ಅಶೋಕ ಡಿ.ಸೊರಟೂರ ಲಕ್ಷ್ಮೇಶ್ವರ
ಇಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಧ್ವನಿ ಎತ್ತಿದವರ ಧ್ವನಿ ಅಡಗಿಸಲು ಪ್ರಯತ್ನ ಮಾಡಿದ್ದಲ್ಲದೇ, ಅಬಕಾರಿ ಇಲಾಖೆ ಅಧಿಕಾರಿಗಳೇ ಅಡ್ಡ ನಿಂತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಗದಗ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.
ಎಫ್ಐಆರ್ ದಾಖಲು: ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂ. 13 ರಂದು ಎಫ್ಐಆರ್ ದಾಖಲಾಗಿದ್ದು, (ಸಂಖ್ಯೆ 9224, 2024) ಕಲಂ 143, 147, 341, 353, 504, 506 ಅಡಿಯಲ್ಲಿ 13 ಜನರು ಹಾಗೂ ಇನ್ನಿತರರು ಎಂದು ಪ್ರಕರಣ ದಾಖಲಿಸಲಾಗಿದೆ. ಸಧ್ಯಕ್ಕೆ ಈ ಪ್ರಕರಣದಲ್ಲಿ ಕೇವಲ 13 ಜನರ ಹೆಸರು ಮಾತ್ರ ಉಲ್ಲೇಖಿಸಲಾಗಿದೆ. ಇನ್ನಿತರರು ಎಂದರೆ ಅಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇನ್ನುಳಿದ ಮಹಿಳೆಯರನ್ನು ಸೇರಿಸುವ ಹುನ್ನಾರ ಅಡಗಿದೆ ಎನ್ನುತ್ತಾರೆ ಪ್ರಕರಣ ದಾಖಲಾಗಿರುವ ವ್ಯಕ್ತಿಗಳು.ಯಾಕೆ ಹೀಗೆ: ಲಕ್ಷ್ಮೇಶ್ವರ ಪಟ್ಟಣದಲ್ಲಿ ಅತ್ಯಂತ ಪ್ರಭಾವಿಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿತ್ತು. ಇದನ್ನು ಗಮನಿಸಿರುವ ಅಲ್ಲಿನ ನಿವಾಸಿಗಳು ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆ ಭಾಗದಲ್ಲಿ ಮದ್ಯ ಮಾರಾಟದಿಂದ ಮಹಿಳೆಯರಿಗೆ ಸೇರಿದಂತೆ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯ ಕುರಿತು ಪ್ರತಿಭಟನೆ ಮಾಡಿದ್ದರು. ಆದರೆ ವಿಚಿತ್ರವೆಂದರೆ ಸಾಮಾಜಿಕ ಹಿತಕ್ಕಾಗಿ ಹೋರಾಟ ಮಾಡಿದವರ ಧ್ವನಿ ಅಡಿಸುವುದು ಹಾಗೂ ಮುಂದೆ ಯಾರೂ ಬಾರ್, ಮದ್ಯದ ಅಂಗಡಿಗಳ ವಿರುದ್ಧ ಹೋರಾಟ ಮಾಡಬಾರದು ಎನ್ನುವ ಕಾರಣಕ್ಕಾಗಿ ಈ ರೀತಿಯ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಮದ್ಯ ಮಾರಾಟ ನಿಂತಿಲ್ಲ: ತಾಲೂಕಿನ ಯತ್ತಿನಹಳ್ಳಿ, ಯಲ್ಲಾಪೂರ, ಗೊಜನೂರ, ಮಾಡಳ್ಳಿ, ಸೂರಣಗಿ, ಪು.ಬಡ್ನಿ, ಬಟ್ಟೂರ, ಹುಲ್ಲೂರು, ಹರದಗಟ್ಟಿ, ಬಾಲೆಹೊಸೂರು, ಯಳವತ್ತಿ ಗೋನಾಳ, ಉಂಡೇನಹಳ್ಳಿ, ದೊಡ್ಡೂರ ಸೇರಿದಂತೆ ಬಹುತೇಕ ಗ್ರಾಮದದಲ್ಲಿ ಮದ್ಯ ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಗ್ರಾಮದ ಮಹಿಳೆಯರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರೂ ಅಕ್ರಮ ಮದ್ಯ ಮಾರಾಟ ನಿಂತಿಲ್ಲ ಎಂಬುದು ಕಟು ಸತ್ಯವಾಗಿದೆ.