ನೌಕರರ ಚುನಾವಣೆ ಹಲ್ಲೆ ಪ್ರಕರಣ, ಜೀವ ಭಯ ಹುಟ್ಟಿಸುತ್ತಿದೆ: ರಾಜೇಂದ್ರಕುಮಾರ ಗಂದಗೆ

KannadaprabhaNewsNetwork | Published : Oct 30, 2024 12:30 AM

ಸಾರಾಂಶ

ನಾಮಪತ್ರ ಸಲ್ಲಿಸಲು ಬರುವ ನಮ್ಮ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಇನ್ನು, ನನಗೇನಾದರೂ ಅದಕ್ಕೆ ರಾಜಶೇಖರ ಬಿರಾದಾರ ಮತ್ತು ಸೋಮನಾಥ ಬಿರಾದಾರ ಚಿದ್ರಿ ಅವರೇ ನೇರ ಹೊಣೆ ಎಂದು ರಾಜೇಂದ್ರಕುಮಾರ ಗಂದಗೆ ಆರೋಪಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ನಾಮಪತ್ರ ಸಲ್ಲಿಸಲು ಬರುವ ನಮ್ಮ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಹೊರಗಡೆ ಓಡಾಡಲೂ ನಮಗೆ ಭಯವಾಗುತ್ತಿದೆ. ನನಗೇನಾದರೂ ಅದಕ್ಕೆ ರಾಜಶೇಖರ ಬಿರಾದಾರ ಮತ್ತು ಸೋಮನಾಥ ಬಿರಾದಾರ ಚಿದ್ರಿ ಅವರೇ ನೇರ ಹೊಣೆ ಎಂದು ಹಾಲಿ ಜಿಲ್ಲಾಧ್ಯಕ್ಷರೂ ಆದ ರಾಜೇಂದ್ರಕುಮಾರ ಗಂದಗೆ ಆರೋಪಿಸಿದರು

ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅ.28ರ ಸೋಮವಾರ ರಾತ್ರಿ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹಾಗೂ ಸೋಮನಾಥ ಬಿರಾದಾರ ಈ ಇಬ್ಬರ ಬಣಗಳ ನಡುವೆ ಮಾರಾಮಾರಿ ನಡೆದಿರುವ ಕುರಿತಾಗಿ ಸ್ಪಷ್ಟನೆ ನೀಡಿ, ಸೋಮನಾಥ ಬಿರಾದಾರ ಕಡೆಯವರಿಗೆ ನಾವು ಹಲ್ಲೆ ಮಾಡಿಲ್ಲ. ಅದು ಸುಳ್ಳು ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ನಮಗೆ ಜೀವಭಯ ಇರುವುದರಿಂದ ಪೊಲೀಸ್ ಅಧೀಕ್ಷಕರು ಸೂಕ್ತ ಭದ್ರತೆ ಒದಗಿಸಬೇಕೆಂದು ಕೋರಿದರು.

ನಮಗೆ ಚುನಾವಣೆ ನಡೆಸುವುದೇ ಒಂದು ದೊಡ್ಡ ತಲೆನೋವಾಗಿದೆ. ಸರ್ಕಾರಿ ನೌಕರರ ಚುನಾವಣೆಯಲ್ಲಿ ಈ ರೀತಿ ಗೂಂಡಾಗಿರಿ ನಡೆದರೆ ಬೇರೆ ಚುನಾವಣೆಗಳಿಗೂ ನಮ್ಮ ಚುನಾವಣೆಗೂ ಯಾವ ವ್ಯತ್ಯಾಸವಿರುತ್ತದೆ ಎಂದು ಪ್ರಶ್ನೆ ಮಾಡಿದರಲ್ಲದೆ ಜಿಲ್ಲೆಯಲ್ಲಿ 15 ಸಾವಿರ ಸರ್ಕಾರಿ ನೌಕರರಿದ್ದಾರೆ ಅವರೆಲ್ಲರ ಪ್ರತಿನಿಧಿಯಾಗಿ ಅವರಿಗೆ ರಕ್ಷಣೆ ನೀಡುವ ಕೆಲಸ ನಮ್ಮದಾಗಿದೆ. ಆದರೆ ಇಂದು ನಮಗೇ ರಕ್ಷಣೆ ಇಲ್ಲವೆಂದ ಮೇಲೆ ಹೇಗೆ ಎಂದು ಗಂದಗೆ ಆತಂಕ ವ್ಯಕ್ತಪಡಿಸಿದರು.

ಎಲ್ಲರ ಹೆಸರುಗಳೂ ಚುನಾವಣಾ ಕರಡು ಮತದಾನ ಪಟ್ಟಿಯಲ್ಲಿವೆ ಎಂದು ತಿಳಿಸಿದ ಅವರು, ಕೆಲವರು ಸಂಘ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರಿಂದ ಅವರ ಹೆಸರು ಗಳನ್ನು ಕೈಬಿಡಲಾಗಿದೆ. ಇನ್ನೂ ಕೆಲವರ ಹೆಸರುಗಳನ್ನು ನೋಂದಣಿ ಶುಲ್ಕ ಭರಿಸದೇ ಇದ್ದುದರಿಂದ ಕೈಬಿಡಲಾಗಿದೆ. ಉದ್ದೇಶಪೂರ್ವಕವಾಗಿ ನಾವು ಯಾರ ಹೆಸರನ್ನೂ ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿ ಬಿಡುಗಡೆ ಮಾಡುವಲ್ಲಿ ವಿಳಂಬ ನೀತಿ ನಾವು ಅನುಸರಿಸಿಲ್ಲ. ರಾಜ್ಯ ಸಂಘದಿಂದ ನಮಗೆ ಪಟ್ಟಿ ಕಳುಹಿಸಲು ವಿಳಂಬವಾಗಿದ್ದರಿಂದ ಜಿಲ್ಲೆಯಲ್ಲೂ ಪಟ್ಟಿ ನೀಡಲು ತಡವಾಗಿದೆ ಎಂದರಲ್ಲದೆ, ಶೇ.99ರಷ್ಟು ನೌಕರರ ಹೆಸರು ಮತದಾರರ ಪಟ್ಟಿಯಲ್ಲಿವೆ ಎಂದು ರಾಜೇಂದ್ರಕುಮಾರ ಗಂದಗೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಬಸವರಾಜ ಜಕ್ಕಾ ಇದ್ದರು.

Share this article