ಲ, ಹೋರಾಟಕ್ಕೆ ಫಲ ಸಿಕ್ಕಿದೆ- ಮುನಿಯಪ್ಪ:

ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಸಚಿವ ಸಂಪುಟ ನಿರ್ಧಾರದಿಂದ ನಮ್ಮ 35 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಆಯೋಗ ರಚನೆ ಬಗ್ಗೆ ನಮಗೆ ಯಾವುದೇ ಸಿಟ್ಟಿಲ್ಲ. 3 ತಿಂಗಳ ಸಮಯದಲ್ಲಿ ಆಯೋಗಕ್ಕೆ ಬೇಕಾದ ಮಾಹಿತಿ ಒದಗಿಸುವ ಪ್ರಯತ್ನವನ್ನೂ ನಾವೇ ಮಾಡುತ್ತೇವೆ. ಸಂಘ ಸಂಸ್ಥೆಗಳು ವಿನಾಕಾರಣ ಸರ್ಕಾರದ ಮೇಲೆ ದೋಷಾರೋಪಣೆ ಮಾಡುವುದು ಬೇಡ. 35 ವರ್ಷ ಕಾದಿದ್ದೇವೆ 3 ತಿಂಗಳು ಕಾಲಾವಕಾಶ ನೀಡಿ ಎಂದು ಹೇಳಿದರು.

ಸಚಿವರಾದ ಪ್ರಿಯಾಂಕ್‌ ಖರ್ಗೆ, ಆರ್.ಬಿ. ತಿಮ್ಮಾಪುರ ಸೇರಿದಂತೆ ಹಲವರು ಹಾಜರಿದ್ದರು.

-ಬಾಕ್ಸ್...

ಎಂಪಿರಿಕಲ್‌ ವರದಿ ಬಗ್ಗೆ ಸ್ಪಷ್ಟನೆ ನೀಡದ ಸಚಿವರು:

ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಎಂಪಿರಿಕಲ್‌ ಡೇಟಾ (ಪ್ರಾಯೋಗಿಕ ದತ್ತಾಂಶ) ಆಧರಿಸಿಯೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಹೇಳಿದೆ. ಹೀಗಾಗಿ ಎಂಪಿರಿಕಲ್‌ ಡೇಟಾಗಾಗಿ ಆಯೋಗ ರಚಿಸಿದ್ದೇವೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು. ಎಂಪಿರಿಕಲ್‌ ಡೇಟಾ ಎಂದರೇನು? ಎಲ್ಲಿಂದ ಪಡೆಯುತ್ತೀರಿ? ಸದಾಶಿವ ಆಯೋಗದಿಂದ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿಲ್ಲ.

ಬದಲಿಗೆ ‘ಸದಾಶಿವ ಆಯೋಗದ ವರದಿಯನ್ನು 2022ರಲ್ಲೇ ಬಿಜೆಪಿ ಸರ್ಕಾರ ತಿರಸ್ಕಾರ ಮಾಡಿದೆ. ಇನ್ನು 2011 ಜನಗಣತಿ ವರದಿಯಲ್ಲಿ ಪರಿಶಿಷ್ಟ ಜಾತಿಯಲ್ಲಿನ ಒಳ ಪಂಗಡಗಳ ಮಾಹಿತಿಯೇ ಇಲ್ಲ. ಹೀಗಾಗಿ ಎಂಪಿರಿಕಲ್‌ ಡೇಟಾ ಪಡೆಯುವ ಬಗ್ಗೆ ಆಯೋಗದಿಂದ ವರದಿ ಪಡೆಯುತ್ತೇವೆ’ ಎಂದರು.

‘ಹಾಗಾದರೆ ಜಾತಿಜನಗಣತಿ ವರದಿಗೆ ಕಾಯುತ್ತೀರಾ? ಅಥವಾ ನೂತನ ಜನಗಣತಿ ವರದಿ ಬರುವವರೆಗೂ ಅನುಷ್ಠಾನ ಮಾಡಲ್ಲವೇ?’ ಎಂಬ ಪ್ರಶ್ನೆಗೆ, ‘ಇದು ಕುಂಟು ನೆಪ ಹೇಳುವ ತೀರ್ಮಾನ ಅಲ್ಲ. ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಆಯೋಗಕ್ಕೆ ನಿಯಮಾವಳಿ (ಟರ್ಮ್ಸ್‌ ಆಫ್‌ ರೆಫರೆನ್ಸ್) ನೀಡುತ್ತೇವೆ’ ಎಂದು ಹೇಳಿದರು.

ಏನಿದು ಎಂಪಿರಿಕಲ್‌ ಡೇಟಾ?

‘ವಸ್ತುನಿಷ್ಠ ಸಾಕ್ಷ್ಯಾಧಾರ ಆಧರಿಸಿ ಸಿದ್ಧಪಡಿಸಿರುವ ದತ್ತಾಂಶ. ಇದು ಮರು ಪರಿಶೀಲನೆ ಅಥವಾ ಪರೀಕ್ಷೆಗೆ ಒಳಪಡಿಸಲು ಯೋಗ್ಯವಾಗಿರುವಷ್ಟು ವೈಜ್ಞಾನಿಕವಾಗಿರಬೇಕು. ಅಂತಹ ದತ್ತಾಂಶವನ್ನು ಆಧರಿಸಿ ಮಾತ್ರ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಅರ್ಥದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ಇದೆ. ಹೀಗಾಗಿ ಯಾವ ರೀತಿಯ ದತ್ತಾಂಶ ಸೂಕ್ತ ಎಂಬ ಬಗ್ಗೆ ಆಯೋಗದಿಂದ ವರದಿ ಪಡೆಯಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ