ಶ್ರೀಶೈಲ ಮಠದ
ಕುಂದಾನಗರಿ ಖ್ಯಾತಿಯ ಬೆಳಗಾವಿ ಈಗ ಮಾದಕ ವಸ್ತುಗಳ ಕೇಂದ್ರ ಎಂಬ ಅಪಖ್ಯಾತಿಗೆ ಗುರಿಯಾಗುತ್ತಿರುವ ಆರೋಪ ಕೇಳಿಬರುತ್ತಿದೆ. ನಗರ ಮಾತ್ರವಲ್ಲ, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಿರುವ ಅಕ್ರಮ ಗಾಂಜಾ ಘಾಟು ಯುವಜನರ ಭವಿಷ್ಯವನ್ನೇ ಪ್ರಶ್ನೆಯ ಚಿಹ್ನೆಯಾಗಿಸಿದೆ. ನಿತ್ಯವೂ ಪೊಲೀಸ್ ದಾಳಿಗಳು, ಬಂಧನಗಳು ಮತ್ತು ಗಾಂಜಾ ಜಪ್ತಿ ಕಾರ್ಯಾಚರಣೆ ನಡೆಯುತ್ತಿದ್ದರೂ, ಜಾಲ ಮಾತ್ರ ನಿರಂತರವಾಗಿರುವುದು ಪೊಲೀಸರ ಆತಂಕಕ್ಕೂ ಕಾರಣವಾಗಿದೆ. ಮಾತ್ರವಲ್ಲ, ಇದೊಂದು ದೊಡ್ಡ ಸವಾಲು ಕೂಡ ಆಗಿದೆ.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ನಡುವೆ ಸಂಪರ್ಕ ಸೇತುವೆಯಂತೆ ಇರುವ ಬೆಳಗಾವಿ, ಮಾದಕ ವಸ್ತು ಸಾಗಾಟಕ್ಕೆ ಸುಲಭ ಮಾರ್ಗವಾಯಿತೆ ಎಂಬ ಪ್ರಶ್ನೆ ಕೂಡ ಮೂಡಿದೆ. ಗೋವಾ ಮತ್ತು ಮಹಾರಾಷ್ಟ್ರದಿಂದ ಗಾಂಜಾವನ್ನು ತರಿಸಿ ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂಬುದು ಗುಪ್ತಚರ ಮಾಹಿತಿಯಿಂದ ಬಹಿರಂಗವಾಗುತ್ತಿದೆ. ಆದರೆ, ಈ ಜಾಲವನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.ಬಸ್ ಮತ್ತು ರೈಲು ನಿಲ್ದಾಣಗಳ ಸುತ್ತಮುತ್ತ, ಲಾಡ್ಜ್‌ಗಳು, ಪಾರ್ಕ್‌ಗಳು, ಕೆಲವು ಬಡಾವಣೆಗಳು ಹಾಗೂ ಹೆದ್ದಾರಿ ಸಂಪರ್ಕ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ದೂರುಗಳು ಹೊಸದಲ್ಲ. ಸಾರ್ವಜನಿಕ ಸ್ಥಳಗಳಲ್ಲೇ ನಿರ್ಭೀತಿಯಿಂದ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆ ವ್ಯವಸ್ಥೆಯ ವೈಫಲ್ಯವನ್ನೇ ಬಹಿರಂಗಪಡಿಸುತ್ತಿದೆ. ಎಲ್ಲರಿಗೂ ಗೊತ್ತಿರುವ ಸ್ಥಳಗಳಲ್ಲಿ ಗಾಂಜಾ ಮಾರಾಟ ನಡೆಯುತ್ತಿದ್ದರೂ ಏಕೆ ಶಾಶ್ವತ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಪ್ರತಿಧ್ವನಿಸುತ್ತಿದೆ.
ಎಜುಕೇಶನ್ ಹಬ್ ಆಗಿರುವ ಬೆಳಗಾವಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಕರು ನೆಲೆಸಿದ್ದಾರೆ. ಇವರೇ ಗಾಂಜಾ ಜಾಲದ ಪ್ರಮುಖ ಟಾರ್ಗೆಟ್ ಆಗಿರುವುದು ಆತಂಕಕಾರಿ ಬೆಳವಣಿಗೆ. ಮನರಂಜನೆ, ಸ್ನೇಹ ಮತ್ತು ಸುಲಭ ಹಣದ ಆಮಿಷ ತೋರಿಸಿ ಯುವಕರನ್ನು ಮೊದಲು ಸೇವನೆಗೆ, ನಂತರ ಮಾರಾಟ ಜಾಲಕ್ಕೆ ಬಳಸಲಾಗುತ್ತಿದೆ. ಚಟಕ್ಕೆ ಸಿಲುಕಿದ ಯುವಕರು ವಿದ್ಯಾಭ್ಯಾಸವನ್ನು ಮಧ್ಯದಲ್ಲಿ ಬಿಟ್ಟು ಅಪರಾಧ ಲೋಕದತ್ತ ಜಾರುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ.ಇತ್ತೀಚಿನ ಕೆಲ ಗಲಾಟೆ, ಹಲ್ಲೆ ಮತ್ತು ಅಪರಾಧ ಪ್ರಕರಣಗಳ ಹಿಂದೆ ಮಾದಕ ವಸ್ತುವಿನ ಪಾತ್ರವಿದೆ ಎಂಬುದು ಪೊಲೀಸರ ತನಿಖೆಯಿಂದಲೂ ಸ್ಪಷ್ಟವಾಗುತ್ತಿದೆ. ಮಾನಸಿಕ ಅಸ್ಥಿರತೆ, ಹಿಂಸಾತ್ಮಕ ಪ್ರವೃತ್ತಿ ಹಾಗೂ ಸಮಾಜವಿರೋಧಿ ಚಟುವಟಿಕೆಗಳಿಗೆ ಗಾಂಜಾ ನೇರ ಕಾರಣವಾಗುತ್ತಿದೆ ಎಂಬ ಆರೋಪಗಳು ಗಂಭೀರವಾಗಿವೆ.
ಗಾಂಜಾ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಬೆಳಗಾವಿ ನಗರದಲ್ಲಿ ನಿತ್ಯವೂ ಪೊಲೀಸರು ಕನಿಷ್ಠ ನಾಲ್ಕೈದು ಆರೋಪಿಗಳನ್ನು ಬಂಧಿಸುವುದು, ಗಾಂಜಾ ಜಪ್ತಿ ಮಾಡುವುದು ಸಾಮಾನ್ಯವಾಗಿದೆ. ಆದರೆ, ಪೊಲೀಸರ ಕ್ರಮ ಚಿಲ್ಲರೆ ಮಾರಾಟಗಾರರ ಬಂಧನಕ್ಕಷ್ಟೇ ಸೀಮಿತವಾಗುತ್ತಿದೆಯೇ? ಜಾಲದ ಕಿಂಗ್‌ಪಿನ್‌ಗಳು ಯಾರು? ಯಾವಾಗ ಸಿಕ್ಕಿಬೀಳುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಬೆಳಗಾವಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 210 ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ನಿತ್ಯವೂ ಪ್ರಕರಣಗಳನ್ನು ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಆದಾಗ್ಯೂ, ಅಕ್ರಮ ಗಾಂಜಾ ಮಾರಾಟ ಮತ್ತು ಸೇವನೆಗೆ ಕಡಿವಾಣ ಬಿದ್ದಿಲ್ಲ. ಇನ್ನು, ಇತ್ತೀಚೆಗೆ ಸರ್ಕಾರಿ ವೈದ್ಯರೊಬ್ಬರು ತಮ್ಮ ಮನೆಯಲ್ಲೇ ಗಾಂಜಾ ಸಂಗ್ರಹಿಸಿ, ಸೇವನೆ ಮಾಡುತ್ತಿರುವ ವಿಚಾರವೂ ಬೆಚ್ಚಿಬೀಳಿಸುವಂತಿದೆ.-----------
ಬಾಕ್ಸ್........ಗಾಂಜಾದ ವಿರುದ್ಧ ಪೊಲೀಸರ ಸಮರ
ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮತ್ತು ಸೇವನೆಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಜಿಲ್ಲೆಯ 34 ಪೊಲೀಸ್ ಠಾಣೆಗಳಿಗೆ ತಲಾ 40ರಿಂದ 50ರಂತೆ ಒಟ್ಟು 1,550 ಗಾಂಜಾ ಸೇವನೆ ಪತ್ತೆ ಪರೀಕ್ಷಾ ಕಿಟ್‌ಗಳನ್ನು ವಿತರಿಸಲಾಗಿದೆ. ಈ ಕಿಟ್‌ಗಳ ಮೂಲಕ ಶಂಕಿತ ವ್ಯಕ್ತಿಗಳ ಗಾಂಜಾ ಸೇವನೆಯನ್ನು ತಕ್ಷಣವೇ ಪತ್ತೆಹಚ್ಚಲು ಸಹಕಾರಿಯಾಗಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ಅಲ್ಲದೇ, ಪೊಲೀಸರು ಗಸ್ತು ತೀವ್ರಗೊಳಿಸಿದ್ದು, ಗುಪ್ತಚರ ಜಾಲವನ್ನು ಬಲಪಡಿಸುವ ಜೊತೆಗೆ ಗಾಂಜಾ ಸಾಗಾಟ ಮತ್ತು ಮಾರಾಟ ಜಾಲದ ಬೇರು ಕತ್ತರಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಬೆಳಗಾವಿಯನ್ನು ಸಂಪೂರ್ಣವಾಗಿ ಗಾಂಜಾ ಮುಕ್ತ ಜಿಲ್ಲೆ ಮಾಡುವುದಾಗಿ ಅವರು ತಿಳಿಸಿದ್ದಾರೆ.------
ಕೋಟ್......ಜಿಲ್ಲೆಯಲ್ಲಿ ಗಾಂಜಾ ಸಾಗಾಟ ಮತ್ತು ಸೇವನೆಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಗಾಂಜಾ ಮಾರಾಟ ಅಥವಾ ಸೇವನೆ ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಬೆಳಗಾವಿ ಜಿಲ್ಲೆಯನ್ನು ವ್ಯಸನ ಮುಕ್ತವಾಗಿಸಲು ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು.
- ಕೆ.ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ