ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳುನಾಡಿಗೆ ನೀರು ಹರಿಸುವ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶದ ವಿರುದ್ಧ ವಿಜಯಸೇನೆ ಸಂಘಟನೆಯಿಂದ ಗುರುವಾರ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯ ಕಾರ್ಯಕರ್ತರ ದೃಷ್ಟಿ ಗುರುಶ್ರೀ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಜನನಾಯಗನ್ ವಿರುದ್ಧ ನೆಟ್ಟಿತು. ವಿಜಯಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ದೀಪಕ್ ನೇತೃತ್ವದಲ್ಲಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ ಕಾರ್ಯಕರ್ತರು ತಮಿಳುನಾಡು ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದರು. ಚಿತ್ರಪ್ರದರ್ಶನ ಸ್ಥಗಿತಗೊಳಿಸುವಂತೆ ಚಿತ್ರಮಂದಿರದ ಮುಂದೆ ಹಾಕಿದ್ದ ಪೋಸ್ಟರ್‌ನ್ನು ಹರಿದುಹಾಕಿದರು.
ಸಂಕಷ್ಟ ಕಾಲದಲ್ಲಿ ಕಾವೇರಿ ವಿಷಯವಾಗಿ ಸೌಹಾರ್ದ ನಡೆ ಅನುಸರಿಸದೆ ನೀರಿನ ವಿಚಾರದಲ್ಲಿ ತಮಿಳುನಾಡು ಸಿಎಂ ವಿಜಯ್ ರಾಜಕೀಯ ನಡೆ ಅನುಸರಿಸುತ್ತಿದ್ದಾರೆ. ಮಳೆ ಕೊರತೆಯಿಂದ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳದೆ ನೀರಿಗೆ ಬೇಡಿಕೆ ಇಡುತ್ತಿರುವುದು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ನಮ್ಮ ಕಷ್ಟಗಳಿಗೆ ವಿಜಯ್ ಸ್ಪಂದಿಸದಿದ್ದಾಗ ನಾವೇಕೆ ಅವರ ಚಿತ್ರಗಳಿಗೆ ಪ್ರೋತ್ಸಾಹ ನೀಡಬೇಕು. ಕೂಡಲೇ ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.ಚಿತ್ರ ಮಂದಿರಕ್ಕೆ ಮುತ್ತಿಗೆ ಹಾಕಿದ್ದರಿಂದ ಆತಂಕಕ್ಕೊಳಗಾದ ವ್ಯವಸ್ಥಾಪಕರು ಪ್ರತಿಭಟನಾಕಾರರ ಬಳಿಗೆ ಆಗಮಿಸಿ ಮಾತುಕತೆ ನಡೆಸಿದರು. ಗಲಾಟೆ, ಗದ್ದಲ ಮಾಡದಂತೆ ಮನವಿ ಮಾಡಿದರು. ವಿಜಯ್ ಸೇನೆ ಸಂಘಟನೆಯ ದೀಪಕ್ ಅವರು ಕೂಡಲೇ ಜನನಾಯಗನ್ ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕು. ಮುಂದೆ ಚಿತ್ರವನ್ನು ಪ್ರದರ್ಶಿಸದಂತೆ ಒತ್ತಾಯಿಸಿದರು. ಆಗ ವ್ಯವಸ್ಥಾಪಕರು ಚಿತ್ರ ಅರ್ಧ ಮುಗಿದಿದೆ. ಈ ಪ್ರದರ್ಶನ ಮುಗಿದ ನಂತರ ಚಿತ್ರ ಪ್ರದರ್ಶಿಸುವುದಿಲ್ಲವೆಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಅಲ್ಲಿಂದ ಹೊರನಡೆದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ನಮ್ಮ ಜನರು, ರೈತರನ್ನು ಬಿಟ್ಟು ತಮಿಳುನಾಡು ಮೆಚ್ಚಿಸುವ ಕೆಲಸ ಮಾಡಬೇಡಿ. ನಮ್ಮಲ್ಲಿ ಕುಡಿಯುವ ನೀರಿಲ್ಲ, ಅವರು ಬೆಳೆಗೆ ನೀರು ಕೇಳುತ್ತಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಗೆ ಡಿ.ಕೆ.ಶಿವಕುಮಾರ್ ಮಣಿಯಬಾರದು. ಕಾನೂನು ಸಂಕಷ್ಟ ಎದುರಾದರೂ ರೈತರ ಹಿತ ಕಾಪಾಡುವುದು ಮುಖ್ಯ ಧ್ಯೇಯವಾಗಬೇಕು ಎಂದರು.