ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಸುಬ್ರಹ್ಮಣ್ಯದ ಕುಮಾರಧಾರಾ ನದಿಯ ನೆರೆ ನೀರಿನಲ್ಲಿ ಆನೆ ಮೃತದೇಹ ತೇಲಿಬಂದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.ನಿರಂತರ ಮಳೆಯಿಂದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಈ ನಿಟ್ಟಿನಲ್ಲಿ ನೀರಿನ ಮಟ್ಟದ ವೀಕ್ಷಣೆಗೆ ಸೋಮವಾರ ತಡರಾತ್ರಿ ಸ್ಥಳೀಯರಾದ ಮನ್ಮಥ, ಬಟ್ಟೋಡಿ ಮತ್ತಿತರರು ತೆರಳಿದ್ದ ವೇಳೆ ಕುಮಾರಧಾರ ನದಿಯ ನೆರೆ ನೀರಿನಲ್ಲಿ ಏನೋ ತೇಲಿಬರುತ್ತಿರುವುದು ಕಂಡುಬಂದಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಆನೆ ಮೃತದೇಹ ಎಂಬುದು ಗೊತ್ತಾಗಿದೆ. ಆನೆ ಕೆಲ ದಿನಗಳ ಹಿಂದೆಯೇ ಎಲ್ಲೋ ಸತ್ತು ನದಿಯಲ್ಲಿ ತೇಲಿ ಬಂದಿರುವ ಶಂಕೆ ವ್ಯಕ್ತವಾಗಿದೆ. ನೆರೆಯಲ್ಲಿ ಆನೆ ಮೃತದೇಹ ಕೊಚ್ಚಿ ಹೋಗಿದ್ದು, ಮತ್ತೆ ಪತ್ತೆಯಾಗಿಲ್ಲ.* ಹುಡುಕಾಟದ ಪ್ರಯತ್ನ:ಆನೆ ಮೃತದೇಹ ನೆರೆ ನೀರಿನಲ್ಲಿ ತೇಲಿ ಬಂದು ಕೊಚ್ಚಿ ಹೋಗಿರುವ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ಹೋಗಿದ್ದು, ಈ ನಿಟ್ಟಿನಲ್ಲಿ ಆನೆ ಮೃತದೇಹವನ್ನು ಅರಣ್ಯ ಇಲಾಖೆ ವತಿಯಿಂದ ಪತ್ತೆ ಹಚ್ಚುವ ಕಾರ್ಯಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಹುಡುಕಾಟಕ್ಕೆ ಹಿನ್ನಡೆಯಾಗಿದೆ. ಆನೆ ಮೃತದೇಹ ಪತ್ತೆಯಾದ ಪ್ರದೇಶ ಹಾಗೂ ಕೆಳ ಭಾಗದಲ್ಲೂ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ನೀರಿನ ಮಟ್ಟ ಇಳಿಕೆ ಆದ ಬಳಿಕ ಆನೆ ಮೃತದೇಹ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
-------------ಭಾರಿ ಮಳೆ: ಮೈದುಂಬಿ ಹರಿಯುತ್ತಿದೆ ಕುಮಾರಧಾರ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಮುಂಜಾನೆ ಕೂಡ ಮಳೆ ಬಿರುಸುಗೊಂಡಿದ್ದು, ಕುಮಾರಧಾರ ತುಂಬಿ ಹರಿಯುತ್ತಿದೆ.ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಎಡೆ ಬಿಡದೆ ಮಳೆ ಸುರಿಯಲಾರಂಬಿಸಿದೆ. ಘಟ್ಟ ಭಾಗಗಳಾದ ಬಿಸಿಲೆ, ಸೋಮವಾರಪೇಟೆ ಹಾಗೂ ಮಲ್ಲಹಳ್ಳಿ ಫಾಲ್ಸ್ ಮತ್ತು ಕುಮಾರ ಪರ್ವತ ಭಾಗದಲ್ಲಿ ಕೂಡ ಭಾರಿ ಮಳೆ ಸುರಿದ ಪರಿಣಾಮ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ನೀರಿನ ಹರಿವು ಹೆಚ್ಚಳದಿಂದ ನದಿಯ ಕಿಂಡಿ ಅಣೆಕಟ್ಟು ಮುಳುಗಡೆಗೊಂಡು ಸ್ನಾಘಟ್ಟ ಕೂಡ ಸಂಪೂರ್ಣ ಮುಳುಗಡೆಯಾಗಿದೆ.
ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಳಿತವಾಗುತ್ತಿರುವ ಹಿನ್ನೆಲೆ ಕೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ತೀರ್ಥ ಸ್ನಾನ ನೆರವೇರಿಸಲು ಡ್ರಮ್ ಅಳವಡಿಸಿ ವ್ಯವಸ್ಥೆ ಮಾಡಲಾಗಿದೆ. ಕುಮಾರಧಾರ ನದಿಯ ಉಪನದಿ ದರ್ಪಣ ತೀರ್ಥ ಕೂಡ ತುಂಬಿ ಹರಿಯುತ್ತಿದೆ. ಸೋಮವಾರ ರಾತ್ರಿ ಕುಮಾರಧಾರ ನದಿಯ ಪಕ್ಕದ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಗೆ ಕೂಡ ನೀರು ಆವರಿಸಿ ಮಂಗಳವಾರ ಮಂಜಾನೆ ವರೆಗೆ ಸಂಪರ್ಕ ಕಳೆದುಗೊಂಡಿತ್ತು. ರಸ್ತೆಗೆ ನೀರು ಆವರಿಸಿ ಜಲಾವೃತಗೊಂಡಿದ್ದ ಹಿನ್ನೆಲೆ ಬ್ಯಾರಿಕೆಡ್ ಅಳವಡಿಸಿ ಮುಂಜಾಗೃತ ಕ್ರಮವಾಗಿ ಸಂಪೂರ್ಣ ಸಂಚಾರ ಬಂದ್ ಮಾಡಲಾಗಿತ್ತು.* ದಿನಪೂರ್ತಿ ಮಳೆ:ಸುಬ್ರಹ್ಮಣ್ಯ ಸುತ್ತಮುತ್ತಲ ಪರಿಸರದ ನದಿ, ತೊರೆ, ಹಳ್ಳ, ಕೊಳ್ಳಗಳು ಕೂಡಾ ಮೈದುಂಬಿ ಹರಿಯುತ್ತಿದ್ದು ನದಿ ಪಾತ್ರದ ಕೃಷಿ ತೋಟಗಳಿಗೂ ನೀರು ಆವರಿಸಿದೆ. ಇತರ ಗ್ರಾಮೀಣ ಭಾಗದಲ್ಲೂ ಕೂಡ ದಿನಪೂರ್ತಿ ಮಳೆಯಾಗಿದೆ. ಕೊಲ್ಲಮೊಗ್ರು, ಹರಿಹರ, ಕಲ್ಮಕಾರು, ಬಾಳುಗೋಡು, ಬಿಳಿನೆಲೆ, ನೆಟ್ಟಣ, ಏನೆಕಲ್, ಪಂಜ, ಬಳ್ಪ, ಗುತ್ತಿಗಾರು, ಕಲ್ಮಡ್ಕ, ಕರಿಕ್ಕಳ, ಪಂಬೆತ್ತಾಡಿ, ಎಣ್ಮೂರು, ನಿಂತಿಕಲ್, ಅಲೆಕ್ಕಾಡಿಗಳಲ್ಲಿ ಕೂಡಾ ಮಳೆಯ ಪ್ರಮಾಣ ಸೋಮವಾರ ಮತ್ತು ಮಂಗಳವಾರ ಮುಂಜಾನೆಯಿಂದ ಅಧಿಕಗೊಂಡಿದೆ.